ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಕಾನೂನು ಉಲ್ಲಂಘಿಸಿ ನಗರದ ಪಬ್ ಒಂದರಲ್ಲಿ ಬೆಳಗಿನ ಜಾವದವರೆಗೆ ''''ಕಾಟೇರ'''' ಚಲನಚಿತ್ರದ ಯಶಸ್ಸಿನ ಪಾರ್ಟಿ ನಡೆಸಿದ ಪ್ರಕರಣ ಸಂಬಂಧ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಾಲಿ ಧನಂಜಯ್ ಸೇರಿದಂತೆ ಎಂಟು ಮಂದಿ ಹೇಳಿಕೆ ದಾಖಲಿಸಿದ್ದಾರೆ.ಪೊಲೀಸ್ ನೋಟಿಸ್ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರ ಮುಂದೆ ಶುಕ್ರವಾರ ಮಧ್ಯಾಹ್ನ ವಕೀಲರ ಜತೆಗೂಡಿ ನಟರಾದ ದರ್ಶನ್, ಡಾಲಿ ಧನಂಜಯ್, ನೀನಾಸಂ ಸತೀಶ್, ಚಿಕ್ಕಣ್ಣ, ಅಭಿಷೇಕ್ ಅಂಬರೀಷ್, ಕಾಟೇರ ಚಲನಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ವಿಚಾರಣೆಗೆ ಹಾಜರಾದರು. ಬಳಿಕ ಎರಡು ತಾಸು ಎಲ್ಲರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಪೊಲೀಸರು ಹೇಳಿಕೆ ಪಡೆದರು.ಈ ವೇಳೆ ‘ತಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಒರಾಯನ್ ಮಾಲ್‌ನಲ್ಲಿ ಕಾಟೇರ ಚಲನಚಿತ್ರ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಈ ಶೋ ಮುಗಿಯುವುದು ರಾತ್ರಿ ತಡವಾಯಿತು. ಹೀಗಾಗಿ ಸಮೀಪದಲ್ಲೇ ಚಲನಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಮಾಲಿಕತ್ವದ ಜೆಟ್‌ಲ್ಯಾಗ್ ಪಬ್‌ನಲ್ಲಿ ನಮ್ಮ ಕೋರಿಕೆ ಮೇರೆಗೆ ಊಟ ತಯಾರಿಸಿದ್ದರು. ಹಾಗಾಗಿ ಆ ಪಬ್‌ಗೆ ತೆರಳಿ ಊಟ ಮಾಡಿ ಮನೆಗೆ ಮರಳಿದ್ದೆವು. ಗೆಳೆತನದ ಕಾರಣಕ್ಕೆ ಜಗದೀಶ್ ಅವರ ಪಬ್‌ನಲ್ಲಿ ಎಲ್ಲರೂ ಒಟ್ಟಾಗಿ ಊಟ ಮಾಡಿದ್ದೇವೆಯೇ ಹೊರತು ಪಾರ್ಟಿ ನಡೆಸಿಲ್ಲ’ ಎಂದು ಪೊಲೀಸರಿಗೆ ಕಲಾವಿದರು ಹಾಗೂ ನಿರ್ಮಾಪಕರು ಸ್ಪಷ್ಟಪಡಿಸಿರುವುದಾಗಿ ತಿಳಿದು ಬಂದಿದೆ. ದುಬೈನಿಂದ ಮರಳಿದ ಬಳಿಕ ಠಾಣೆಗೆ:ಇತ್ತೀಚೆಗೆ ತಾವು ನಿರ್ಮಿಸಿದ್ದ ದರ್ಶನ್ ನಟಿಸಿದ ಕಾಟೇರ ಸಿನಿಮಾ ಯಶಸ್ಸು ಕಂಡ ಹಿನ್ನಲೆಯಲ್ಲಿ ಜ.3ರಂದು ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಜೆಟ್‌ಲ್ಯಾಗ್ ರೆಸ್ಟೋಬಾರ್ ಪಬ್‌ನಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ಚಲನಚಿತ್ರರಂಗದ ಹಲವು ಖ್ಯಾತ ಕಲಾವಿದರು ತೆರಳಿದ್ದರು. ನಗರದಲ್ಲಿ ಪಬ್ ಹಾಗೂ ಹೋಟೆಲ್‌ಗಳಿಗೆ ರಾತ್ರಿ 1 ಗಂಟೆವೆರೆಗೆ ವಹಿವಾಟು ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಅಂದು ಜೆಟ್‌ಲಾಗ್ ಪಬ್ ಅವಧಿ ಮೀರಿ ಬೆಳಗಿನ ಜಾವ 3.15ರವರೆಗೆ ವಹಿವಾಟು ನಡೆಸಿತ್ತು. ಈ ಸಂಬಂಧ ಪಬ್ ಓನರ್ ಶಶಿರೇಖಾ ಹಾಗೂ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತಡರಾತ್ರಿವರೆಗೆ ಪಾರ್ಟಿಯಲ್ಲಿದ್ದ ಕಾರಣಕ್ಕೆ ನಟರಾದ ದರ್ಶನ್, ಧನಂಜಯ್ ಹಾಗೂ ನೀನಾಸಂ ಸತೀಶ್ ಸೇರಿದಂತೆ ಎಂಟು ಮಂದಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು.
ಕಾಟೇರ ಸಿನಿಮಾದ ವಿಶೇಷ ಪ್ರದರ್ಶನ ಹಿನ್ನೆಲೆಯಲ್ಲಿ ದುಬೈಗೆ ತೆರಳಿದ್ದ ದರ್ಶನ್ ಹಾಗೂ ಅವರ ತಂಡವು, ವಿದೇಶದಿಂದ ಮರಳಿದ ಬಳಿಕ ಪೊಲೀಸ್ ವಿಚಾರಣೆಗೆ ಹಾಜರಾಯಿತು. ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಸುಬ್ರಹ್ಮಣ್ಯ ನಗರ ಠಾಣೆಗೆ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಯಿಂದಲೇ ಎಲ್ಲ ನಟರು ಹಾಗೂ ನಿರ್ಮಾಪಕ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರು ಒಟ್ಟಾಗಿ ಬಂದರು.ಠಾಣೆ ಮುಂದೆ ಡಿ ಬಾಸ್ ಅಭಿಮಾನಿಗಳು ವಿಚಾರಣೆಗೆ ದರ್ಶನ್ ಆಗಮನ ಸುದ್ದಿ ತಿಳಿದು ಅವರ ಸಾವಿರಾರು ಅಭಿಮಾನಿಗಳು ಸುಬ್ರಹ್ಮಣ್ಯನಗರ ಠಾಣೆ ಮುಂದೆ ಜಮಾಯಿಸಿದರು. ಇದರಿಂದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.