ಯಶ್‌ ಕುಮಾರ್‌ ಶರ್ಮ ಅವರನ್ನು ಸರ್ಕಾರ ನಿಯೋಜನೆ ಮಾಡಿದ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮ ಅವರು ಅಧಿಕಾರ ವಹಿಸಿಕೊಳ್ಳದಂತೆ ತಡೆಹಿಡಿಯಲಾಗಿದೆ.

ಬಳ್ಳಾರಿ: ನಗರ ಡಿಎಸ್‌ಪಿ ಚಂದ್ರಕಾಂತ ನಂದಾ ರೆಡ್ಡಿ ಎಂಬುವವರ ಜಾಗಕ್ಕೆ ತಿಪಟೂರಿನ ಉಪ ವಿಭಾಗ ಎಎಸ್‌ಪಿಯಾಗಿದ್ದ ಯಶ್‌ ಕುಮಾರ್‌ ಶರ್ಮ ಅವರನ್ನು ಸರ್ಕಾರ ನಿಯೋಜನೆ ಮಾಡಿದ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮ ಅವರು ಅಧಿಕಾರ ವಹಿಸಿಕೊಳ್ಳದಂತೆ ತಡೆಹಿಡಿಯಲಾಗಿದೆ. ಸದ್ಯ ಹಿಂದಿನ ಡಿವೈಎಸ್ಪಿ ಚಂದ್ರಕಾಂತ ರೆಡ್ಡಿ ಅವರನ್ನೇ ಮುಂದುವರಿಸಲಾಗಿದೆ.

ಹೊಸದಾಗಿ ಬಂದಿದ್ದ ಡಿಎಸ್‌ಪಿಗೆ ಅಧಿಕಾರ ವಹಿಸಿಕೊಳ್ಳದಂತೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಚಂದ್ರಕಾಂತ ನಂದಾರೆಡ್ಡಿ ಮುಂದುವರಿಯುವ ಸಾಧ್ಯತೆಯಿದೆ.

ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಪರ ಕೆಲಸ ಮಾಡಿರುವ ಚಂದ್ರಕಾಂತ ನಂದಾ ರೆಡ್ಡಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು.

ಗಲಭೆ ಪ್ರಕರಣದಲ್ಲಿ ಎಸ್ಪಿ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿದ ಸರ್ಕಾರ, ಬಳ್ಳಾರಿ ವಲಯ ಪೊಲೀಸ್‌ ಉಪ ಮಹಾ ನಿರೀಕ್ಷಕಿಯಾಗಿದ್ದ ವರ್ತಿಕಾ ಕಟಿಯಾರ್‌ ಅವರನ್ನು ಎತ್ತಂಗಡಿ ಮಾಡಿತು. ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ನಾಯಕರು ಗಲಭೆ ಪ್ರಕರಣದಲ್ಲಿ ನಗರ ಶಾಸಕರ ಪರ ಕೆಲಸ ಮಾಡಿರುವ ಡಿಎಸ್‌ಪಿ ಚಂದ್ರಕಾಂತ ನಂದಾರೆಡ್ಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರಲ್ಲದೆ, ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ಬ್ಯಾನರ್ ಗಲಾಟೆ ಸಿಐಡಿ ತನಿಖೆ ನಡೆಯುತ್ತಿರುವ ನಡುವೆ ಡಿಎಸ್‌ಪಿ ಚಂದ್ರಕಾಂತ ನಂದಾರೆಡ್ಡಿ ಅವರನ್ನು ಸರ್ಕಾರ ಜ.27ರಂದು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇವರ ಜಾಗದಲ್ಲಿ ತಿಪಟೂರಿನ ಉಪ ವಿಭಾಗ ಎಎಸ್‌ಪಿಯಾಗಿದ್ದ ಯಶ್‌ ಕುಮಾರ್‌ ಶರ್ಮ ಅವರನ್ನು ಸರ್ಕಾರ ನಿಯೋಜನೆ ಮಾಡಿತ್ತು.

ವರ್ಗಾವಣೆ ಆದೇಶದಂತೆ ಬಳ್ಳಾರಿ ನಗರ ಉಪ ವಿಭಾಗಕ್ಕೆ ಮಂಗಳವಾರವಷ್ಟೇ ನಿಯೋಜನೆಗೊಂಡಿದ್ದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಐಪಿಎಸ್‌ ಅಧಿಕಾರಿ ಯಶ್‌ ಕುಮಾರ್‌ ಶರ್ಮ ಅವರು ಬುಧವಾರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಾಗಿತ್ತು. ಅದಕ್ಕಾಗಿ ಅವರು ಬಳ್ಳಾರಿ ನಗರಕ್ಕೂ ಬಂದಿದ್ದರು. ಆದರೆ, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸಾಧ್ಯವಾಗದೇ ಹಿಂದಿರುಗಿದರು ಎಂದು ತಿಳಿದು ಬಂದಿದೆ. ಗಮನಾರ್ಹ ಸಂಗತಿ ಎಂದರೆ ಬ್ಯಾನರ್ ಗಲಭೆ ಪ್ರಕರಣದಲ್ಲಿ ಡಿಎಸ್‌ಪಿ ಚಂದ್ರಕಾಂತ ನಂದಾರೆಡ್ಡಿಯವರೇ ಸ್ವಯಂ ದೂರು ದಾಖಲು ಮಾಡಿದ್ದರು.

ಬಳ್ಳಾರಿ ರಾಜಕೀಯ ಮೇಲಾಟಗಳಿಂದ ಇನ್ಯಾವ ಅಧಿಕಾರಿಗಳಿಗೆ ವರ್ಗಾವಣೆಯ ಶಿಕ್ಷೆ ಕಾದಿದೆಯೋ ಎಂದು ಪೊಲೀಸ್ ಇಲಾಖೆಯಲ್ಲಿಯೇ ಚರ್ಚೆ ನಡೆಯುತ್ತಿದೆ.

ಯಶ್‌ ಕುಮಾರ್‌ ಶರ್ಮಾ ಬಂಟ್ವಾಳಕ್ಕೆ ವರ್ಗ: ಬಳ್ಳಾರಿ ನಗರ ಡಿಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದ ಯಶ್‌ ಕುಮಾರ್ ಶರ್ಮಾ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗದ ಎಎಸ್‌ಪಿಯಾಗಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.