ಸಾರಾಂಶ
ಚಾಮರಾಜನಗರದಲ್ಲಿ ಚಾಮುಲ್ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ನಾಗೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಚಾಮರಾಜನಗರ: ಚಾಮುಲ್‌ನ ಒಕ್ಕೂಟದ ಅಧ್ಯಕ್ಷರಿಗೆ ಅಂಕಿ-ಅಂಶದ ಅರಿವಿಲ್ಲದೇ ಐಸ್ ಕ್ರೀಂ ಘಟಕ ಸ್ಥಾಪನೆಗೆ ಚಾಮುಲ್‌ನಲ್ಲಿ ₹17.70 ಕೋಟಿ ಹಣವಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಚಾಮುಲ್ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ನಾಗೇಂದ್ರ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಲ್ ಒಕ್ಕೂಟದ ಅಧ್ಯಕ್ಷರು ಹೇಳಿರುವಂತೆ ಚಾಮುಲ್‌ನಲ್ಲಿ ₹17.70 ಕೋಟಿ ಹಣವಿದೆ. ಆದರೆ ಐಸ್ ಕ್ರೀಂ ಘಟಕ ಸ್ಥಾಪನೆಗೆ ₹17.70 ಕೋಟಿ ಹಣವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ 11ರಿಂದ 12 ಕೋಟಿ ಹಣವನ್ನು ಮಾತ್ರ ಬಳಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು. ಚಾಮುಲ್‌ನಲ್ಲಿ ₹17.70 ಕೋಟಿ ಹಣದಲ್ಲಿ ಸಹಕಾರ ಸಂಘದ ನಿಯಮದ ಪ್ರಕಾರ 4ಕೋಟಿ ಹಣವನ್ನು ಠೇವಣಿ ಇಟ್ಟು ಬಳಸಿಕೊಳ್ಳಲು ಸಿಗುವ 11ರಿಂದ 12 ಕೋಟಿ ಹಣವನ್ನು ಚಾಮುಲ್‌ನ ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಬೇಕಿದೆ. ಆದ್ದರಿಂದ ಐಸ್ ಕ್ರೀಂ ಘಟಕ ಸ್ಥಾಪನೆ ಮಾಡಲು ಸುಮಾರು 40 ಕೋಟಿ ರು. ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದರು.ನಾನು ಅಧ್ಯಕ್ಷನಾಗಿದ್ದಾಗಲೇ ಐಸ್ ಕ್ರೀಂ ಘಟಕ ಸ್ಥಾಪನೆಗೆ ಒಪ್ಪಿಗೆ ನೀಡಿದ್ದು, ಕೇಂದ್ರ ಸರ್ಕಾರದ ಕೃಷಿ ಸಂಪದ ಯೋಜನೆಯಡಿಯಲ್ಲಿ 10 ಕೋಟಿ ಅನುದಾನ ಸಿಗುತ್ತದೆ ಎಂದು ಅದು ಕೈತಪ್ಪಿದ್ದರಿಂದ ಐಸ್‌ಕ್ರೀಂ ಘಟಕ ಯೋಜನೆಯನ್ನು ಕೈ ಬಿಡಬೇಕೇಂದು ಹಂಗಾಮಿ ಅಧ್ಯಕ್ಷರ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದರೂ ಐಸ್ ಕ್ರೀಂ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಒಕ್ಕೂಟ ಸಾಲ ಮಾಡುತ್ತಿರುವುದರಿಂದ ಹಾಲು ಉತ್ಪಾದಕರಿಗೆ ಅನ್ಯಾಯವಾಗುವುದಿಲ್ಲ ಎಂದು ಅಧ್ಯಕ್ಷರು ಹೇಳಿದ್ದಾರೆ. ಸಾಲ ಮಾಡುತ್ತಿರುವುದು ಹಾಲು ಉತ್ಪಾದಕರ ತಲೆ ಮೇಲೆಯೇ ಅಲ್ಲವೇ, ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಐಸ್ ಕ್ರೀಂ ಘಟಕ ನಿರ್ಮಾಣಕ್ಕೆ ನನ್ನ ವಿರೋಧವಿದೆ ಒಕ್ಕೂಟದ ವಿರುದ್ಧ ಅಲ್ಲ ಎಂದರು.
ಹಾಲು ಉತ್ಪಾದಕ ರೈತರ ವಿರೋಧವಿರುವುದರಿಂದ ಐಸ್ ಕ್ರೀಂ ಘಟಕ ಸ್ಥಾಪನೆ ಮಾಡುವುದು ಕೈಬಿಡಬೇಕು. ಇಲ್ಲದಿದ್ದರೆ ಹಾಲು ಉತ್ಪಾದಕ ರೈತರೊಂದಿಗೆ ಐಸ್ ಕ್ರೀಂ ಘಟಕ ಸ್ಥಾಪನೆ ವಿರುದ್ಧ ಹಂತ ಹಂತವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪಣಿರಾಜ್ ಮೂರ್ತಿ ಇದ್ದರು.