ಕೋನಾರ್ಕ ಉತ್ಸವ ಮಾದರಿಯಲ್ಲಿ ಚಾಲುಕ್ಯ ಉತ್ಸವ: ಸಚಿವ ಶಿವರಾಜ್ ಎಸ್.ತಂಗಡಗಿ

| Published : Mar 19 2025, 12:33 AM IST

ಕೋನಾರ್ಕ ಉತ್ಸವ ಮಾದರಿಯಲ್ಲಿ ಚಾಲುಕ್ಯ ಉತ್ಸವ: ಸಚಿವ ಶಿವರಾಜ್ ಎಸ್.ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಒಡಿಶಾ ರಾಜ್ಯದ ಪ್ರಸಿದ್ಧ ಕೋನಾರ್ಕ ಉತ್ಸವ ಮಾದರಿಯಲ್ಲಿ ಚಾಲುಕ್ಯ ಉತ್ಸವ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಒಡಿಶಾ ರಾಜ್ಯದ ಪ್ರಸಿದ್ಧ ಕೋನಾರ್ಕ ಉತ್ಸವ ಮಾದರಿಯಲ್ಲಿ ಚಾಲುಕ್ಯ ಉತ್ಸವ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಚಾಲುಕ್ಯ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಸಚಿವ ಶಿವರಾಜ್ ಎಸ್. ತಂಗಡಗಿ ನೇತೃತ್ವದಲ್ಲಿ ಬಾಗಲಕೋಟೆಯ ಜನಪ್ರತಿನಿಧಿಗಳ ಸಭೆ ಮಂಗಳವಾರ ವಿಕಾಸಸೌಧದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಚಿವರು, 2015ರ ನಂತರ ಚಾಲುಕ್ಯ ಉತ್ಸವ ಆಚರಣೆ ನಡೆದಿಲ್ಲ. ಇತರ ಉತ್ಸವಗಳಂತೆ ಚಾಲುಕ್ಯ ಉತ್ಸವವೂ ಆಚರಣೆ ಆಗುವ ಬದಲಿಗೆ ಇದನ್ನೊಂದು ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಉತ್ಸವವನ್ನಾಗಿ ರೂಪಿಸಬೇಕು. ಇಡೀ ರಾಷ್ಟ್ರದ ಗಮನ ಸೆಳೆಯುವಂತೆ ಉತ್ಸವ ಆಚರಣೆಯಾಗಬೇಕು ಎಂದು ಹೇಳಿದರು.

ಉತ್ಸವದಲ್ಲಿ ಸಂಗೀತ, ನೃತ್ಯ ಹಾಗೂ ಜಾನಪದ ಕಲಾ ವೈಭವಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮ ಆಯೋಜನೆಯಾಗಲಿದೆ ಎಂದು ತಿಳಿಸಿದರು.

ಮೂರು ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಬಾದಾಮಿಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಎರಡನೇ ದಿನ ಪಟ್ಟದಕಲ್ಲು ಹಾಗೂ ಸಮಾರೋಪ ಸಮಾರಂಭ ಐಹೊಳೆಯಲ್ಲಿ ನಡೆಯಲಿದೆ. ವರ್ಷಾಂತ್ಯಕ್ಕೆ ಉತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಮುಂದಿನ ಸಭೆಯಲ್ಲಿ ದಿನಾಂಕ ನಿಗದಿಪಡಿಸಲು ತೀರ್ಮಾನ ಕೈಗೊಳ್ಳಲಾಯಿತು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಇಮ್ಮಡಿ ಪುಲಿಕೇಶಿ ಕರ್ನಾಟಕದ ಚರಿತ್ರೆಯಲ್ಲಿ ತನ್ನ ಶೌರ್ಯ, ಸಾಹಸ ಹಾಗೂ ಕಲಾವಂತಿಕೆ ಮುಂತಾದ ಸಂಗತಿಗಳಿಂದಾಗಿ ಅಜರಾಮರನಾಗಿದ್ದಾನೆ. ಇಮ್ಮಡಿ ಪುಲಿಕೇಶಿಯ ಚರಿತ್ರೆಯನ್ನು ಉತ್ಸವದಲ್ಲಿ ಸಾರುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಮಾಜಿ ಸಚಿವ ಎಚ್.ವೈ. ಮೇಟಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್. ಪೂಜಾರ, ಉಮಾಶ್ರೀ, ಇಲಾಖೆ ನಿರ್ದೇಶಕಿ ಗಾಯಿತ್ರಿ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

----ಕೋಟ್ಸ್

ಕಳೆದ ಹತ್ತು ವರ್ಷಗಳಿಂದ ಚಾಲುಕ್ಯ ಉತ್ಸವವನ್ನು ಆಚರಣೆ ಮಾಡಿಲ್ಲ. ಬಾಗಲಕೋಟೆ ಜಿಲ್ಲೆ ರಾಜ್ಯದ ಐತಿಹಾಸಿಕ ಪ್ರವಾಸೋದ್ಯಮ ಹಿನ್ನೆಲೆಯುಳ್ಳ ಜಿಲ್ಲೆಯಾಗಿದ್ದು, ಈ ಬಾರಿ ಉತ್ಸವವನ್ನು ರಾಷ್ಟ್ರದ ಗಮನ ಸೆಳೆಯುವಂತೆ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜೊತೆಗೆ ಬಸವಣ್ಣನವರ ತತ್ವಗಳನ್ನ ಪಸರಿಸುವ ಕೆಲಸಗಳು ನಡೆಯಲಿವೆ.

-ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು