ದಾಬಸ್‍ಪೇಟೆ: ಕಳೆದ ಫೆ.7ರಂದು ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ (37) ಮೃತದೇಹ ಹತ್ತು ದಿನಗಳ ಬಳಿಕ ಸ್ವಗ್ರಾಮಕ್ಕೆ ತಲುಪಿದ್ದು ಮೃತನ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು.
ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್, ಕೆನಡಾ ದೇಶದ ಕೆನಡಾದ ಬ್ರೂನ್ ಟಾನ್ ನಗರದಲ್ಲಿ ಕಳೆದ ಆರು ವರ್ಷದಿಂದ ಸಾಫ್ಟ್ ವೇರ್ ಇಂಜಿನಿಯರ್ ಕೆಲಸ ಮಾಡುತ್ತಾ, ತನ್ನ ಕುಟುಂಬದ ನಿರ್ವಹಣೆ ಜೊತೆಗೆ, ಸ್ನೇಹಿತರು, ಕನ್ನಡಿಗರ ಯೋಗಕ್ಷೇಮ, ಕನ್ನಡದ ಭಾಷಾಭಿಮಾನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ನಾಡು ನುಡಿಯ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು.10 ದಿನಗಳ ಬಳಿಕ ಮೃತದೇಹ ಸ್ವಗ್ರಾಮಕ್ಕೆ: ಕಳೆದ 7ರಂದು ಕೆನಡಾದಲ್ಲಿ ಶಂಕಿತರ ಗುಂಡಿನ ದಾಳಿಗೆ ಬಲಯಾಗಿದ್ದ ಚಂದನ್, 10 ದಿನಗಳ ನಂತರ ಕಾರ್ಗೊ ವಿಮಾನದ ಮೂಲಕ ಭಾನುವಾರ ರಾತ್ರಿಯೇ ಜಿಲ್ಲಾಡಳಿತ ಹಾಗೂ ಸರ್ಕಾರದ ಸಹಾಯದಿಂದ ಬೆಂಗಳೂರು ತಲುಪಿತು. ಜಿಲ್ಲಾಧಿಕಾರಿ ಕಚೇರಿ, ನೆಲಮಂಗಲ ದಂಡಾಧಿಕಾರಿ ತಂಡ ಮೃತದೇಹವನ್ನು ಸ್ವೀಕರಿಸಿದರು. ನಂತರ ಮಧ್ಯಾಹ್ನ 3 ಗಂಟೆಯವರೆಗೂ ತ್ಯಾಮಗೊಂಡ್ಲು ಗ್ರಾಮಸ್ಥರು ಮೃತರ ಅಂತಿಮ ದರ್ಶನ ಪಡೆದರು.
ಎಲ್ಲರಿಗೂ ಧನ್ಯವಾದ: ಚಂದನ್ ತಂದೆ ನಂದಕುಮಾರ್ ಪ್ರತಿಕ್ರಿಯಿಸಿ ಭಾನುವಾರ ತಡರಾತ್ರಿ 11.30 ಸುಮಾರಿಗೆ ಮಗನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬಂದು ತಲುಪಿದೆ. ರಾಯಭಾರ ಕಚೇರಿಯಿಂದ ಹಿಡಿದು ಜಿಲ್ಲಾಡಳಿತ, ತಾಲೂಕು ಆಡಳಿತ ನೀಡಿದ ಭರವಸೆಯಂತೆ, ಸಕಲ ರೀತಿಯಲ್ಲಿ ಸಹಕಾರ ಕೊಟ್ಟು ಮಗನ ಪಾರ್ಥಿವ ಶರೀರ ತಲುಪಿಸಿದೆ. ಪಾರ್ಥಿವ ಶರೀರ ಬೆಂಗಳೂರಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಉಪತಹಸೀಲ್ದಾರರು, ಮಗನ ಸ್ನೇಹಿತರು, ಹಿತೈಷಿಗಳು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.ಚಂದನ್ ತಾಯಿ ಕಣ್ಣೀರು:
ನನ್ನ ಮಗ ಕೆನಡಾದಲ್ಲಿ ಸ್ವಂತ ಮನೆ ಮಾಡುವ ಕನಸು ಹೊತ್ತಿದ್ದ. ನಮ್ಮನ್ನು ಕೆನಡಾಗೆ ಕರೆಸಿಕೊಳ್ಳಬೇಕು ಅಂತ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಈ ಬಾರಿ ದೇಶಕ್ಕೆ ಬಂದಾಗ ಮದುವೆ ಮಾಡಬೇಕು ಎಂದ ಕೊಂಡಿದ್ದೆವು, ನಮ್ಮ ಊರಿಗೆ ವಾಪಸ್ ಬಂದು ಬಿಡು ಎಂದು ಸದಾ ಹೇಳುತ್ತಿದ್ದೆವು. ಮದುವೆ ಮಾಡಿಕೊಂಡು ನಮ್ಮ ಜೊತೆಗೆ ಇರು ಎಂದು ಕೇಳಿಕೊಂಡಿದ್ದೆವು. ಈಗ ಅವನ ಮೃತದೇಹ ಬಂದಿದೆ ಎಂದು ಮಗನ ನೆನೆದು ಚಂದನ್ ತಾಯಿ ಶೈಲಜಾ ಕಣ್ಣೀರು ಹಾಕಿದರು.
ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ನಮ್ಮೂರ ಹೆಮ್ಮೆಯ ಹುಡುಗ ಚಂದನ್ ಕಳೆದುಕೊಂಡು ಅತೀವ ದುಃಖವಾಗಿದೆ. ಇಂಜಿನಿಯರ್ ಆಗಿ ಕೆನಡಾದಲ್ಲಿ ಸಾಧನೆ ಮಾಡಿ ಕನ್ನಡ ಭಾಷಾ ಕಾಳಜಿ ತೋರಿದ್ದ ಚಂದನ್ ಕುಮಾರ್‌ನನ್ನು ಕಳೆದುಕೊಂಡಿದ್ದೇವೆ. ಚಂದನ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ದೇವರು ಕರುಣಿಸಲಿ ಎಂದರು.
ವಿದೇಶಕ್ಕೆ ಹೋಗುವವರಿಗೆ ಮುನ್ನಚ್ಚರಿಕೆ:ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಪಾರ್ಥಿವ ಶರೀರ ತರುವಲ್ಲಿ ಎಂಬೆಸಿ ಹಾಗೂ ವಿದೇಶಾಂಗ ಇಲಾಖೆ ಸಹಕರಿಸಿದೆ. ಈ ರೀತಿಯ ಘಟನೆಗಳು ಮುಂದೆ ನಡೆಯದಿರುವುದಕ್ಕೆ ಭದ್ರತೆ ಒದಗಿಸಲಾಗುತ್ತದೆ. ತಂದೆ ತಾಯಿಯ ಕೊನೆ ಆಸೆಯನ್ನು ನಾವು ಈಡೇರಿಸಿದ್ದೇವೆ, ಕೇಂದ್ರದ ಸಹಕಾರದಿಂದ ಮೃತದೇಹ ಸ್ವಗ್ರಾಮಕ್ಕೆ ತಂದಿದ್ದೇವೆ. ಗುಂಡಿನ ದಾಳಿ ಬಗ್ಗೆ ಅಲ್ಲಿನ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಬೇಕಾಗಿದೆ. ಚಂದನ್ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ. ವಿದೇಶಗಳಿಗೆ ಹೋಗುವ ಯುವಕರು ಮುನ್ನೆಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ಸಾವಿಗೆ ನ್ಯಾಯ ಒದಗಿಸಿ:ಕೆನಡಾದ ಖಾಸಗಿ ಕಂಪನಿಯ ಉದ್ಯೋಗಿ ಚಂದನ್ ಹತ್ಯೆ ಹಲವು ಅನುಮಾನ ಮೂಡಿಸಿದೆ. ಕನ್ನಡ ಪರ ಹೋರಾಟಕ್ಕೋ..? ಹಿಂದೂ ಕಾರ್ಯಕ್ರಮಕ್ಕೋ..? ಅಥವಾ ಬೇರೆ ಯಾವುದಾದರು ವೈಯಕ್ತಿಕ ಕಾರಣಕ್ಕೆ ಕೊಲೆ ಆಗಿದ್ಯಾ ಎಂಬುದು ತನಿಖೆ ನಂತರವೇ ತಿಳಿಯಬೇಕಿದೆ. ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಕೊಲೆಗೆ ಕಾರಣ ಹಾಗೂ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಅಂತ್ಯಸಂಸ್ಕಾರ:ಆರ್ಯವೈಶ್ಯ ಸಂಘದ ಎಲ್ಲರೂ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಆರ್ಯವೈಶ್ಯ ಸಂಪ್ರದಾಯದಂತೆ ಮುಕ್ತಿಧಾಮದಲ್ಲಿ ಅಂತಿಮ ವಿಧಿವಿಧಾನ ಮಾಡಲಾಯಿತು.
ಕೋಟ್ ..........ಕೆನಡಾದಲ್ಲಿ ಮೃತಪಟ್ಟ ಚಂದನ್ ಕುಮಾರ್ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರ ನೀಡಿದ್ದು, ಮೃತದೇಹ ತರಲು ಸಹಕಾರ ನೀಡುತ್ತೇನೆಂದು ತಿಳಿಸಿದಂತೆ ನಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಕುಟುಂಬದ ಜೊತೆ ನಿಲ್ಲುತ್ತೇನೆ. ಮೃತ ಚಂದನ್ ಆತ್ಮಕ್ಕೆ ಶಾಂತಿ ಸಿಗಲಿ.
-ಶ್ರೀನಿವಾಸ್, ಶಾಸಕರು, ನೆಲಮಂಗಲಪೋಟೋ 5 :
ಮೃತ ಚಂದನ್ ಅಂತಿಮ ದರ್ಶನ ಪಡೆದ ಸಂಸದ ಡಾ.ಕೆ.ಸುಧಾಕರ್.ಪೋಟೋ 7 :
ಮೃತಪಟ್ಟ ಚಂದನ್ ಕುಮಾರ್