ತಾಲೂಕಿನ ಹೊಳೆಮುರಿದಟ್ಟಿಯಲ್ಲಿ ಆ.15ರಂದು ನಡೆದ ಎನ್‌ಕೌಂಟರ್‌ ಪ್ರಕರಣದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ. ಶೂಟೌಟ್‌ ಮಾರನೆಯ ದಿನ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಕಿಡಿಗೇಡಿಗಳು, ತಮ್ಮ ಕೃತ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಹನೂರು : ತಾಲೂಕಿನ ಹೊಳೆಮುರಿದಟ್ಟಿಯಲ್ಲಿ ಆ.15ರಂದು ನಡೆದ ಎನ್‌ಕೌಂಟರ್‌ ಪ್ರಕರಣದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ. ಶೂಟೌಟ್‌ ಮಾರನೆಯ ದಿನ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಕಿಡಿಗೇಡಿಗಳು, ತಮ್ಮ ಕೃತ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಶುಕ್ರವಾರ ಹನೂರು ತಾಲೂಕಿನ ತೋಮಿಯಾರ್‌ ಪಾಳ್ಯ, ಕಾರಯ್ಯನಬೆಟ್ಟ ಮತ್ತು ಬೇಟೆಗಾರನ ಗುಡ್ಡ ಬಳಿ ಅರಣ್ಯ ಇಲಾಖೆ ನಿರ್ಮಿಸಿದ್ದ ಸೋಲಾರ್‌ ತಂತಿ ಬೇಲಿ, ಕಂಬಗಳು, ಗೇಟ್‌ಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಿರುವ ಘಟನೆ ನಡೆದಿದೆ. ಇದರ ಪರಿಣಾಮವಾಗಿ ಕಾಡು ಪ್ರಾಣಿಗಳ ನಾಡು ಪ್ರವೇಶದ ಆತಂಕ ಹೆಚ್ಚಾಗಿದೆ. ಈ ಮೂಲಕ ಗ್ರಾಮಗಳಿಗೆ ಬರುವ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸುವ ಭಾರಿ ಹುನ್ನಾರ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

ತೋಮಿಯಾರ್‌ ಪಾಳ್ಯ ಡಿ-ಲೈನ್‌ನಲ್ಲಿ ಅಳವಡಿಸಿದ್ದ ಸೋಲಾರ್‌ ಫೆನ್ಸಿಂಗ್‌ ವ್ಯವಸ್ಥೆ, ಸ್ವಿಚ್‌ ಬೋರ್ಡ್‌, ಗೇಟ್‌, ತಂತಿ ಬೇಲಿಗಳು, ಕಂಬಗಳನ್ನು ಮುರಿದು ಹಾಕಲಾಗಿದೆ. ಇದರಿಂದಾಗಿ ಕಾಡು ಮತ್ತು ನಾಡಿನ ನಡುವಿನ ರಕ್ಷಣಾ ಗೋಡೆ ಕಳಚಿ ಬಿದ್ದಂತಾಗಿದೆ.

ನಾಶ ಮಾಡಿದ್ದು ಏಕೆ?:

ಶೂಟೌಟ್‌ ಬಳಿಕ ನಡೆದ ಪ್ರತಿಭಟನೆಗಳಿಂದಾಗಿ ತೋಮಿಯಾರ್‌ ಪಾಳ್ಯ, ಶಾಗ್ಯ ವಲಯದಲ್ಲಿನ ಅರಣ್ಯ ಕಚೇರಿಗೆ ಅರಣ್ಯ ಸಿಬ್ಬಂದಿ ಹೋಗಲು ಹಿಂಜರಿಯುತ್ತಿದ್ದಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಕಿಡಿಗೇಡಿಗಳು ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಹೋಗಿ, ದುಷ್ಕೃತ್ಯ ಎಸಗಿದ್ದಾರೆ. ಇದು ಕೇವಲ ಆಸ್ತಿ ನಾಶವಷ್ಟೇ ಅಲ್ಲ ಎಂದು ಹೆಸರೇಳಲು ಇಚ್ಛಿಸದ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಬೂದಿ ಮುಚ್ಚಿದ ಕೆಂಡ

ಶೂಟೌಟ್‌ ಘಟನೆ ಬಳಿಕ ಹನೂರಿನಲ್ಲಿ ಎಲ್ಲ ಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಾಗಿದೆ. ಈ ನಡುವೆ ಈ ಭಾಗದಲ್ಲಿ ಸರಿಯಾಗಿ ಮಳೆಯಾಗದೆ, ಕಾಡಿನಲ್ಲಿ ಪ್ರಾಣಿಗಳ ಆಹಾರ ಮತ್ತು ನೀರಿಗೆ ಕೊರತೆಯಿದೆ. ಇದನ್ನೇ ಉಪಯೋಗಿಸಿಕೊಂಡಿರುವ ದುಷ್ಕರ್ಮಿಗಳು, ವನ್ಯಮೃಗಗಳು ನಾಡಿನತ್ತ ಬರುವಂತೆ ಮಾಡಲು ರಕ್ಷಣಾ ಗೋಡೆಗಳನ್ನು ಹಾಳುಗೆಡವಿದ್ದಾರೆ. ಪರಿಣಾಮ ಕಾಡಾನೆ ಸೇರಿದಂತೆ ವನ್ಯಮೃಗಗಳು ಗ್ರಾಮಗಳತ್ತ ಬಂದಾಗ ಅನಿವಾರ್ಯವಾಗಿ ಸಿಬ್ಬಂದಿ ಸ್ಥಳಕ್ಕೆ ಬರುವ ಪರಿಸ್ಥಿತಿ ಉದ್ಭವಿಸುತ್ತದೆ. ಹೀಗೆ ಬಂದ ಸಿಬ್ಬಂದಿ ಮೇಲೆ ದಾಳಿ ಮಾಡುವ ದೊಡ್ಡ ಸಂಚು ಇದರಲ್ಲಿ ಅಡಗಿರುವ ಶಂಕೆಯಿದೆ ಎಂದು ಹೆಸರೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ತೋಮಿಯಾರ್‌ಪಾಳ್ಯದ ಫೆನ್ಸಿಂಗ್‌ ನಾಶವು ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಹೊಸ ತಲೆನೋವಾಗಿ ಪರಿಣಮಿಸಿದ್ದು, ಜನರನ್ನು ಹತೋಟಿಗೆ ತೆಗೆದುಕೊಳ್ಳುವ ಜೊತೆಗೆ ಪ್ರಾಣಿಗಳ ಚಲನವಲನಗಳ ಮೇಲೂ ಹದ್ದಿನ ಕಣ್ಣಿರಿಸಬೇಕಿದೆ.