ಸಾರಾಂಶ
ಜೆಡಿಎಸ್ ಜತೆಗಿದ್ದ ಲತಾದೇವಿ ಉಪಾಧ್ಯಕ್ಷೆ । ಚುಣಾವಣೆಯಲ್ಲಿ ಮೈತ್ರಿ ಪಾಲನೆ ಮಾಡದ ಬಿಜೆಪಿ । ಪ್ರೀತಂಗೌಡ ವಿರುದ್ಧ ಶಾಸಕ ಸ್ವರೂಪ್ ಬಣ ಮೇಲುಗೈ
ಕನ್ನಡಪ್ರಭ ವಾರ್ತೆ ಹಾಸನಪೂರ್ವನಿಗದಿಯಂತೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ 9ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಚಂದ್ರೇಗೌಡ ಅಧ್ಯಕ್ಷರಾಗಿಯೂ, ಬಿಜೆಪಿಯಿಂದ ಗೆದ್ದರೂ ಜೆಡಿಎಸ್ ಜತೆ ಗುರ್ತಿಸಿಕೊಂಡ ಲತಾದೇವಿ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಈ ಮೂಲಕ ಹಾಲಿ ಶಾಸಕ ಸ್ವರೂಪ್ ಹಾಗೂ ಮಾಜಿ ಶಾಸಕ ಪ್ರೀತಂಗೌಡರ ಪ್ರತಿಷ್ಠೆಯ ಕಣದ ಚುನಾವಣೆಯಲ್ಲಿ ಸ್ವರೂಪ್ ಮೇಲುಗೈ ಸಾಧಿಸಿದಂತಾಗಿದೆ.
ಅದ್ಯಕ್ಷ ಹುದ್ದೆಗೆ ಸಲ್ಲಿಸಿದ್ದ ನಾಮಪತ್ರವನ್ನು ಜೆಡಿಎಸ್‌ನ ಅಮಿರ್ ಜಾನ್, ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಜೆಡಿಎಸ್‌ನ ಗೌಸಿಯಾ ಅಲ್ಮಾಸ್ ಮತ್ತು ಹೇಮಲತ ವಾಪಸ್ ಪಡೆದರು. ಜೆಡಿಎಸ್‌ನ ಗಿರೀಶ್ ಚನ್ನವೀರಪ್ಪ ಕೂಡ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆದರು. ಅಂತಿಮವಾಗಿ ಜೆಡಿಎಸ್‌ನ ಚಂದ್ರೇಗೌಡ ಹಾಗೂ ಕಾಂಗ್ರೆಸ್‌ನ ರೂಹಿನ್ ತಾಜ್ ಅದ್ಯಕ್ಷ ಸ್ಥಾನದ ಅಂತಿಮ ಕಣದಲ್ಲಿ ಉಳಿದಿದ್ದರು. ನಾಮಪತ್ರ ವಾಪಸ್ ಪಡೆಯುವ ಅವಧಿ ಮುಕ್ತಾಯವಾಗುತ್ತಿದ್ದಂತೆ ಅಂತಿಮವಾಗಿ ಕಣದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜೆಡಿಎಸ್‌ನ ಎಂ.ಚಂದ್ರೇಗೌಡ ಹಾಗೂ ಕಾಂಗ್ರೆಸ್‌ನ ರೂಹಿನ್ ತಾಜ್ ಉಳಿದರು.ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶಿಲ್ಪ ಹಾಗೂ ಲತಾದೇವಿ ಇದ್ದುದರಿಂದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿಯಾದ ಮಾರುತಿ ಪ್ರಾರಂಭಿಸಿದರು. ಚುನಾವಣಾಧಿಕಾರಿ ಸೂಚನೆಯಂತೆ ನಿಯಮದ ಪ್ರಕಾರ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೇ ನಡೆಸಿದರು. ಮೊದಲು ಅಧ್ಯಕ್ಷರ ಆಯ್ಕೆ ನಡೆಸಲು ನಿರ್ಧರಿಸಿದರು. ಮೊದಲು ಕಾಂಗ್ರೆಸ್ ನ ರೂಹಿನ್ ತಾಜ್ ಹೆಸರು ಹೇಳಿ ಮತದಾನದ ಬಗ್ಗೆ ಚುನಾವಣಾ ಅದಿಕಾರಿ ಸೂಚನೆ ನೀಡಿದರು. ರೂಹಿನ್ ತಾಜ್ ಪರವಾಗಿ ಕಾಂಗ್ರೆಸ್ ನ ಇಬ್ಬರು ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸಿದರು. ಸ್ವತಃ ಅಭ್ಯರ್ಥಿ ರೂಹಿನ್ ತಾಜ್ ಹಾಗೂ ಮತ್ತೊಬ್ಬ ಮಹಿಳಾ ಸದಸ್ಯೆಯಿಂದ ಮತದಾನ ನಡೆಯಿತು. ಕಾಂಗ್ರೆಸ್‌ನ ರೂಹಿನ್ ತಾಜ್ ವಿರುದ್ದ ಇರುವವರು ಕೈ ಎತ್ತಿ ಎಂದಾಗ ಬಿಜೆಪಿ ಸದಸ್ಯರು ತಟಸ್ಥವಾಗುಳಿದರು. ಜೆಡಿಎಸ್ ಪಕ್ಷದ ಎಂ.ಚಂದ್ರೇಗೌಡ ಅವರು ಒಟ್ಟು ೩೪ ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಗೊಂಡರೆ ಇವರ ಎದುರಾಳಿ ಕಾಂಗ್ರೆಸ್‌ನ ಅದ್ಯಕ್ಷ ಸ್ಥಾನದ ಆಕಾಂಕ್ಷಿ ರೂಹಿನ್ ತಾಜ್ ಎರಡು ಮತಗಳನ್ನು ಮಾತ್ರ ಪಡೆದರು.
ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದ ಉಪಾಧ್ಯಕ್ಷ ಚುನಾವಣೆ:ಬಿಜೆಪಿಯಿಂದ ಗೆದ್ದು ಜೆಡಿಎಸ್ ಜತೆ ಗುರುತಿಸಿಕೊಂಡಿದ್ದ ಲತಾದೇವಿ ಅವರು ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ವಿರುದ್ದ ತಾವೇ ಮತ ಹಾಕಿಕೊಂಡರೂ ಗೆದ್ದು ಬೀಗಿದ ವಿಚಿತ್ರ ಸನ್ನಿವೇಶಕ್ಕೆ ಬುಧವಾರ ನಡೆದ ಉಪಾಧ್ಯಕ್ಷ ಚುನಾವಣೆ ಸಾಕ್ಷಿಯಾಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶಿಲ್ಪಾ ವಿಕ್ರಮ ಅವರನ್ನು ಅಧಿಕೃತ ಅಭ್ಯರ್ಥಿ ಮಾಡಿದ ಪಕ್ಷದ ಅಭ್ಯರ್ಥಿ ಶಿಲ್ಪಾಗೆ ಮತ ಚಲಾಯಿಸುವಂತೆ ಬಿಜೆಪಿ ವಿಪ್ ಜಾರಿ ಮಾಡಿತ್ತು. ಆದರೆ ಜೆಡಿಎಸ್ ಸದಸ್ಯರ ಬೆಂಬಲದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಲತಾದೇವಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಉಪಾದ್ಯಕ್ಷೆ ಆಯ್ಕೆ ಸಂದರ್ಭದಲ್ಲಿ ಲತಾದೇವಿ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿ ಶಿಲ್ಪಾಗೆ ಮತ ಚಲಾಯಿಸಿದರು. ಅಂದರೆ ತಮ್ಮ ಆಯ್ಕೆಯ ಪ್ರಕ್ರಿಯೆ ವೇಳೆ ಲತಾದೇವಿ ವಿರುದ್ದ ಇರುವವರು ಕೈ ಎತ್ತಿ ಎಂದು ಘೋಷಣೆ ಮಾಡಿದಾಗ ಅನಿವಾರ್ಯವಾಗಿ ಬಿಜೆಪಿ ಸದಸ್ಯರ ಜೊತೆ ಲತಾದೇವಿ ಕೂಡ ತಮ್ಮ ವಿರುದ್ದ ತಾವೇ ಕೈ ಎತ್ತಿ ಮತ ಚಲಾವಣೆ ಮಾಡಿವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದರು.ವಿಪ್ ಉಲ್ಲಂಘನೆ ಮಾಡಿದರೆ ಸದಸ್ಯತ್ವ ಅನರ್ಹ ಭೀತಿಯಿಂದ ತಮ್ಮ ವಿರುದ್ಧ ತಾವೇ ಮತ ಚಲಾವಣೆ ಮಾಡಿದ್ದಾಗಿ ಮಾತು ಕೇಳಿ ಬಂದಿತು. ತಮ್ಮ ವಿರುದ್ದ ತಾವೇ ಮತ ಹಾಕಿಕೊಂಡರೂ ಹಾಸನ ನಗರಸಭೆ ಉಪಾಧ್ಯಕ್ಷೆಯಾಗಿ ಲತಾದೇವಿ ಆಯ್ಕೆಯಾದರು. ಕೊನೆಗೂ ಜೆಡಿಎಸ್ ಸದಸ್ಯರು ಹಾಗೂ ಶಾಸಕ, ಒಬ್ಬ ಕಾಂಗ್ರೆಸ್ ಸದಸ್ಯೆ ಬೆಂಬಲದೊಂದಿಗೆ ಆಯ್ಕೆಗೊಂಡರು.
ಮಾಜಿ ಶಾಸಕ ಪ್ರೀತಂಗೌಡ ಗೆ ಹಿನ್ನೆಡೆಜಿದ್ದಾಜಿದ್ದಿನ ದೋಸ್ತಿ ಹೋರಾಟದಲ್ಲಿ ಜೆಡಿಎಸ್ ಪಕ್ಷ ಮೇಲುಗೈ ಸಾಧಿಸಿದೆ. ಚುನಾವಣೆಗೂ ಎರಡು ದಿನ ಮುನ್ನ ಮಾಜಿ ಶಾಸಕ ಪ್ರೀತಂಗೌಡ ಪತ್ರಿಕಾಗೋಷ್ಠಿ ಮಾಡಿ ಜೆಡಿಎಸ್ ಮೈತ್ರಿ ಧರ್ಮ ಪಾಲಿಸಬೇಕು. ಅಧ್ಯಕ್ಷ ಸ್ಥಾನದ ೨೦ ತಿಂಗಳ ಅವಧಿ 50:50 ಮಾಡಿ ಎಂದು ಹೇಳಿದ್ದರು. ಆದರೆ ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಬಿಜೆಪಿಯಿಂದ ಚರ್ಚೆ ಮಾಡಿ ಉಪಾಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಶಿಲ್ಪಾ ವಿಕ್ರಂ ಅವರನ್ನು ಜೆಡಿಎಸ್ ಸದಸ್ಯರು ಬೆಂಬಲಿಸಲಿಲ್ಲ. ಬದಲಾಗಿ ಬಿಜೆಪಿಯಿಂದ ಗೆದ್ದರೂ ಜೆಡಿಎಸ್‌ನಲ್ಲಿ ಗುರ್ತಿಸಿಕೊಂಡ ಲತಾದೇವಿ ಅವರನ್ನು ಉಪಾಧ್ಯಕ್ಷರಾಗಿ ಮಾಡುವ ಮೂಲಕ ಪ್ರೀತಂಗೌಡರಿಗೆ ತಿರುಗೇಟು ನೀಡಿದ್ದಾರೆ.