ಹಾಲು ಉತ್ಪಾದಕರ ಹಿತ ಕಾಯಲು ಚಾಮುಲ್ ಬದ್ದ: ನಿರ್ದೇಶಕ ಎಚ್.ಎಸ್.ಬಸವರಾಜು

| Published : Jul 08 2024, 12:37 AM IST

ಹಾಲು ಉತ್ಪಾದಕರ ಹಿತ ಕಾಯಲು ಚಾಮುಲ್ ಬದ್ದ: ನಿರ್ದೇಶಕ ಎಚ್.ಎಸ್.ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ವೆಂಕಟಯ್ಯನಛತ್ರ ಹಾಲು ಉತ್ಪಾದಕರ ಸಹಕಾರ ಸಂಘವು ೧೧ ಕೋಟಿ ರು.ಗೂ ಹೆಚ್ಚು ವಹಿವಾಟು ನಡೆಸಿ, ೧೧,೩೬,೨೮೫ ರು. ನಿವ್ವಳ ಲಾಭ ಗಳಿಸಿದೆ ಎಂದು ಚಾಮುಲ್ ಹಿರಿಯ ನಿರ್ದೇಶಕ ಎಚ್.ಎಸ್.ಬಸವರಾಜು ತಿಳಿಸಿದರು. ಚಾಮರಾಜನಗರದಲ್ಲಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಪ್ರೋತ್ಸಾಹಧನವಾಗಿ ೫೨ ಲಕ್ಷ ರು. । ೧೧.೩೬ ಲಕ್ಷ ನಿವ್ವಳ ಲಾಭ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವೆಂಕಟಯ್ಯನಛತ್ರ ಹಾಲು ಉತ್ಪಾದಕರ ಸಹಕಾರ ಸಂಘವು ೧೧ ಕೋಟಿ ರು.ಗೂ ಹೆಚ್ಚು ವಹಿವಾಟು ನಡೆಸಿ, ೧೧,೩೬,೨೮೫ ರು. ನಿವ್ವಳ ಲಾಭ ಗಳಿಸಿದ್ದು, ಜಿಲ್ಲೆಯಲೇ ಪ್ರಥಮ ವಾರ್ಷಿಕ ಸಭೆ ನಡೆಸುತ್ತಿರುವ ಕೀರ್ತಿ ಈ ಡೇರಿಗೆ ಇದೆ ಎಂದು ಚಾಮುಲ್ ಹಿರಿಯ ನಿರ್ದೇಶಕ ಹಾಗೂ ಸಂಘದ ಅಧ್ಯಕ್ಷ ಎಚ್.ಎಸ್.ಬಸವರಾಜು ತಿಳಿಸಿದರು.

