ಸಾರಾಂಶ
ತಾಲೂಕಿನಾದ್ಯಂತ ಮಳೆ ಇಲ್ಲದೆ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ, ಬೆಳೆಗಳು ಒಣಗುತ್ತಾ ಬಂದಿದ್ದವು. ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಶೇ.80ಕ್ಕೂ ಹೆಚ್ಚು ಬೆಳೆ ಒಣಗಿದೆ ಎಂದು ವರದಿ ನೀಡಿದ್ದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ತಾಲೂಕಿನಾದ್ಯಂತ ಮಳೆ ಇಲ್ಲದೆ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ, ಬೆಳೆಗಳು ಒಣಗುತ್ತಾ ಬಂದಿದ್ದವು. ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಶೇ.80ಕ್ಕೂ ಹೆಚ್ಚು ಬೆಳೆ ಒಣಗಿದೆ ಎಂದು ವರದಿ ನೀಡಿದ್ದರು.ಇಂತಹ ಸಂದಿಗ್ಧ ವೇಳೆ ಶುಕ್ರವಾರ ತಡರಾತ್ರಿ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕೆಲೆವೆಡೆ ಮನೆಗಳು ಬಿದ್ದು, ಜಮೀನಿನ ಬೆಳೆಯಲ್ಲಿ ನೀರು ನಿಂತಿದೆ. ಶುಕ್ರವಾರ ರಾತ್ರಿ ನಾಯಕನಹಟ್ಟಿ -129.6, ಚಳ್ಳಕೆರೆ- 123.00, ತಳಕು- 93.04 ದೇವರಮರಿಕುಂಟೆ- 42.04, ಪರಶುರಾಮಪುರ- 39.06, ಬಿದ್ದು ಒಟ್ಟು 426.18, ಮಿಮೀ. ಮಳೆಯಾಗಿದೆ.
ಚಳ್ಳಕೆರೆ ನಗರದ ಪಾವಗಡ ರಸ್ತೆಯ ಹಳ್ಳ ತುಂಬಿ ಹರಿದು ಕೆಲವು ಗಂಟೆಗಳ ಕಾಲ ವಾಹನಗಳ ಸಂಚಾರ ನಿಂತಿತ್ತು. ನಗರದ ತ್ಯಾಗರಾಜ ನಗರ, ಅಂಬೇಡ್ಕರ್ ನಗರ, ರಹೀಂನಗರ, ಕಾಟಪ್ಪನಹಟ್ಟಿ ಮುಂತಾದ ಕಡೆಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿ ಅವಾಂತರ ಉಂಟು ಮಾಡಿತ್ತು. ಎಲ್ಲಾ ಕೆರೆಗಳಲ್ಲೂ ನೀರಿನ ಪ್ರಮಾಣ ಹೆಚ್ಚಿದೆ.ತ್ಯಾಗರಾಜ ನಗರ ಹಳೇ ಮಯೂರ ಬೇಕರಿ ಬಳಿ ಪಗಡಲಬಂಡೆ ನಾಗೇಂದ್ರಪ್ಪ, ಶೋಭಾ, ಚಿರಂಜೀವಿ, ಶಿವಕುಮಾರ್, ನಾಗವೇಣಿ, ನೇತ್ರಮ್ಮ, ಪ್ರವೀಣ, ಶಾಂತಕುಮಾರ್ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜನರ ನಿದ್ದೆ ಗೆಡಿಸಿತು. ಮಳೆಯ ನೀರನ್ನು ಪ್ರಯಾಸದಿಂದಲೇ ಹೊರಹಾಕಿದರು. ಪೌರಾಯುಕ್ತ ಜಗರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ತಳಕು ಹೋಬಳಿಯ ಗಿಡ್ಡಾಪುರ ಗ್ರಾಮದಲ್ಲಿ ಲಕ್ಷ್ಮಕ್ಕ, ಗೌಡಗೆರೆ ಗ್ರಾಮದ ರತ್ನಮ್ಮ ಎಂಬುವವರ ಮನೆ ಮೇಲೆ ಮರಬಿದ್ದು, ಸೀಟುಗಳು ಒಡೆದು ಸುಮಾರು 20 ಸಾವಿರ ನಷ್ಟ ಸಂಭವಿಸಿದೆ. ತಾಲೂಕಿನ ಗಂಜಿಗುಂಟೆ, ಎನ್. ದೇವರಹಳ್ಳಿ, ಸಿದ್ದಾಪುರ, ಚಿಕ್ಕಮಧರೆ ಗ್ರಾಮಗಳಲ್ಲಿನ ಜಮೀನುಗಳಿಗೆ ನೀರು ನುಗ್ಗಿ ಅಪಾರವಾದ ನಷ್ಟ ಸಂಭವಿಸಿದೆ.