ಸಾರಾಂಶ
ಕಾರ್ಖಾನೆ ಆಡಳಿತ ಮಂಡಳಿ ಮತ್ತು ರೈತರ ನಡುವೆ ಉತ್ತಮ ಸಂಬಂಧ ಇದ್ದು, ಅದಕ್ಕೆ ಧಕ್ಕೆ ತರಲು ಕೆಲವು ಕಿಡಿಗೇಡಿಗಳು ಕಬ್ಬಿನ ತೂಕದಲ್ಲಿ ಮೊಸ ಮಾಡುತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವ್ಯಕ್ತಿಗಳಿಗೆ ಶೋಭೆ ತರುವಂತದ್ದಲ್ಲ.
ಕನ್ನಡಪ್ರಭ ವಾರ್ತೆ ಭಾರತೀನಗರ
ಕಬ್ಬಿನ ತೂಕದಲ್ಲಿ ಶ್ರೀಚಾಮುಂಡೇಶ್ವರಿ ಕಾರ್ಖಾನೆ ವ್ಯತ್ಯಾಸ ಮಾಡುತ್ತಿದೆ ಎಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಟ್ಟಿದ್ದಾರೆ. ಇಂತಹ ಅಪಪ್ರಚಾರಕ್ಕೆ ರೈತರು ಕಿವಿಗೊಡಬೇಡಿ ಎಂದು ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಆರ್.ಮಣಿ ಮನವಿ ಮಾಡಿದರು.ಕಾರ್ಖಾನೆ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆ ರೈತಪರ ಕಾಳಜಿ ಹೊಂದಿದೆ. ರೈತರಿಗೆ ಅನ್ಯಾಯ ಮಾಡುವಂತಹ ಕೆಲಸವನ್ನು ಕಾರ್ಖಾನೆ ಇತಿಹಾಸದಲ್ಲೇ ಮಾಡಿಲ್ಲ, ಮಾಡುವುದಿಲ್ಲ. ಯಾರೋ ಕಿಡಿಗೇಡಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.
ಕಾರ್ಖಾನೆಯಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣಕಾಸಿನ ವ್ಯವಸ್ಥೆಯಲ್ಲಿ 15-20 ದಿನಗಳು ಬಾಕಿ ಹಣ ಪಾವತಿಗಾಗಿ ವಿಳಂಬ ಆಗಬಹುದೇ ಹೊರತು ಯಾವುದೇ ಅನ್ಯಾಯಗಳು ನಡೆಯುತ್ತಿಲ್ಲ ಎಂದರು.ಕಾರ್ಖಾನೆ ಆಡಳಿತ ಮಂಡಳಿ ಮತ್ತು ರೈತರ ನಡುವೆ ಉತ್ತಮ ಸಂಬಂಧ ಇದ್ದು, ಅದಕ್ಕೆ ಧಕ್ಕೆ ತರಲು ಕೆಲವು ಕಿಡಿಗೇಡಿಗಳು ಕಬ್ಬಿನ ತೂಕದಲ್ಲಿ ಮೊಸ ಮಾಡುತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವ್ಯಕ್ತಿಗಳಿಗೆ ಶೋಭೆ ತರುವಂತದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಖಾನೆ ಆವರಣದಲ್ಲಿರುವ ತೂಕ ಮಾಪನ ಕೇಂದ್ರ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಲಾರಿ, ಟ್ಯಾಕ್ಟರ್, ಕಬ್ಬಿನ ಗಾಡಿಗಳ ತೂಕ ಕೇಂದ್ರದ ಬಳಿ ಡಿಜಿಟಲ್ ತೂಕ ಮಾಪನ ಅಳವಡಿಸಿರುವುದು ರೈತರಿಗೆ ಮುಕ್ತವಾಗಿ ಕಾಣುತ್ತದೆ ಸ್ಪಷ್ಟಪಡಿಸಿದರು.