ವಚನ ಸಾಹಿತ್ಯದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ

| Published : Apr 19 2025, 01:55 AM IST

ಸಾರಾಂಶ

ಬಸವಾದಿ ಶರಣರು ವಚನಗಳ ಮೂಲಕ ಇಡೀ ಸಮಾಜದಲ್ಲೊಂದು ಪರಿವರ್ತನೆ ತರುವ ಪ್ರವರ್ತಕರಾದರು. ಜಾತಿ, ವರ್ಗ, ಲಿಂಗ, ಪಂಥ ಮುಂತಾದ ತಾರತಮ್ಯಗಳ ವಿರುದ್ಧ ಸಿಡಿದೆದ್ದು ಶೋಷಿತರ ಧ್ವನಿಯಾಗಿ ಬಸವಾದಿ ಶರಣರು ರೂಪಸಿದ ಚಳವಳಿ ಒಂದು ಐತಿಹಾಸಿಕ ಕಾರ್ಯವಾಗಿದೆ. ಜಿಡ್ಡುಗಟ್ಟಿದ ಸಮಾಜಕ್ಕೆ ಹೊಸ ಸ್ಪರ್ಶವನ್ನು ನೀಡಿದರು ಎಂದು ಶಹಾಪುರದ ಏಕದಂಡಗಿ ಮಠದ ಅಜೇಂದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು

ಕನ್ನಡಪ್ರಭ ವಾರ್ತೆ ಶಹಾಪುರ

ಬಸವಾದಿ ಶರಣರು ವಚನಗಳ ಮೂಲಕ ಇಡೀ ಸಮಾಜದಲ್ಲೊಂದು ಪರಿವರ್ತನೆ ತರುವ ಪ್ರವರ್ತಕರಾದರು. ಜಾತಿ, ವರ್ಗ, ಲಿಂಗ, ಪಂಥ ಮುಂತಾದ ತಾರತಮ್ಯಗಳ ವಿರುದ್ಧ ಸಿಡಿದೆದ್ದು ಶೋಷಿತರ ಧ್ವನಿಯಾಗಿ ಬಸವಾದಿ ಶರಣರು ರೂಪಸಿದ ಚಳವಳಿ ಒಂದು ಐತಿಹಾಸಿಕ ಕಾರ್ಯವಾಗಿದೆ. ಜಿಡ್ಡುಗಟ್ಟಿದ ಸಮಾಜಕ್ಕೆ ಹೊಸ ಸ್ಪರ್ಶವನ್ನು ನೀಡಿದರು ಎಂದು ಶಹಾಪುರದ ಏಕದಂಡಗಿ ಮಠದ ಅಜೇಂದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಗೋಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಅಭಿನಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯದಲ್ಲಿ ನೂರಾರು ಶರಣರು ಶ್ರಮಿಸಿದ್ದಾರೆ. ಕಂದಾಚಾರ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ವಚನಗಳು ಆಧಾರವಾಗಿವೆ. ಇಂತಹ ಶರಣರ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.ಶಹಾಪುರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಣ್ಣಪಡಶೆಟ್ಟಿ ಮಾತನಾಡಿ, ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು ಎಂದರು.ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಮಾತನಾಡಿ, ಯುವ ಸಮುದಾಯ ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಮಹಿಳಾ ಸಾಹಿತಿ ಜ್ಯೋತಿ ಬಿ. ದೇವಣಗಾಂವ ಮಾತನಾಡಿ, ಮನುಷ್ಯನೊಳಗಿನ ಆತ್ಮವನ್ನು ಎಚ್ಚರಿಸುವ ಶಕ್ತಿ ಶರಣ ಸಾಹಿತ್ಯಕ್ಕೆ ಇದೆ ಎಂದರು.

ವಿವಿಧ ಕ್ಷೇತ್ರಗಳ ಸಾಧನೆಗೈದ ಪಿ.ಎಸ್.ಐ. ದೇವೇಂದ್ರರಡ್ಡಿ ಉಪ್ಪಳ, ಡಾ. ಚಂದ್ರಪ್ರಸಾದ ಹೊಸ್ಮನಿ, ಡಾ. ಸೋಮಶೇಖರ ಕೊಂಡಾ, ಡಾ. ಆನಂದ ಎಸ್. ಸೊನ್ನದ ಅವರಿಗೆ ಸನ್ಮಾನಸಿ ಗೌರವಿಸಲಾಯಿತು.

ಗೋಗಿ ವಲಯ ಕ.ಸಾ.ಪ. ಅಧ್ಯಕ್ಷ ಮಲ್ಲಣ್ಣಗೌಡ ಪೋಲಿಸ್ ಪಾಟೀಲ, ಉಪನ್ಯಾಸಕ ಕಾಮಣ್ಣ ಜಿ. ಕೆ., ಸಾಹಿತಿ ಮಹಾವೀರ ಅಕ್ಕಿ, ಗುರುನಾಥ ಮಾನು, ಗೌಡಪ್ಪಗೌಡ ಪರಿವಾಣ, ಅಮರೇಶ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.