ಅಮರಾವತಿ ಕ್ಯಾಂಪಸ್‌ಗೆ ಭೇಟಿ ನೀಡಿ ಅಲ್ಲಿ ಮುಕ್ತಾಯ ಹಂತದಲ್ಲಿರುವ ವಿವಿಯ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಬೆಂಗಳೂರು ಉತ್ತರ ವಿವಿಯ ಕುಲಪತಿ ಡಾ.ಬಿ.ಕೆ. ರವಿಯವರು ಜಂಗಮಕೋಟೆ ಕ್ರಾಸ್ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಅಮರಾವತಿ ಕ್ಯಾಂಪಸ್‌ನಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಮುಗಿಸಿ ವಿವಿಗೆ ಹಸ್ತಾಂತರಿಸಲು ಸೂಚನೆ ನೀಡಿದರು.

ಅಮರಾವತಿ ಕ್ಯಾಂಪಸ್‌ಗೆ ಭೇಟಿ ನೀಡಿ ಅಲ್ಲಿ ಮುಕ್ತಾಯ ಹಂತದಲ್ಲಿರುವ ವಿವಿಯ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಬೆಂಗಳೂರು ಉತ್ತರ ವಿವಿ ಅಮರಾವತಿ ಕ್ಯಾಂಪಸ್‌ನಲ್ಲಿ ಉತ್ತಮ ಪರಿಸರದೊಂದಿಗೆ ವಿದ್ಯಾರ್ಥಿ ಸ್ನೇಹಿ ವಾತಾವರಣ ಸೃಷ್ಟಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿಸುವ ಕಾರ್ಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರ ಅಗತ್ಯ, ಶೀಘ್ರ ಕಾಮಗಾರಿ ಮುಗಿದು ಇಲ್ಲೇ ಮುಂದಿನ ಶೈಕ್ಷಣಿಕ ವರ್ಷದಿಂದ ವಿವಿಯ ಕೆಲಸಕಾರ್ಯಗಳು ನಡೆಯಲಿ ಎಂದರು.

168 ಎಕರೆ ಜಾಗ ನಮ್ಮ ಸ್ವಾಧೀನಕ್ಕೆ ಸಿಕ್ಕಿದೆ, ವಿವಿ ಕಾಮಗಾರಿ ಪೂರ್ಣಗೊಳ್ಳುವ ಕಾಲ ಹತ್ತಿರವಾಗಿದೆ, ವಿವಿ ಕ್ಯಾಂಪಸ್‌ ಆರಂಭವಾಗುವಷ್ಟರೊಳಗೆ ಇಲ್ಲಿ ನೆಟ್ಟಿರುವ ಗಿಡಮರಗಳಿಂದ ಕೂಡಿದ ಸುಂದರ ಪರಿಸರ ಕಲಿಕಾರ್ಥಿಗಳನ್ನು ಕೈಬೀಸಿ ಕರೆಯಲಿದೆ ಎಂದರು.

ಉತ್ತಮ ಕಲಿಕೆಗೆ ಸುಂದರ ಪರಿಸರ, ಪೂರಕ ವಾತಾವರಣ ಸೃಷ್ಟಿ ಅಗತ್ಯ, ಬೆಂಗಳೂರು ಉತ್ತರ ವಿವಿಯಲ್ಲಿ ಈ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಎಲ್ಲಾ ಸಂಯೋಜನೆಗಳನ್ನು ಆರಂಭಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಬೆಂಗಳೂರು ಉತ್ತರ ವಿವಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ರಾಮಚಂದ್ರ, ಅಭಿಯಂತರ ಕೌಶಿಕ್, ವಿವಿಯ ಶ್ರೀನಿವಾಸರಾವ್ ಇದ್ದರು.