ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಏನು ಬದಲಾವಣೆ ಬೇಕಾದರು ತರಬಹುದು ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ 17 ಮಂದಿ ಶಾಸಕರೇ ಬಿಜೆಪಿಗೆ ಹೊರಟು ಹೋದರು. ಅಂತಹ ಪರಿಸ್ಥಿತಿ ಇರುವ ಕಾರಣ ರಾಜಕಾರಣದಲ್ಲಿ ಏನು ಬೇಕಾದರು ಆಗಬಹುದು. ಆಡಳಿತ ಪಕ್ಷದವರೇ ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಆ ಪಕ್ಷದ ಶಾಸಕರೇ ಚುನಾವಣೆ ಫಲಿತಾಂಶ ಹೆಚ್ಚು ಕಡಿಮೆಯಾದರೆ ಗ್ಯಾರಂಟಿ ನಿಲ್ಲಿಸುವ ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲವೆಂದು ಶಾಸಕರು ಆರೋಪಿಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸುತ್ತಿರುವ ನಾಡಿನ ಜನರು ಆಲೋಚನೆ ಮಾಡಿ ಸೂಕ್ತವಾದ ತೀರ್ಪು ನೀಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಗೆ ಬಿಜೆಪಿ ಅಲ್ಲ ಜೆಡಿಎಸ್ ಭಯ ಕಾಡುತ್ತಿದೆ. ಜೆಡಿಎಸ್ ಇದ್ದೇ ಇರುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಕೆಲವೊಮ್ಮೆ ರಾಜಕಾರಣದಲ್ಲಿ ಒಂದೊಂದು ಪಕ್ಷದೊಂದಿಗೆ ಹೊಂದಾಣಿಕೆ ಅನಿವಾರ್ಯವಾಗುತ್ತದೆ. ಆದರೆ, ಜೆಡಿಎಸ್ ಮಾತ್ರ ಎಂದಿಗೂ ಸಿದ್ಧಾಂತ ಬಿಡುವುದಿಲ್ಲ. ದೇವೇಗೌಡರು ಮೊದಲೇ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಇಂದು ಕಾಂಗ್ರೆಸ್ಸೆ ಇರುತ್ತಿರಲಿಲ್ಲ. ಕಾಂಗ್ರೆಸ್ ಜೊತೆ ನಮ್ಮ ಹೊಂದಾಣಿಕೆ ಸರಿ ಹೋಗಲ್ಲ. ಬಿಜೆಪಿ ಜತೆ ಹೊಂದಾಣಿಕೆ ನ್ಯಾಚುರಲ್ ಆಗಿದೆ. ಎರಡು ಪಕ್ಷದ ಕಾರ್ಯಕರ್ತರಲ್ಲಿ ಬೇಧಭಾವ ಇಲ್ಲ. ಈ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುತ್ತೇವೆ. ಮೈತ್ರಿ ಬಗ್ಗೆ ಅನುಮಾನವೇ ಬೇಡ ಎಂದು ತಿಳಿಸಿದರು.ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸೋತರೆ ಏನು ವ್ಯತ್ಯಾಸ ಆಗುವುದಿಲ್ಲ. ಬಿಜೆಪಿ - ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಗೆಲುವು ಸಾಧಿಸಿದರೆ ಪ್ರಧಾನಿ ಮೋದಿಯವರ ಸಂಪುಟದಲ್ಲಿ ಉನ್ನತ ಹುದ್ದೆ ಸಿಗುವುದಿರಲ್ಲಿ ಅನುಮಾನ ಇಲ್ಲ. ಮೂರು ಬಾರಿ ಸಂಸದರಾಗಿರುವ ಡಿ.ಕೆ.ಸುರೇಶ್ ಕೊಡುಗೆ ಕ್ಷೇತ್ರಕ್ಕೆ ಶೂನ್ಯ. ರಾಜ್ಯದಲ್ಲಿ ಅವರದೇ ಪಕ್ಷದ ಸರ್ಕಾರ ಇದೆ. ಸೋತರು ಅವರಿಗೇನು ವ್ಯತ್ಯಾಸ ಆಗುವುದಿಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದು, ಅವರ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕರೆ ಡಾ.ಸಿ.ಎನ್ .ಮಂಜುನಾಥ್ ರವರು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದ್ದಾರೆ. ಈ ಅವಕಾಶವನ್ನು ಮತದಾರರು ಕಳೆದುಕೊಳ್ಳಬಾರದು ಎಂದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಸಿಯುವ ಕೆಲಸ ಮಾಡುತ್ತಿದೆ. ರೈತರಿಗೆ ಅನುಕೂಲವಾಗುವ ಯಾವ ಗ್ಯಾರಂಟಿ ಕೊಟ್ಟಿದ್ದಾರೆ. ಎಲ್ಲೆಡೆ ಬರ ಆವರಿಸಿದ್ದು, ಪರಿಹಾರ ಹಣ ವಿತರಣೆ ಮಾಡದೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ.ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಕೃಷಿ ಸಾಲ ಮನ್ನಾ ಮಾಡಿದರು. ಇದಕ್ಕೆ ರಾಜ್ಯದ ಬೊಕ್ಕಸದಿಂದ ಹಣ ಭರಿಸದರೆ ಹೊರತು ಕೇಂದ್ರದ ಹಣಕ್ಕಾಗಿ ಕಾಯಲಿಲ್ಲ. ಎಸ್ ಟಿಪಿ ಹಣವನ್ನು ಗ್ಯಾರಂಟಿ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕ್ಷೇತ್ರಗಳ ಅಭಿವೃದ್ಧಿಗೂ ಅನುದಾನ ನೀಡುತ್ತಿಲ್ಲ. ಒಂದರ್ಥದಲ್ಲಿ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಬಂಡೆಪ್ಪ ಕಾಶಂಪೂರ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಗೌತಮ್ ಗೌಡ, ಜೆಡಿಎಸ್ ಮುಖಂಡರಾದ ಉಮೇಶ್ , ಶಂಕರ್ ,ರೇಣುಕಪ್ಪ ಇದ್ದರು.