2026-27ರ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿ 17,925 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷದ 9,448 ರೈತರಿಗೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ನೋಂದಣಿಯಾಗಿದೆ. ಯಾವುದೇ ಕಾರಣಕ್ಕೂ ಬೆಳೆ ವಿಮೆ ಪಾವತಿ ವಿಳಂಬ ಆಗಬಾರದು .
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿಗಳ ನೇಗಿಲಯೋಗಿ ಯೋಜನೆಗೆ ಚಾಮರಾಜನಗರ, ಗುಂಡ್ಲುಪೇಟೆ ಆಯ್ಕೆಯಾಗಿದ್ದು, ಮುಂಗಾರಿಗೂ ಮೊದಲೇ ರೈತರಿಗೆ ಯೋಜನೆ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ನೇಗಿಲಯೋಗಿ ಯೋಜನೆಯನ್ನು ಹಳ್ಳಿಹಳ್ಳಿಗೂ ತಲುಪಿಸಬೇಕು. ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಸೇವೆ ಒದಗಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಆರ್ಟಿಒ ನೋಂದಣಿಯಾಗಿರುವ ಒಟ್ಟು 6,108 ಟ್ರ್ಯಾಕ್ಟರ್ ಗಳಿವೆ. ಸುಮಾರು 2,263 ಟ್ರ್ಯಾಕ್ಟರ್ ಮಾಲೀಕರು ಯೋಜನೆಯಡಿ ನೋಂದಣಿಯಾಗಲು ಒಪ್ಪಿಗೆ ನೀಡಿದ್ದಾರೆ. ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ 66,043 ಸಾವಿರ ರೈತರಿಗೆ ಯೋಜನೆಯಿಂದ ಲಾಭವಾಗಲಿದೆ. ಯೋಜನೆ ಕುರಿತು ರೈತರಿಗೆ ಪ್ರಚಾರ ಮಾಡಲು ಗ್ರೂಪ್ ಕಾಲ್ ಮಾಡುವ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.ರೈತರು ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕು. ಉಪಗ್ರಹ ಆಧರಿತ ಬೆಳೆ ಮಾಹಿತಿ, ಭೂಮಿಯ ಸತ್ವ, ಹವಾಮಾನ ಮುನ್ಸೂಚನೆ ಇತ್ಯಾದಿ ವಿವರಗಳನ್ನು ರೈತರ ಮೊಬೈಲ್ ಗೆ ನೀಡುವ ರೈತ ಚೈತನ್ಯ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಈಗಾಗಲೇ ಲಕ್ಷಾಂತರ ರೈತರಿಗೆ ಬೆಳೆ ಮಾಹಿತಿಯ ಸಂದೇಶ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಿ, ನಷ್ಟದಿಂದ ಪಾರು ಮಾಡಲು ನೆರವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
2026-27ರ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿ 17,925 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷದ 9,448 ರೈತರಿಗೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ನೋಂದಣಿಯಾಗಿದೆ. ಯಾವುದೇ ಕಾರಣಕ್ಕೂ ಬೆಳೆ ವಿಮೆ ಪಾವತಿ ವಿಳಂಬ ಆಗಬಾರದು ಎಂದು ಸಚಿವರು ಸೂಚಿಸಿದರು.ಜಿಲ್ಲೆಯಲ್ಲಿರುವ ಮಳೆಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಸೂಚಿಸಿದ ಸಚಿವರು, ಕೃಷಿ ಕಾಲೇಜಿನ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಈ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಸುಮಾರು 15 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಜೈ ಕಿಸಾನ್ ಆ್ಯಪ್ ನಲ್ಲಿ ಎಲ್ಲವೂ ಅಪ್ ಡೇಟ್ ಮಾಡಬೇಕು ಎಂದು ಸೂಚನೆ ನೀಡಿದರು.ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸದೇ ಹಲವು ರೈತರು ಸಹಾಯಧನದಿಂದ ವಂಚಿತರಾಗಿದ್ದಾರೆ. ಯಾವ ಕಾರಣಕ್ಕೆ ರೈತರು ಸೌಲಭ್ಯದಿಂದ ವಂಚಿತರಾದರು, ಅವರನ್ನು ಮತ್ತೆ ಯೋಜನೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು. ರೈತರಿಗೆ ಆದಾಯ ತಂದುಕೊಡುವ ತೇಗ ಸಿರಿ ಯೋಜನೆಗೆ ಹೆಚ್ಚು ಉತ್ತೇಜನ ನೀಡಬೇಕು ಎಂದು ಅವರು ತಿಳಿಸಿದರು.ಇದೇ ವೇಳೆ ಕೃಷಿ ಸಚಿವರು ನೇಗಿಲಯೋಗಿ ಯೋಜನೆ ಹಾಗೂ ಆನ್ ಲೈನ್ ಮೂಲಕನ ರಸಗೊಬ್ಬರ ಬುಕ್ಕಿಂಗ್ ಕುರಿತು ಪ್ರಚಾರದ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಶ್ರೀರೂಪ, ಸಿಇಒ ಆಕೃತಿ ಬನ್ಸಾಲ್, ಅಪರ ಕೃಷಿ ನಿರ್ದೇಶಕ ಮಧುಸೂದನ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ನರೇಶ್, ಕೃಷಿ ಕಾಲೇಜಿನ ಡೀನ್ ದೊರೆಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಭಾನುಪ್ರಕಾಶ್, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿ ಪರಿಶೀಲನಾ ಸಭೆಗೂ ಮೊದಲು ಸಚಿವರು ರೈತ ಮುಖಂಡರೊಂದಿಗೆ ಚರ್ಚಿಸಿದರು.