ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯಾದ ಮೇಲೆ ಗಡಿ ಜಿಲ್ಲೆಯಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದು,ಸರ್ಕಾರ ಯಾವುದೇ ಕಾರಣಕ್ಕೂ ವಿವಿಯನ್ನು ವಿಲೀನಗೊಳಿಸಲು ಮುಂದಾಗಬಾರದು ಎಂದು ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕ, ಸಾಹಿತಿ ಅಂಶಿ ಪ್ರಸನ್ನಕುಮಾರ್ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಗರದ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶೀಲಾ ಸತ್ಯೇಂದ್ರಸ್ವಾಮಿರವರ ನಾಲ್ಕನೇ ಕೃತಿ ಗುಲ್ ಮೊಹರ್ ಕಥಾ ಸಂಕಲನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಗೆ ವಿಶ್ವವಿದ್ಯಾನಿಲಯ ಕೊಟ್ಟಿದ್ದು ಸರಿ. ಈಗ ಇದನ್ನು ವಿಲೀನಗೊಳಿಸುವ ಬಗ್ಗೆ ಹೇಳಿಕೆಗಳು ಸರಿಯಲ್ಲ. ಇದು ಪ್ರತ್ಯೇಕ ವಿಶ್ವವಿದ್ಯಾನಿಲಯವಾಗಿಯೇ ಇರಬೇಕು. ಆಗ ಈ ಭಾಗದಲ್ಲಿ ಇನ್ನಷ್ಟು ಸಾಹಿತಿಗಳು, ಲೇಖಕರು, ವಿದ್ವಾಂಸರು ಹೊರಬರುತ್ತಾರೆ ಎಂದರು.ಚಾಮರಾಜನಗರ ಜಿಲ್ಲೆ ಶೈಕ್ಷಣಿಕ, ಕೈಗಾರಿಕಾ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾಗಿದ್ದು, ಇದೀಗ ಹೆಚ್ಚಿನ ಹೆಣ್ಣು ಮಕ್ಕಳು ವಿವಿ ಸ್ಥಾಪನೆಯಾದ ಪರಿಣಾಮ ಸ್ನಾತಕೋತ್ತರ ಪದವಿಧರರಾಗುತ್ತಿದ್ದು, ಈ ನಿಟ್ಟಿನಲ್ಲಿ ವಿವಿಗೆ ಹೆಚ್ಚಿನ ಸೌಲಭ್ಯ ನೀಡುವ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಐಎಎಸ್, ಕೆಎಎಸ್, ಐಪಿಎಸ್ ತೇರ್ಗಡೆ ಹೊಂದಿರುವವರು ಯಾರು ನಾನು ಮೊಬೈಲ್, ಟಿವಿ ನೋಡಿ ಪಾಸ್ ಮಾಡಿದೆ ಎಂದು ಹೇಳುವುದಿಲ್ಲ. ಅವರೆಲ್ಲಾ ಪುಸ್ತಕ, ಪತ್ರಿಕೆ, ಸ್ಪರ್ಧಾತ್ಮಕ ಪುಸ್ತಕಗಳನ್ನು ಓದಿ ಮತ್ತು ಗ್ರಂಥಾಲಯಗಳಿಗೆ ಹೋಗಿದ್ದರಿಂದಲೇ ಸಾಧನೆ ಸಾಧ್ಯ ಎನ್ನುತ್ತಾರೆ. ಆದ್ದರಿಂದ ಪುಸ್ತಕ, ಪತ್ರಿಕೆ ಓದುವ ಸಂಸ್ಕೃತಿ ಹೆಚ್ಚಾಗಬೇಕು.ಪುಸ್ತಕ, ಪತ್ರಿಕೆಗಳಿಂದ ಜ್ಞಾನ ಹೆಚ್ಚುತ್ತದೆ ಹೊರತು ಮೊಬೈಲ್‌ನಿಂದಲ್ಲ, ಈ ನಿಟ್ಟಿನಲ್ಲಿ ಪುಸ್ತಕ, ಪತ್ರಿಕೆ ಓದುವ ಸಂಸ್ಕೃತಿ ಹೆಚ್ಚಾಗಬೇಕು, ಇದನ್ನು ಮಕ್ಕಳಲ್ಲೂ ಬೆಳೆಸಬೇಕು ಎಂದರು.