ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ಖಂಡಿಸಿ ಮಂಗಳವಾರ ದಲಿತ ಸಂಘಟನೆಗಳು, ಅಹಿಂದ, ಬಿಎಸ್ಪಿ, ಎಸ್ಡಿಪಿಐ, ಕನ್ನಡಪರ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ಬಂದ್‌ನಿಂದಾಗಿ ಜಿಲ್ಲಾಕೇಂದ್ರ ಬಹುತೇಕ ಸ್ತಬ್ಧಗೊಂಡಿತು.ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು ನಗರದ ಸುಲ್ತಾನ್ ಷರೀಪ್ ವೃತ್ತದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ವೃತ್ತಗಳಲ್ಲಿ ಕೆಲಕಾಲ ಧರಣಿ ನಡೆಸಿದರು. ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡು ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು. ಕೂಡಲೇ ಸಚಿವ ಸ್ಥಾನದಿಂದ ಅಮಿತ್ ಶಾರನ್ನು ವಜಾ ಮಾಡಬೇಕು, ದೇಶದ ಜನರಲ್ಲಿ ಅಮಿತ್ ಶಾ ಕ್ಷಮೆ ಕೇಳಬೇಕು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಜನರ ಮೇಲೆ ಧರ್ಮ ಹಾಗೂ ದೇವರ ಹೆಸರನ್ನು ಹೇರುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು. ಗೃಹ ಮಂತ್ರಿಯಾಗಿ ಡಾ.ಅಂಬೇಡ್ಕರ್ ಕುರಿತ ಹೇಳಿಕೆ ನೀಡಿರುವುದು ಖಂಡನೀಯ, ಬಹುಜನರು ಜಾಗೃತರಾಗದಿದ್ದರೆ ಸಂವಿಧಾನವನ್ನೇ ತಿರುಚಿ ಮನುಸ್ಮೃತಿ ಹೇರುತ್ತಾರೆ, ಹೊಸ ಸಂಸತ್ ಭವನವನ್ನು ಉದ್ಘಾಟಿಸುವ ವೇಳೆ ಅವರು ದಂಡ ಹೊತ್ತುಕೊಂಡು, ಹೋಮಹವನ ನಡೆಸಿದ ರೀತಿ, ಸಂವಿಧಾನ ಬದಲಾವಣೆಯ ಮುನ್ಸೂಚನೆ, ಇದನ್ನು ನಮ್ಮ ಶೋಷಿತ ಸಮುದಾಯ ಅರಿತು ಜಾಗೃತರಾಗಿ, ಮುಂದಿನ ಚುನಾವಣೆಯಲ್ಲಿ ಮತವನ್ನು ಹಣ ಹೆಂಡಕ್ಕೆ ಮಾರಾಟ ಮಾಡದೇ ಮತದಾನ ಮಾಡಿದರೆ ಅಂಬೇಡ್ಕರ್ ಅವರಿಗೆ, ಸಂವಿಧಾನಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದರು.ದೇಶಾದ್ಯಂತ ಅಮಿತ್ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ, ರಾಷ್ಟ್ರಪತಿ, ಪ್ರಧಾನಿ, ತಕ್ಷಣ ಸಚಿವ ಸಂಪುಟದಿಂದ ಅಮಿತ್ ಶಾ ವಜಾಗೊಳಿಸಿ, ದೇಶ ದ್ರೋಹದ ಹೇಳಿಕೆ ನೀಡಿರುವ ಅವರನ್ನು ಸುಮುಟೋ ಕಾಯಿದೆಯಡಿ ಬಂಧಿಸಿ, ಶಿಕ್ಷೆ ವಿಧಿಸಬೇಕು ಎಂದರು.ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿ ಗಮನ ಸೆಳೆಯಲು ಈ ಬಂದ್ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು, ಈ ಬಂದ್‌ಗೆ ವರ್ತಕರ ಸಂಘ, ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಚಿತ್ರಮಂದಿರ ಮಾಲೀಕರು, ಬಸ್ ಮಾಲೀಕರು ಚಾಲಕರ ಸಂಘ, ಆಟೋ ಮಾಲೀಕರು ಹಾಗೂ ಚಾಲಕರ ಸಂಘ, ಕಾರು ಮಾಲೀಕರು, ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ಗೂಡ್ಸ್ ಮಾಲೀಕರ, ಚಾಲಕರ ಸಂಘ, ಹೋಟೆಲ್ ಮಾಲೀಕರು, ಚಿತ್ರಮಂದಿರಗಳ ನೌಕರರು, ಪಟ್ಟಣದ ಎಲ್ಲಾ ಕೋಮಿನ ಯಜಮಾನರು, ಸಮುದಾಯದವರು ಹಾಗೂ ಸಂಘ- ಸಂಸ್ಥೆಗಳ ಮುಖಂಡರು ಸಹಕರಿಸಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮಾತನಾಡಿದರು. ಬೆಳಗ್ಗೆ ಭುವನೇಶ್ವರಿ ವೃತ್ತದಲ್ಲಿ ಶಾಮಿಯಾನ ಹಾಕಲು ಮತ್ತು ಟೈರ್ ಸುಡಲು ಮುಂದಾದ ವೇಳೆ ಪೊಲೀಸರು ಅಡ್ಡಿಪಡಿಸಿದ್ದರಿಂದ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಿಡಿಕಾರಿದರು. ಬಹುತೇಕ ಹೋಟೆಲ್‌ಗಳು, ಅಂಗಡಿಗಳು, ವಾಣಿಜ್ಯ ಮಳಿಗೆಗಳನ್ನು ಮುಚ್ಚಲಾಗಿತ್ತು. ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ಮಾಡುತ್ತಿದ್ದರಿಂದ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಚಾಲಕರ ಮುಷ್ಕರದ ಸಮಯದಲ್ಲಿ ನಿಮಗೆ ಬೆಂಬಲ ಕೊಟ್ಟಿದ್ದೆವು. ಆದರೀಗ, ನೀವು ಯಾವುದೇ ಬಂದ್ ಮಾಡಿಲ್ಲ ಎಂದು ಕಿಡಿಕಾರಿದರು. ಬಳಿಕ,ತಾತ್ಕಾಲಿಕವಾಗಿ ಸಾರಿಗೆ ಸಂಚಾರವನ್ನು ಅಧಿಕಾರಿಗಳು ನಿಲ್ಲಿಸಿ ಪ್ರತಿಭಟನೆ ಮುಗಿದ ನಂತರ ಸಂಚಾರ ಆರಂಭಿಸಿದರು.
ಪ್ರತಿಭಟನೆಯಲ್ಲಿ ಸಿ.ಎಂ.ಶಿವಣ್ಣ, ಬಸವನಪುರ ರಾಜಶೇಖರ, ಬ್ಯಾಡಮೂಡ್ಲು ಬಸವಣ್ಣ, ಶಿವನಾಗಣ್ಣ, ಸುರೇಶ್ ರಾಮಸಮುದ್ರ, ಸಿದ್ದರಾಜು, ಸೋಮುಸುಂದರ್, ನಾರಾಯಣ್, ಶಿವಣ್ಣ, ಕೃಷ್ಣ, ರಂಗಸ್ವಾಮಿ, ಗುರುರಾಜು, ನಗರಸಭಾ ಮಾಜಿ ಸದಸ್ಯ ಮಹದೇವಯ್ಯ, ಆಟೋ ಉಮೇಶ್, ರಮೇಶ್, ಆರೀಪ್, ಮಹೇಶ್, ಚನ್ನಂಜಯ್ಯ, ಚಾ.ರಂ. ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು, ಆರ್. ಮಹದೇವ್, ಸೋಮೇಶ್, ಕಾವೇರಿ, ನಾಗರತ್ನ, ಇತರರು ಭಾಗವಹಿಸಿದ್ದರು