ಚಾಮುಲ್ ನಿಂದ ನಿವೃತ್ತ ಡೈರಿ ನೌಕರರಿಗೆ ಪರಿಹಾರ ಧನ ವಿತರಣೆ

| Published : Jul 10 2025, 12:45 AM IST / Updated: Jul 10 2025, 12:46 AM IST

ಸಾರಾಂಶ

ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ನೌಕರರಿಗೆ ನಿವೃತ್ತಿ ಪರಿಹಾರ ಧನ ನೀಡಬೇಕು ಎಂದು ಚಾಮುಲ್‌ ಅಧ್ಯಕ್ಷರಾಗಿದ್ದ ಸಿ.ಗುರುಮಲ್ಲಪ್ಪ ಅವರ ಅವಧಿಯಲ್ಲಿ ಚರ್ಚೆ ನಡೆದಿತ್ತು. ನನ್ನ ಅವಧಿಯಲ್ಲಿ ನಿವೃತ್ತಿಗೊಂಡ ನೌಕರರಿಗೆ ಪರಿಹಾರ ನೀಡಲು ಶುರುವಾಯಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ನಿವೃತ್ತಿ ಹೊಂದಿದ ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರಿಗೆ ನಿವೃತ್ತಿ ಪರಿಹಾರ ನೀಡಲು ನಾನು ಅಧ್ಯಕ್ಷನಾದ ಮೊದಲ ಆಡಳಿತ ಮಂಡಳಿ ಸಭೆಯಲ್ಲಿಯೇ ಒಪ್ಪಿಗೆ ಸಿಕ್ಕಿದ್ದು ಎಂದು ಚಾಮುಲ್‌ ಮಾಜಿ ಅಧ್ಯಕ್ಷರೂ ಆದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್‌ ಹೇಳಿದರು.

ಪಟ್ಟಣದ ಚಾಮುಲ್‌ ಉಪ ವಿಭಾಗದ ಕಚೇರಿಯಲ್ಲಿ ಚಾಮುಲ್‌ ಹಾಗೂ ರೈತ ಕಲ್ಯಾಣ ಟ್ರಸ್ಟ್‌ ನಿಂದ ನಿವೃತ್ತಿ ಹೊಂದಿದ್ದ ನೌಕರರಾದ ಸೋಮಹಳ್ಳಿ ಎಸ್.ಶಿವನಾಗಪ್ಪ, ಹೊಸಪುರ ಸಿದ್ದೇಗೌಡ, ಹಂಗಳದ ಕೊಂಗಳಶೆಟ್ಟಿಗೆ ನಿವೃತ್ತಿ ಪರಿಹಾರ ಧನದ ಚೆಕ್‌ ವಿತರಿಸಿ ಮಾತನಾಡಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ನೌಕರರಿಗೆ ನಿವೃತ್ತಿ ಪರಿಹಾರ ಧನ ನೀಡಬೇಕು ಎಂದು ಚಾಮುಲ್‌ ಅಧ್ಯಕ್ಷರಾಗಿದ್ದ ಸಿ.ಗುರುಮಲ್ಲಪ್ಪ ಅವರ ಅವಧಿಯಲ್ಲಿ ಚರ್ಚೆ ನಡೆದಿತ್ತು. ನನ್ನ ಅವಧಿಯಲ್ಲಿ ನಿವೃತ್ತಿಗೊಂಡ ನೌಕರರಿಗೆ ಪರಿಹಾರ ನೀಡಲು ಶುರುವಾಯಿತು ಎಂದರು.

ರಾಜ್ಯದ ಇತರೆ ಒಕ್ಕೂಟದಲ್ಲಿ ನಿವೃತ್ತಿಗೊಂಡ ನೌಕರರಿಗೆ ಚಾಮುಲ್‌ ನೀಡುವ ಪರಿಹಾರದಷ್ಟು ಮೊತ್ತ ನೀಡುತ್ತಿಲ್ಲ, ಚಾಮುಲ್‌ ದೊಡ್ಡ ಪ್ರಮಾಣದಲ್ಲಿ ನಿವೃತ್ತಿ ಪರಿಹಾರ ಧನ ನೀಡುತ್ತಿದೆ, ಇದು ಹೆಮ್ಮೆಯ ವಿಷಯ ಎಂದರು.

ಇಲ್ಲಿವರೆಗೂ ನಿವೃತ್ತಿ ಪರಿಹಾರದ ಸುಮಾರು ೨ ಕೋಟಿಗೂ ಹೆಚ್ಚು ಹಣವನ್ನು ನೂರಾರು ಮಂದಿಗೆ ನೀಡಲಾಗಿದೆ. ಸರ್ಕಾರಿ ಹುದ್ದೆಯಲ್ಲಿದ್ದವರು ನಿವೃತ್ತಿಗೊಂಡ ಬಳಿಕ ಪಿಂಚಣಿ ಸಿಗುತ್ತದೆ, ಆದರೆ ಸಂಘದ ನೌಕರರಿಗೆ ಕನಿಷ್ಠ ಹಣವಾದರೂ ಸಿಗಲಿ ಎಂದು ಚಾಮುಲ್‌ ನೌಕರರ ಪರವಾಗಿ ನಿರ್ಧಾರ ಮಾಡಿತು ಎಂದು ತಿಳಿಸಿದರು.

ರಾಜ್ಯ ಹಾಲು ಉತ್ಪಾದಕರ ಸಹಕಾರ ನೌಕರರ ಸಂಘದ ಅಧ್ಯಕ್ಷ ಎಸ್.ಶಿವನಾಗಪ್ಪ ಕೂಡ ನಿವೃತ್ತಿ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದರು. ಚಾಮುಲ್‌ ಆಡಳಿತ ಮಂಡಳಿ ನೌಕರರಿಗೆ ಅನುಕೂಲವಾಗಲಿ ಎಂದು ನಿವೃತ್ತಿ ಪರಿಹಾರ ಹಣ ನೀಡಲಾಗುತ್ತಿದೆ, ಸದ್ಭಳಕೆ ಮಾಡಿಕೊಳ್ಳಿ ಎಂದರು.

ಚಾಮುಲ್‌ ನಿರ್ದೇಶಕ ಎಂ.ಪಿ.ಸುನೀಲ್‌, ನಿವೃತ್ತಿಗೊಂಡ ಸೋಮಹಳ್ಳಿ ಡೈರಿ ಸಿಇಒ ಎಸ್.ಶಿವನಾಗಪ್ಪ ಮಾತನಾಡಿದರು.

ಚಾಮುಲ್‌ ವಿಸ್ತರಣಾಧಿಕಾರಿಗಳಾದ ಪ್ರಕಾಶ್‌, ಸಿದ್ದಲಿಂಗೇಶ್‌ ಕೋರೆ, ಉದಯ್‌, ಮುದ್ದಪ್ಪ, ಮಂಜೇಶ್‌ ಸೇರಿದಂತೆ ಸಂಘದ ಸಿಇಒಗಳು ಇದ್ದರು.