ತಾಲೂಕಿನ ವೆಂಕಟಯ್ಯನ ಛತ್ರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸಂಘವು ಗುಣಮಟ್ಟದ ಹಾಲು ಸಂಗ್ರಹಣೆ ಮಾಡಿದ ಪರಿಣಾಮ ಹೆಚ್ಚಿನ ಲಾಭಾಂಶ ಬಂದಿದ್ದು, ಉತ್ಪಾದಕರಿಗೆ ೫.೨೦ ಲಕ್ಷ ರು. ಬೋನಸ್ ಅನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಸರ್ಕಾರದ ೫ ರು. ಪ್ರೋತ್ಸಾಹಧನವು ಉತ್ಪಾದಕರ ಖಾತೆಗೆ ನೇರವಾಗಿ ಜಮಾ ಆಗಿದ್ದು, ೫೨ ಲಕ್ಷ ರು. ಪ್ರೋತ್ಸಾಹಧನ ಬಂದಿದೆ. ರಾಸುಗಳ ವಿಮೆ ಯೋಜನೆಯಲ್ಲಿ ಅಕಾಲಿಕ ಮರಣ ಹೊಂದಿದ ೨೮ ರಾಸುಗಳಿಗೆ ೧೦.೮೦ ಲಕ್ಷ ರು. ವಿಮೆ ಪರಿಹಾರ ನೀಡಿದ್ದೇವೆ. ತಲಾ ೨೦ ಸಾವಿರ ರು. ಸಬ್ಸಿಡಿ ದರದಲ್ಲಿ ಐವರು ರೈತರಿಗೆ ಹಾಲು ಕರೆಯುವ ಯಂತ್ರ ಖರೀದಿ, ಏಳು ಮಂದಿ ರೈತರಿಗೆ ಮೇವು ಕಟಾವು ಯಂತ್ರಗಳನ್ನು ನೀಡಿದ್ದೇವೆ. ೧.೩೩ ಲಕ್ಷ ರು. ಸಬ್ಸಿಡಿ ದೊರೆತಿದೆ. ಶೇ.೯೫ ರಷ್ಟು ಹೆಚ್ಚು ಗುಣಮಟ್ಟ ಮತ್ತು ಪ್ಯಾಡ್ ಅಂಶವುಳ್ಳ ಹಾಲನ್ನು ಚಾಮುಲ್‌ಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಸಂಘದಲ್ಲಿದ್ದ ಕೋಡಿಉಗನೆ ಗ್ರಾಮಸ್ಥರು ಪ್ರತ್ಯೇಕ ಸಂಘ ರಚನೆಗೆ ಅರ್ಜಿ ಸಲ್ಲಿಸಿದ್ದು, ಸರ್ವಸದಸ್ಯರ ಸಭೆಯಲ್ಲಿ ಚರ್ಚೆ ಮಾಡಿ, ಗ್ರಾಮವನ್ನು ಬಿಡುಗಡೆಗೊಳಿಸಿ, ನೂತನ ಸಂಘ ರಚನೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ. ೪೦ ವರ್ಷಕ್ಕೂ ಹೆಚ್ಚು ಕಾಲ ನಮ್ಮ ಗ್ರಾಮದೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಗುಣಮಟ್ಟದ ಹಾಲು ನೀಡುವ ಮೂಲಕ ಸಂಘದ ಬೆಳವಣಿಗೆಗೆ ಕೋಡಿಉಗನೆ ಗ್ರಾಮಸ್ಥರು ಸಹ ಕಾರಣಕರ್ತರಾಗಿದ್ದಾರೆ ಎಂದು ಬಸವರಾಜು ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.

ಡೇರಿ ಕಾರ್ಯನಿರ್ವಾಹಕ ಅಧಿಕಾರಿ ಪುನೀತ್ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.

ಮತ್ತೊಬ್ಬ ನಿರ್ದೇಶಕ ಸದಾಶಿವಮೂರ್ತಿ, ಚಾಮುಲ್ ಸಹಾಯಕ ವ್ಯವಸ್ಥಾಪಕ ಡಾ.ಅಮರ್, ಸಂಘದ ಉಪಾಧ್ಯಕ್ಷ ವಿ.ಪದ್ಮರಾಜ್, ಚಾಮುಲ್ ಸಹಾಯಕ ವಿಸ್ತಾರಣಾಧಿಕಾರಿ ಭಾಗ್ಯರಾಜ್, ನಿರ್ದೇಶಕರಾದ ಶಿವರಾಜು, ಸಂಪತ್‌ಕುಮಾರ್, ಮಹದೇವಸ್ವಾಮಿ ಎನ್., ಮಹದೇವಸ್ವಾಮಿ ಬಿ.ಎನ್., ನಾಗರಾಜು ವಿ.ಬಿ., ಕೃಷ್ಣೇಗೌಡ, ಬಂಗಾರು, ರೇಣುಕಾ, ಜಯಮ್ಮ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಗಿರಿಮಲ್ಲು, ಸಿಬ್ಬಂದಿ ಮನು, ಮನೋಹರ, ಸುನಂದ, ಮನು ಹಾಗೂ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.