ಗಡಿ ಜಿಲ್ಲೆ ಚಾಮರಾಜನಗರ ಮೈಸೂರಿನಿಂದ ಬೇರ್ಪಟ್ಟ ನಂತರ ತನ್ನದೇ ಆದ ವಿಶಿಷ್ಟತೆಗಳಿಂದ ಕೂಡಿದೆ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ ಬೆಳೆದಿದೆ, ಹೆಚ್ಚು ನೈಸರ್ಗಿಕ ಕಾಡುಗಳು, ಬೆಟ್ಟಗುಡ್ಡಗಳಿಂದ ಕೂಡಿ, ಹುಲಿ ಸಂರಕ್ಷಿತ ಮತ್ತು ಆನೆ ಸಂರಕ್ಷಿತ ತಾಣವಾಗಿದೆ, ಶ್ರೇಷ್ಠ ಸಾಹಿತಿಗಳು ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಗಡಿ ಜಿಲ್ಲೆಯಲ್ಲಿ ಶೀಲಾ ಸತ್ಯೇಂದ್ರಸ್ವಾಮಿರವರ ಗುಲ್ ಮೊಹರ್ ಕಥಾ ಸಂಕಲನ ಅತ್ಯಂತ ಸೊಗಸಾಗಿ ಮೂಡಿ ಬಂದಿದ್ದು, ತಮ್ಮ ಸುತ್ತಮುತ್ತಲಿನ ಪರಿಸರ, ಘಟನೆಗಳನ್ನು ಆಧರಿಸಿ, ಗ್ರಾಮೀಣ ಭಾಷೆಯಲ್ಲಿ ಸೊಗಸಾಗಿ ಕಥಾ ಸಂಕಲನ ಹೊರತಂದಿದ್ದಾರೆ. ೨೦ ಕಥೆಗಳನ್ನು ಒಳಗೊಂಡಿರುವ ೪ನೇ ಕಥಾ ಸಂಕಲನದೊಂದಿಗೆ ಭರವಸೆಯ ಕಥೆಗಾರರಾಗಿ ಹೊರ ಹೊಮ್ಮಿದ್ದಾರೆ ಎಂದರು.ಗುಲ್ ಮೊಹರ್ ಕಥಾ ಸಂಕಲನ ಕುರಿತು ಹರವೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಸವಿತಾ ಎಂ. ಆರ್. ಮಾತನಾಡಿ, ಈ ಕಥಾ ಸಂಕಲನ ತಾಯಿ-ಮಕ್ಕಳ ಪ್ರೀತಿ, ಗಂಡ-ಹೆಂಡತಿಯ ಪ್ರೀತಿ, ಪ್ರಕೃತಿಯ ಪ್ರೀತಿ, ನೆಲದ ಭಾಷೆಯ ಪ್ರೀತಿಯನ್ನು ಒಳಗೊಂಡಿರುವ ಜೊತೆಗೆ ಮಾನವ ಪ್ರೀತಿಯನ್ನೂ ಎತ್ತಿ ತೋರಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಸೋಮಶೇಖರ ಬಿಸಲ್ವಾಡಿ, ಕೆ. ಶ್ರೀಧರ್ (ಸಿರಿ) ಮಾತನಾಡಿದರು.ತೇಜು ಪಬ್ಲಿಕೇಷನ್ ಅಣುಕು ರಾಮನಾಥ್, ಈ ಜಿಲ್ಲೆಯಿಂದ ಹೊರ ಬರುವ ಓಳ್ಳೆಯ ಕೃತಿಗಳಿಗೆ ಪ್ರಕಾಶನ ನೀಡುವುದಾಗಿ ಹೇಳಿದರು.
ಲೇಖಕಿ ಶೀಲಾ ಸತ್ಯೇಂದ್ರಸ್ವಾಮಿ ತಮ್ಮ ಸಾಹಿತ್ಯ ಕೃಷಿಗೆ ಸಹಕರಿಸುವುದರನ್ನೆಲ್ಲಾ ನೆನೆದರು.ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ನಂಜನಗೂಡು ಶ್ರೀನಿವಾಸಮೂರ್ತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭವನ್ನು ಲೇಖಕಿ ಶೀಲಾ ಅವರ ಮಾತೃಶ್ರೀ ನಾಗಲಾಂಬಿಕೆ ಮತ್ತು ಅತ್ತೆ ರತ್ನಮ್ಮ ಉದ್ಘಾಟಿಸಿದರು.ಚಾಮರಾಜನಗರ ಜಿಲ್ಲೆಯ ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು, ಪರಿಸರವಾದಿಗಳು ಜಿಲ್ಲೆಯ ಸಾಹಿತ್ಯ, ನೆಲ- ಜಲ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಸರ್ಕಾರ ಗುರುತಿಸಬೇಕು. ಬೇರೆಲ್ಲೂ ನೆಲೆಸಿ, ಈ ಜಿಲ್ಲೆಯ ಹೆಸರಿನಲ್ಲಿ ಪ್ರಶಸ್ತಿ ಪಡೆಯುವುದು ಸರಿಯಲ್ಲ. ಮುಂದೆಯಾದರೂ ಸರ್ಕಾರ, ಅಕಾಡೆಮಿಗಳು ಈ ಜಿಲ್ಲೆಯಲ್ಲಿ ಕೆಲಸ ಮಾಡುವವರನ್ನು ಗುರುತಿಸಲಿ.
-ಅಂಶಿಪ್ರಸನ್ನಕುಮಾರ್, ಹಿರಿಯ ಪತ್ರಕರ್ತರು, ಸಾಹಿತಿಗಳು, ಮೈಸೂರು