ದಲಿತ ಮುಖ್ಯಮಂತ್ರಿ ವಿಚಾರ ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಸಿಎಲ್‌ಪಿ ಸಭೆಯಲ್ಲಿ ಚರ್ಚೆಯಾದಾಗ ಮಾತ್ರ ಅದಕ್ಕೊಂದು ಬೆಲೆ. ಸಿಎಲ್‌ಪಿ ಸಭೆಯಲ್ಲಿ ನಾನು ಯಾರ ಪರವಾಗಿ ಕೈ ಎತ್ತುತ್ತೇನೋ ಆಗ ನಾನು ಯಾರ ಬೆಂಬಲಿಗ ಎಂಬುದು ತಿಳಿಯುತ್ತದೆ ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿ: ದಲಿತ ಮುಖ್ಯಮಂತ್ರಿ ಆಗಬೇಕೋ, ಬೇಡವೋ ಎಂಬುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿರುವ ವಿಷಯ. ಯಾರು ಮುಖ್ಯಮಂತ್ರಿಯಾಗಬೇಕು, ಯಾರು ಆಗಬಾರದು ಹಾಗೂ ಅಧಿಕಾರವನ್ನು ಹೇಗೆ ಹಂಚಿಕೆ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯ ಬದಲಾವಣೆ, ದಲಿತ ಮುಖ್ಯಮಂತ್ರಿ ವಿಚಾರ ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಸಿಎಲ್‌ಪಿ ಸಭೆಯಲ್ಲಿ ಚರ್ಚೆಯಾದಾಗ ಮಾತ್ರ ಅದಕ್ಕೊಂದು ಬೆಲೆ. ಸಿಎಲ್‌ಪಿ ಸಭೆಯಲ್ಲಿ ನಾನು ಯಾರ ಪರವಾಗಿ ಕೈ ಎತ್ತುತ್ತೇನೋ ಆಗ ನಾನು ಯಾರ ಬೆಂಬಲಿಗ ಎಂಬುದು ತಿಳಿಯುತ್ತದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಾಡ್, ಈ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಸಚಿವ ಸತೀಶ ಜಾರಕಿಹೊಳಿ ಅವರು ಏನೇ ಮಾತಾಡಿದ್ದರೂ ಅದು ಅವರ ವೈಯಕ್ತಿಕ ಹೇಳಿಕೆ. ಅವರ ಅಭಿಪ್ರಾಯದ ಕುರಿತು ಅವರನ್ನೇ ಪ್ರಶ್ನಿಸಿ ಎಂದರು.
ಯಾವುದೋ ಒಂದು ಘಟನೆ ಇಟ್ಟುಕೊಂಡು ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎನ್ನಲು ಸಾಧ್ಯವಿಲ್ಲ. ಬೀದರ್‌ನಲ್ಲಿ ದರೋಡೆ ಪ್ರಕರಣ ನಡೆಯಬಾರದಿತ್ತು. ಅಪರಾಧ ಪ್ರಕರಣ ನಡೆದ ಕೂಡಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸುವುದು ಸರಿಯಲ್ಲ. ಎಲ್ಲ ಸರ್ಕಾರಗಳಲ್ಲೂ ಅಪರಾಧ ಕೃತ್ಯಗಳು ನಡೆಯುತ್ತವೆ. ಅಮೆರಿಕ, ಲಂಡನ್‌ನಲ್ಲೂ ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂದು ಲಾಡ್ ಹೇಳಿದರು.
ಎಲ್ ಆ್ಯಂಡ್ ಟಿ: ಅಸಮಾದಾನ
ಹು-ಧಾ ಮಹಾನಗರದಲ್ಲಿ ನೀರು ಸರಬರಾಜು ಜವಾಬ್ದಾರಿ ವಹಿಸಿಕೊಂಡಿರುವ ಎಲ್ ಆ್ಯಂಡ್ ಟಿ ಸಂಸ್ಥೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ. ಗಡುವಿನಂತೆ ಡಿಸೆಂಬರ್ ತಿಂಗಳಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸಿ, ಹಸ್ತಾಂತರಿಸಬೇಕಿತ್ತು. ಆದರೆ, ಅದು ಇಂದಿಗೂ ಆಗಿಲ್ಲ. ಕಾಂಕ್ರೀಟ್ ರಸ್ತೆ ನಿರ್ಮಿಸಿದ ನಂತರ ರಸ್ತೆ ಅಗೆದು ಪೈಪ್ ಲೈನ್ ಹಾಕುವ ವ್ಯವಸ್ಥೆ ನಮ್ಮಲ್ಲಿದೆ. ಇಂತಹ ಅವೈಜ್ಞಾನಿಕ ವ್ಯವಸ್ಥೆ ಸುಧಾರಿಸಬೇಕಿದೆ. ಈ ಕುರಿತು ಅಧಿಕಾರಿಗಳಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಐದಾರು ತಿಂಗಳಲ್ಲಿ ಶೇ. 70ರಷ್ಟು ಪ್ರದೇಶಕ್ಕೆ ಸಮರ್ಪಕ ನೀರು ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಸಚಿವ ಸಂತೋಷ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಫ್ಲೈಒವರ್ ಕಾಮಗಾರಿ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಎಸ್‌ಐ ಸಾವಿನ ಪ್ರಕರಣದ ನಂತರ ಗುತ್ತಿಗೆದಾರರು ತಲೆಮರೆಸಿಕೊಂಡಿದ್ದಾರೆ. ಅವಧಿ ಮುಗಿಯುವುದರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
