ನಾಳೆ ಚೆಲುವ ಚಾಮರಾಜನಗರ ಭರಚುಕ್ಕಿ ಜಲಪಾತೋತ್ಸವ

| Published : Aug 09 2024, 12:33 AM IST

ಸಾರಾಂಶ

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಚೆಲುವ ಚಾಮರಾಜನಗರ ಹೆಸರಿನಡಿ ಭರಚುಕ್ಕಿ ತಾಣದಲ್ಲಿ ಜಲಪಾತೋತ್ಸವವನ್ನು ಆ.10 ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಚೆಲುವ ಚಾಮರಾಜನಗರ ಹೆಸರಿನಡಿ ಭರಚುಕ್ಕಿ ತಾಣದಲ್ಲಿ ಜಲಪಾತೋತ್ಸವವನ್ನು ಆ.10 ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು, ಚಾಮರಾಜನಗರ ಜಿಲ್ಲೆಯು ವೈವಿಧ್ಯಮಯ ಪವಾಸಿ ತಾಣಗಳನ್ನು ಹೊಂದಿದೆ. ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ಇನ್ನಷ್ಟು ಪ್ರಚುರಗೊಳಿಸುವ ಉದ್ದೇಶದೊಂದಿಗೆ ಚೆಲುವ ಚಾಮರಾಜನಗರ ಪರಿಕಲ್ಪನೆಯಡಿ ಮೊದಲ ಕಾರ್ಯಕ್ರಮವಾಗಿ ಭರಚುಕ್ಕಿ ಜಲಪಾತೋತ್ಸವವನ್ನು ಆ.10 ರಂದು ಒಂದು ದಿನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಲಪಾತವನ್ನು ಬಣ್ಣಬಣ್ಣದಿಂದ ಕಂಗೊಳಿಸುವ ದೀಪದೊಂದಿಗೆ ವೀಕ್ಷಿಸಬಹುದು. ಆ.10ರಂದು ಸಂಜೆ 5 ಗಂಟೆಗೆ ಜಲಪಾತದ ಬಳಿ ಹಾಕಲಾಗಿರುವ ವರ್ಣರಂಜಿತ ವೇದಿಕೆಯಲ್ಲಿ ಜಲಪಾತೋತ್ಸವದ ಉದ್ಘಾಟನೆ ನಡೆಯಲಿದೆ. ಬಳಿಕ ಮಲೆ ಮಹದೇಶ್ವರ ಬೆಟ್ಟ ಭಾಗದ, ಸ್ಥಳೀಯ ಸಂಸ್ಕೃತಿ, ಕಲಾ ಅನಾವರಣ ಆಗಲಿದೆ. ಇದೇ ವೇದಿಕೆಯಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ಮತ್ತು ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದ್ದು, ಹೆಚ್ಚಿನ ಜನರು ಕಾರ್ಯಕ್ರಮವನ್ನು ವೀಕ್ಷಿಸಲು ಎಲ್.ಇ.ಡಿ. ಪರದೆಗಳನ್ನು ಹಾಕಲಾಗುತ್ತಿದೆ ಎಂದು ಹೇಳಿದರು.

ಭರಚುಕ್ಕಿ, ಜಲಪಾತೋತ್ಸವದ ಅಂಗವಾಗಿ ಅಕರ್ಷಕ ಧ್ವನಿ-ಬೆಳಕು ಕಾರ್ಯಕ್ರಮವು ಮೂಡಿಬರಲಿದೆ. ಜಿಲ್ಲೆಯ ಪ್ರವಾಸೋದ್ಯಮ ಕುರಿತ ಕಿರು ವೀಡಿಯೊ ಬಿಡುಗಡೆ ಹಾಗೂ ಪ್ರದರ್ಶನವಿದೆ. ಎನ್.ಆರ್.ಎಲ್.ಎಂ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳು ಅವರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಆಹಾರ ತಿನಿಸು ಮಳಿಗೆಗಳು ಫುಡ್ ಕೋರ್ಟ್ ಸಹ ಇರಲಿದೆ. ಬಣ್ಣದ ಬೆಳಕಿನಲ್ಲಿ ಭರಚುಕ್ಕಿ ಜಲಾಶಯವನ್ನು ಕಣ್ಮುಂಬಿಕೊಳ್ಳಲು ಆಕರ್ಷಕವಾದ ದೀಪಾಲಂಕಾರವು ಆ.10ರಂದು ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ಇರಲಿದೆ. ಅಲ್ಲದೆ ಆ.11 ರಂದು ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ದೀಪಾಲಂಕಾರ ಇರಲಿದೆ ಎಂದು ಮಾಹಿತಿ ನೀಡಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆ.10 ರಂದು ಸಂಜೆ 5 ಗಂಟೆಗೆ ಭರಚುಕ್ಕಿ ಜಲಪಾತೋತ್ಸವಕ್ಕೆ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಜಲಪಾತೋತ್ಸವದ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಲಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಲಿದ್ದಾರೆ. ಶಾಸಕ ಎಂ.ಆರ್.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಸದ ಸುನೀಲ್ ಬೋಸ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್‌ಪ್ರಸಾದ್, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಎಸ್.ಜಯಣ್ಣ, ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ಚಂದ್ರು, ಕುದೇರಿನ ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೈ.ಸಿ.ನಾಗೇಂದ್ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.

ಎಸ್ಪಿ ಡಾ.ಬಿ.ಟಿ.ಕವಿತ ಮಾತನಾಡಿ, ಭರಚುಕ್ಕಿ ಜಲಪಾತೋತ್ಸವಕ್ಕೆ ಬರುವ ವಾಹನಗಳಿಗೆ ಶಿವನಸಮುದ್ರದ ದರ್ಗದ ಬಳಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಜಲಪಾತೋತ್ಸವದ ಸ್ಥಳಕ್ಕೆ ಉಚಿತವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ತೆರಳಬೇಕಿದೆ. ಕಾರ್ಯಕ್ರಮಕ್ಕೆ ಅಗತ್ಯವಾದ ಬಂದೋಬಸ್ತ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಿಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಉಪಸ್ಥಿತರಿದ್ದರು.

ಭರಚುಕ್ಕಿ ಜಲಪಾತೋತ್ಸವಕ್ಕೆ ಉಚಿತ ಪ್ರವೇಶ:

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಭರಚುಕ್ಕಿ ಜಲವಾತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸೂಚಿಸಿದ ಮೇರೆಗೆ ಚೆಲುವ ಚಾಮರಾಜನಗರ ಭರಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಲಪಾತೋತ್ಸವ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.