ಸಾರಾಂಶ
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಿ.ಪಿ. ಯೋಗೇಶ್ವರ್ ಗೆಲುವಿಗೆ ಪಕ್ಷದ ವರಿಷ್ಠರು ಕೆಲವೊಂದು ಜವಾಬ್ದಾರಿ ನೀಡಿದ್ದರು. ಅವರ ಅಣತಿಯಂತೆ ಅಭ್ಯರ್ಥಿಯ ಪರ ಪ್ರಚಾರ ನಡೆಸಿ ಗೆಲುವಿಗೆ ಶ್ರಮಿಸಿದ್ದೇನೆ. ಮತದಾರರು ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಯೋಗೇಶ್ವರ ಅವರನ್ನು ಬೆಂಬಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮುಸ್ಲಿಮರಿಗೆ ಮತ ಹಕ್ಕು ನೀಡುವುದು ಬೇಡ ಎನ್ನುವ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.ತಾಲೂಕಿನ ಕದಲೂರು ಗ್ರಾಮದಲ್ಲಿ ಏಳು ಕೋಟಿ ರು. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಸ್ಲಿಮರಿಗೆ ಮತದಾನದ ಹಕ್ಕು ನಿಷೇಧಿಸಿ ಎನ್ನುವುದು ಜಾತ್ಯಾತೀತತೆಗೆ ವಿರೋಧವಾಗಿದೆ. ಇಂತಹ ಹೇಳಿಕೆಯಿಂದ ಅಲ್ಪಸಂಖ್ಯಾತರ ವಿರೋಧ ಎದುರಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ಮತದಾನ ಎನ್ನುವುದು ಸಂವಿಧಾನಕ್ಕೆ ಬದ್ಧವಾಗಿ ಸಿಕ್ಕಿರೋ ಹಕ್ಕು. ಈ ಹಕ್ಕು ಯಾವುದೇ ವ್ಯಕ್ತಿ, ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಪ್ರಜಾಪ್ರಭುತ್ವಕ್ಕೆ ನೀಡಿರುವ ಈ ಹಕ್ಕನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಎಂದು ಹೇಳಿದರು.ಮಠಾಧೀಶರಾಗಿರುವವರು ಧರ್ಮವನ್ನು ಬೇರೆ ಮಾಡುವ ರೀತಿಯಲ್ಲಿ ಮಾತನಾಡಬಾರದು. ರಾಜಕಾರಣ ಮಠಾಧೀಶರ ಆಸ್ತಿಯಲ್ಲ ಎಂದು ಶಾಸಕ ಉದಯ್ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಹರಿಹಾಯ್ದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಿ.ಪಿ. ಯೋಗೇಶ್ವರ್ ಗೆಲುವಿಗೆ ಪಕ್ಷದ ವರಿಷ್ಠರು ಕೆಲವೊಂದು ಜವಾಬ್ದಾರಿ ನೀಡಿದ್ದರು. ಅವರ ಅಣತಿಯಂತೆ ಅಭ್ಯರ್ಥಿಯ ಪರ ಪ್ರಚಾರ ನಡೆಸಿ ಗೆಲುವಿಗೆ ಶ್ರಮಿಸಿದ್ದೇನೆ. ಮತದಾರರು ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಯೋಗೇಶ್ವರ ಅವರನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಗೆ ಸೆಳೆಯಲು ಶಾಸಕ ಯೋಗೇಶ್ವರ್ ನಡೆಸುತ್ತಿರುವ ಆಪರೇಷನ್ ಹಸ್ತದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಯೋಗೇಶ್ವರ್ ಹೇಳಿದಂತೆ ನಡೆದರೆ ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ ಇದ್ದರು.