ಸಾರಾಂಶ
ಫೋಟೋ- 9ಎಂವೈಎಸ್ 59- ಕೆ.ಆರ್. ನಗರ ಪಟ್ಟಣದ ಹೊರ ವಲಯದಲ್ಲಿನ ಹಳೆ ಎಡತೊರೆಯ ಹಾಸನ- ಮೈಸೂರು ರಸ್ತೆಯಲ್ಲಿ ಮಹದೇವ ನಾಯಕನ ಶವವಿದ್ದ ತುರ್ತು ವಾಹನವನ್ನು ನಿಲ್ಲಿಸಿ ಚಂದಗಾಲು ಗ್ರಾಮಸ್ಥರು ಪ್ರತಿಭಟಿಸಿದರು.
---ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಚೀರನಹಳ್ಳಿ ಗ್ರಾಮದ ಲೋಕೇಶನ ಬೆದರಿಕೆಯಿಂದ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟ ಮಹದೇವನಾಯಕ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ ಪರಿಹಾರ ಘೋಷಿಸಬೇಕು ಮತ್ತು ದೂರು ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ ಪೊಲೀಸರ ವಿರುದ್ದವು ಎಸ್.ಸಿ, ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದು ಚಂದಗಾಲು ಗ್ರಾಮಸ್ಥರು ಶವದ ಮುಂದೆ ಪ್ರತಿಭಟಿಸಿದರು.ಪಟ್ಟಣದ ಹೊರ ವಲಯದ ಅರ್ಕೇಶ್ವರ ದೇವಾಲಯದ ಬಳಿ ಇರುವ ಹಾಸನ-ಮೈಸೂರು ಮುಖ್ಯರಸ್ತೆಯಲ್ಲಿ ಮೃತ ಮಹದೇವನಾಯಕನ ಶವವಿದ್ದ ತುರ್ತುವಾಹನವನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ನೂರಾರು ಮಂದಿ ಗ್ರಾಮಸ್ಥರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಈ ಸಂದಭರ್ದದಲ್ಲಿ ಮಾತನಾಡಿ, ರಾಜ್ಯ ನಾಯಕರ ಯುವ ಸೇನೆಯ ಅಧ್ಯಕ್ಷ ದೇವರಾಜ್ ಟಿ. ಕಾಟೂರು, ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಬೇಡಿಕೆಯಂತೆ ಪರಿಹಾರ ನೀಡಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಪ್ರತಿಭಟನಾ ನಿರತರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್. ನಾಗೇಶ್ ಮತ್ತು ಡಾ. ನಂದಿನಿ ಘಟನೆ ಸಂಬಂಧ ತಪ್ಪಿಸ್ಥ ಪೊಲೀಸರ ವಿರುದ್ಧ ತನಿಖೆ ನಡೆಸಿ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದರ ಜತೆಗೆ ಸರ್ಕಾರದಿಂದ ದೊರೆಯುವ ಎಲ್ಲಾ ಪರಿಹಾರ ಮತ್ತು ಸವಲತ್ತು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.
ಮಹದೇವನಾಯಕನ ಶವವನ್ನು ರಸ್ತೆಯ ಮಧ್ಯೆಯಿಟ್ಟು ಒಂದು ಘಂಟೆಗೂ ಹೆಚ್ಚು ಕಾಲ ಚಂದಗಾಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ವಾಹನ ದಟ್ಟಣೆಯಿಂದ ಸಂಚಾರ ವ್ಯತ್ಯಾಯವಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಾರಿ ಬಿಗಿ ಪೊಲೀಸ್ ಬಂದೋ ಬಸ್ತ್‌ನಿಯೋಜಿಸಲಾಗಿತ್ತು.ನಂತರ ಮಹದೇವನಾಯಕನ ಶವವನ್ನು ಪೊಲೀಸ್ ಭದ್ರತೆಯೊಂದಿಗೆ ಚಂದಗಾಲು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಈ ವೇಳೆ ಶಾಸಕ ಡಿ. ರವಿಶಂಕರ್ ಸೇರಿದಂತೆ ನಾಯಕ ಸಮಾಜದ ಪ್ರಮುಖರು ಮತ್ತು ಮೃತನ ಕುಟುಂಬಸ್ಥರು ಇದ್ದರು.