ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ರಾಜಕೀಯ ವೃತ್ತಿ ಜೀವನದಲ್ಲಿ ಮಾಜಿ ಶಾಸಕ ಡಿ.ಬಿ. ಚಂದ್ರೇಗೌಡ ಎಂದೂ ದ್ವೇಷದ ರಾಜಕಾರಣ ಮಾಡಲಿಲ್ಲ. ಚಳವಳಿ ಕಟ್ಟಿ ಸಾರ್ವಜನಿಕರ ಪರವಾಗಿ ದುಡಿದಿದ್ದರು. ಅವರು ಬಿಜೆಪಿ ಸೇರಿದರೂ ಕೊನೆಯವರೆಗೆ ಜಾತ್ಯತೀತ ಸಿದ್ಧಾಂತ ಪ್ರತಿಪಾದಿಸಿದ್ದರು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಶುಕ್ರವಾರ ಡಿ.ಬಿ.ಚಂದ್ರೇಗೌಡ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಡಿ.ಬಿ.ಚಂದ್ರೇಗೌಡ ನುಡಿನಮನ, ಶ್ರದ್ಧಾಂಜಲಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೌಲ್ಯಗಳನ್ನು ಪ್ರತಿಪಾದಿಸಿ ಚಂದ್ರೇಗೌಡರು ಧ್ರುವತಾರೆ ಆಗಿ ಮಿನುಗಿದ್ದರು. ಎಲ್ಲರಲ್ಲಿಯೂ ಗಾಂಧಿ, ಗೋಪಾಲಗೌಡರ ವ್ಯಕ್ತಿತ್ವ ನಿರೀಕ್ಷೆ ಸಲ್ಲದು. ಎಲ್ಲ ಬಗೆಯ ಅಧಿಕಾರ ಅನುಭವಿಸಿದ್ದರೂ, ಆರ್ಥಿಕವಾಗಿ ಚಂದ್ರೇಗೌಡರು ಕುಗ್ಗಿದ್ದರು ಎಂದರು.ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಕಳೆದುಕೊಂಡವರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಆದರೆ, ಚಂದ್ರೇಗೌಡರ ಅವಧಿಯಲ್ಲಿ ವರಾಹಿ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ಮಂಜೂರು ಮಾಡಿಸಿದ್ದಾರೆ. ಅವರು ಕಾಂಗ್ರೆಸ್‌ನಲ್ಲೇ ಉಳಿದಿದ್ದರೆ, ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಚಂದ್ರೇಗೌಡರು ಅದೃಷ್ಟವಂತರಾಗಿದ್ದು, ದುರಾದೃಷ್ಟವಂತರೂ ಹೌದು. ವ್ಯಕ್ತಿಯ ಪೂರ್ವ ಹಿನ್ನಲೆ ತಿಳಿಯದೇ ಟೀಕೆ ಮಾಡಬಾರದು. ಕ್ಷೇತ್ರದಲ್ಲಿ ಕೆಲಸ ಮಾಡಲಿಲ್ಲ ಎಂಬ ಟೀಕೆ ಸುಳ್ಳು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ಶಿಸ್ತುಬದ್ಧ ನಿಲುವುಗಳ ಮೂಲಕ ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವ ವ್ಯಕ್ತಿತ್ವ ಅವರಲ್ಲಿತ್ತು. ಆಡಳಿತವನ್ನು ಸರಿಯಾಗಿ ನಿಯಂತ್ರಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡುವ ವಿಷಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರು ಎಂದು ಹೇಳಿದರು.ಜನತಾ ಪರಿವಾರದ ಹಿರಿಯ ಮುಖಂಡ ಪ್ರಕಾಶ ಶೆಟ್ಟಿ ಸಭೆ ಅಧ್ಯಕ್ಷತೆ ವಹಿಸಿದ್ದರು. ವಕೀಲ ಸುಧೀರ್‌ಕುಮಾರ್ ಮುರೊಳ್ಳಿ, ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್, ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ ಶೆಟ್ಟಿ, ಸಾಹಿತಿ ಶಿವಾನಂದ ಕರ್ಕಿ, ಮುಖಂಡರಾದ ಡಿ.ಎಸ್. ವಿಶ್ವನಾಥ ಶೆಟ್ಟಿ, ಕೆಸ್ತೂರು ಮಂಜುನಾಥ್, ಭಾಸ್ಕರ್ ಜೋಯ್ಸ್, ಹೊರಬೈಲು ರಾಮಚಂದ್ರ ನುಡಿನಮನ ಸಲ್ಲಿಸಿದರು.
- - -ಟಾಪ್ ಕೋಟ್
ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗಾಗಿ ಚಂದ್ರೇಗೌಡರು ಮಾಡಿದ ಕೆಲಸ ಸ್ಮರಣೀಯ. ಅವರಿಗೆ ಕ್ಷೇತ್ರದಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಗೆ ಕಡಿಮೆ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬುದಕ್ಕೆ ಕಾರಣ ಬೇರೆ ಇರಬಹುದು. ಅಭಿಮಾನಿಗಳ ಸಭೆಯಲ್ಲಿ ಸೇರಿರುವ ಸಂಖ್ಯೆಯನ್ನೇ ಗಮನಿಸಿದರೆ ಚಂದ್ರೇಗೌಡರ ಮೇಲಿನ ಅಭಿಮಾನ ಕ್ಷೇತ್ರದ ಜನರಿಗೆ ಎಷ್ಟಿತ್ತು ಎಂಬುದನ್ನು ಕಾಣಬಹುದು- ಕಿಮ್ಮನೆ ರತ್ನಾಕರ್, ಮಾಜಿ ಸಚಿವ
- - - -17ಟಿಟಿಎಚ್01:ತೀರ್ಥಹಳ್ಳಿ ಗಾಯಿತ್ರಿ ಮಂದಿರದಲ್ಲಿ ಶುಕ್ರವಾರ ಡಿ.ಬಿ.ಚಂದ್ರೇಗೌಡ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಡಿ.ಬಿ.ಚಂದ್ರೇಗೌಡ ನುಡಿನಮನ, ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗಣ್ಯರು ಪುಷ್ಪನಮನ ಸಲ್ಲಿಸಿದರು.