ಸಾರಾಂಶ
ಹಿರೇಕೆರೂರು:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಶೇ.೯೯ಕ್ಕಿಂತ ಅಧಿಕ ಮನೆಗಳಿಗೆ ತಲುಪಿದ್ದು, ಬಡವರ ಬದುಕಿನಲ್ಲಿ ಬದಲಾವಣೆ ತರುವ ದಿಟ್ಟ ನಿರ್ಧಾರವನ್ನು ಕಾಂಗ್ರೆಸ್ ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.ತಾಲೂಕಿನ ಮಡ್ಲೂರು ಗ್ರಾಮದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ವಿಧಾನಸಭೆಯಲ್ಲಿ ನೀಡಿದ್ದ ಪಂಚ ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಅನುಷ್ಠಾನಗೊಳಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಭೀಕರ ಬರಗಾಲದಂತ ಪರಿಸ್ಥಿತಿಯಲ್ಲಿ ಕರೆಂಟ್ ಬಿಲ್ಲನ್ನು ಕಟ್ಟಲಾಗದ ಸ್ಥಿತಿಯಲ್ಲಿದ್ದ ಸಾಮಾನ್ಯ ಜನ ಸೇರಿದಂತೆ ಎಲ್ಲ ವರ್ಗಗಳ ಜನರಿಗೆ ಉಚಿತ ಕರೆಂಟ್ ಬಿಲ್ ಪಾವತಿಸುತ್ತಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮಹಾಲಕ್ಷ್ಮಿ ಯೋಜನೆ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ರೈತ ವರ್ಗಕ್ಕೆ ಆರ್ಥಿಕ ಶಕ್ತಿ ತುಂಬುತ್ತೇವೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡುವಂತೆ ವಿನಂತಿಸಿದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷವಾಗಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಬಡವರ ದೀನ ದಲಿತರ, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಬದ್ಧವಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ ಮಡಿವಾಳರ, ಪಿ.ಡಿ. ಬಸನಗೌಡ್ರ, ಎಸ್.ಬಿ. ತಿಪ್ಪಣ್ಣನವರ, ಹೇಮಣ್ಣ ಮುದರಡ್ಡೇರ, ಜ್ಯೋತಿಬಾ ಜಾಧವ, ಶಿವರಾಜ್ ಹರಿಜನ, ಷಣ್ಮುಖಯ್ಯ ಮಳಿಮಠ, ಮಹೇಶ ಗುಬ್ಬಿ, ಮಲ್ಲಿಕಾರ್ಜುನ ಬುರಡಿಕಟ್ಟಿ, ವಿನಯ್ ಪಾಟೀಲ, ದಾದಾಪೀರ್ ರಾಣೇಬೆನ್ನೂರ, ರಾಜಶೇಖರ್ ಪಾಟೀಲ, ಮಲ್ಲಪ್ಪ ಕೆರೂಡಿ, ವಿಜಯ ಸಾತೇನಹಳ್ಳಿ, ಲಲಿತಮ್ಮ ಚೊಗಚಿಕೊಪ್ಪ ಸೇರಿದಂತೆ ಕಾರ್ಯಕರ್ತರಿದ್ದರು.