ದೆಹಲಿ ಪೇಜಾವರ ಮಠದಲ್ಲಿ ಚಂಡಿಕಾ ಯಾಗ: ಸಿಎಂ ರೇಖಾ ಗುಪ್ತ ಭಾಗಿ

| Published : Oct 03 2025, 01:07 AM IST

ಸಾರಾಂಶ

ವಸಂತಕುಂಜ್‌ನಲ್ಲಿರುವ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ಗುರುವಾರ ವಿಜಯದಶಮೀ ಪ್ರಯುಕ್ತ ಲೋಕಕಲ್ಯಾಣಾರ್ಥ ಮತ್ತು ವಿಶೇಷವಾಗಿ ಸಮಸ್ತ ದೆಹಲಿ ಜನತೆಯ ಕ್ಷೇಮ ಸಮೃದ್ಧಿಗಾಗಿ ಪ್ರಾರ್ಥಿಸಿ ಚಂಡಿಕಾ ಯಾಗ ವೈಭವದಿಂದ ನೆರವೇರಿತು.

ಉಡುಪಿ: ನವದೆಹಲಿ ವಸಂತಕುಂಜ್‌ನಲ್ಲಿರುವ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ಗುರುವಾರ ವಿಜಯದಶಮೀ ಪ್ರಯುಕ್ತ ಲೋಕಕಲ್ಯಾಣಾರ್ಥ ಮತ್ತು ವಿಶೇಷವಾಗಿ ಸಮಸ್ತ ದೆಹಲಿ ಜನತೆಯ ಕ್ಷೇಮ ಸಮೃದ್ಧಿಗಾಗಿ ಪ್ರಾರ್ಥಿಸಿ ಚಂಡಿಕಾ ಯಾಗ ವೈಭವದಿಂದ ನೆರವೇರಿತು.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ದಂಪತಿ ಯಾಗದಲ್ಲಿ ಭಾಗಿಯಾಗಿದ್ದು, ಅವರ ಹೆಸರು ಜನ್ಮ ನಕ್ಷತ್ರ ರಾಶಿ ಉಲ್ಲೇಖಿಸಿಯೇ ಯಾಗದ ಸಂಕಲ್ಪ ನೆರವೇರಿಸಲಾಯಿತು. ನಂತರ ರೇಖಾ ಅವರು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕರಿಸಿದರು.

ಶ್ರೀಗಳು ಈ ಯಜ್ಞದಿಂದ ಲೋಕ ಕ್ಷೇಮವಾಗಲಿ, ಸಮಸ್ತ ದೆಹಲಿ ಜನತೆಗೆ ಶಾಂತಿ ಸುಭಿಕ್ಷೆ ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸಿ, ದೆಹಲಿ ಅಭಿವೃದ್ಧಿಗಾಗಿ ರೇಖಾ ಗುಪ್ತಾ ನೇತೃತ್ವದ ಸರ್ಕಾರ ಕೈಗೊಳ್ಳುತ್ತಿರುವ ಎಲ್ಲಾ ಕಾರ್ಯಗಳೂ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.ವಿಶೇಷವಾಗಿ ಯಮುನಾ ನದಿಯನ್ನು ವಿಷಮುಕ್ತಗೊಳಿಸುವ ಕಾರ್ಯ ಅತ್ಯಂತ ಶ್ಲಾಘನೀಯ.‌ ಈ ಕಾರ್ಯದಲ್ಲಿ ಸರ್ಕಾರದ ಜೊತೆ ಸಮಸ್ತ ದೆಹಲಿ ಜನತೆ ಕೈಜೋಡಿಸಿ ಯಶಸ್ವಿಗೊಳಿಸುವಂತಾಗಬೇಕು ಎಂದು ಹಾರೈಸಿದರು.ಶ್ರೀಗಳು ಉತ್ತರಭಾರತ ತೀರ್ಥ ಕ್ಷೇತ್ರ ಸಂಚಾರದಲ್ಲಿರುವ ಹಿನ್ನೆಲೆಯಲ್ಲಿ ನವದೆಹಲಿಯ ಮಠದ ಶಾಖೆಯಲ್ಲಿ ಅವರ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮುಖ್ಯಮಂತ್ರಿ ರೇಖಾ ಅವರನ್ನು ಮಠದ ಪರವಾಗಿ ವ್ಯವಸ್ಥಾಪಕರೂ ಮತ್ತು ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ ವಿಠೋಬಾಚಾರ್ಯರು, ಶ್ರೀಗಳ ಆಪ್ತ ಕೃಷ್ಣಮೂರ್ತಿ ಭಟ್, ಆಡಳಿತ ಮಂಡಳಿಯ ಅರವಿಂದ್, ಸದಸ್ಯರು ಮಂತ್ರ ವಾದ್ಯಘೋಷಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು.‌