ಸಾರಾಂಶ
ಶಿಕಾರಿಪುರ: ತಾಲೂಕಿನ ಈಸೂರು-ಅಂಜನಾಪುರ ಮದ್ಯದ 11ಕೆವಿ ವಿದ್ಯುತ್ ಲೈನ್ ನಿರ್ಮಾಣ ಮಾರ್ಗದ ಯೋಜನೆ ಬದಲಿಸಬೇಕು ಎಂದು ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ಕಚೇರಿ ಎದುರು ರೈತ ಸಂಘದ ನೇತೃತ್ವದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ರೈತನೋರ್ವ ವಿಷ ಸೇವಿಸಲು ಯತ್ನಿಸಿ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು.
ಶಿಕಾರಿಪುರ: ತಾಲೂಕಿನ ಈಸೂರು-ಅಂಜನಾಪುರ ಮದ್ಯದ 11ಕೆವಿ ವಿದ್ಯುತ್ ಲೈನ್ ನಿರ್ಮಾಣ ಮಾರ್ಗದ ಯೋಜನೆ ಬದಲಿಸಬೇಕು ಎಂದು ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ಕಚೇರಿ ಎದುರು ರೈತ ಸಂಘದ ನೇತೃತ್ವದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ರೈತನೋರ್ವ ವಿಷ ಸೇವಿಸಲು ಯತ್ನಿಸಿ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು.
ಪ್ರತಿಭಟನೆಯ ಆರಂಭದಲ್ಲಿ ರೈತ ಸಂಘದ ಸಂಚಾಲಕ ಸಂತೋಷ್ ಮಾತನಾಡಿ, ಅರಣ್ಯ, ಗ್ರಾಮಠಾಣಾ ಪ್ರದೇಶ ಎನ್ನುವ ಕಾರಣಕ್ಕೆ ರೈತರು ಸೂಚಿಸಿದ ಮಾರ್ಗದಲ್ಲಿ ವಿದ್ಯುತ್ ಲೈನ್ ನಿರ್ಮಿಸುತ್ತಿಲ್ಲ. ಹೆಸರಿಗೆ ಮಾತ್ರ ಅರಣ್ಯವಿದ್ದು ಅದು ಈಗಾಗಲೆ ಸಾಗುವಳಿ ಆಗಿದೆ. ಆ ಪ್ರದೇಶದಲ್ಲಿ ಯಾವುದೇ ಮರಗಳಿಲ್ಲ. ಗ್ರಾಮಠಾಣಾ ಪ್ರದೇಶದಲ್ಲಿ ಮೆಸ್ಕಾಂ ವಿದ್ಯುತ್ ಕೇಂದ್ರವನ್ನೆ ನಿರ್ಮಿಸಿದೆ ವಿದ್ಯುತ್ ಲೈನ್ ನಿರ್ಮಿಸಲು ಅಸಾಧ್ಯ ಎನ್ನುವ ಸಬೂಬು ಹೇಳುತ್ತಿದೆ. ಈ ಹಿಂದಿನ ಡಿಸಿ ಸೆಲ್ವಕುಮಾರ್, ಎಸಿ ಪಲ್ಲವಿ ಇಬ್ಬರೂ ರೈತರ ಮನವಿ ಸ್ವೀಕರಿಸಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದರು. ಮಾರ್ಗ ಬದಲಿಸುವ ಭರವಸೆ ನೀಡಿದ್ದರು. ಸಂಸದರೂ ನಮ್ಮೂರಿನ ವೀರಭದ್ರಸ್ವಾಮಿ ದೇವಸ್ಥಾನ ಆವರಣದಲ್ಲಿ ರೈತರ ಹಿತ ಕಾಯುತ್ತೇನೆ ಎಂದಿದ್ದರು. ಎಲ್ಲ ಭರವಸೆಗಳೂ ಸುಳ್ಳಾಗಿದ್ದು ಭೂಮಿ ಉಳಿಸಿಕೊಳ್ಳಲು ರೈತರು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ. ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸಮಸ್ಯೆ ಕುರಿತು ಚರ್ಚಿಸಬೇಕೆ ವಿನಃ ನಾವು ಯಾವ ಕಚೇರಿ ಅಲೆಯುವುದಿಲ್ಲ. ಕಾಮಗಾರಿ ಆರಂಭಿಸುವುದಕ್ಕೆ ಬಿಡುವುದಿಲ್ಲ ಎಂದು ಘೋಷಣೆ ಮಾಡಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಪಿ.ವೈ.ರವಿ ಮಾತನಾಡಿ, ಮೆಸ್ಕಾಂ ಅವೈಜ್ಞಾನಿಕ ವಿದ್ಯುತ್ ಲೈನ್ ನಿರ್ಮಿಸುತ್ತಿದೆ ಎನ್ನುವುದು ರೈತ ಸಂಘದ ಆರೋಪ. ಸ್ಥಳಕ್ಕೆ ಭೇಟಿ ನೀಡುವ ಯಾರಾದರೂ ಅದನ್ನು ಒಪ್ಪುತ್ತಾರೆ. ಅಧಿಕಾರಿಗಳ ಕಾಮಗಾರಿ ನಕ್ಷೆಯೇ ಸರಿ ಎನ್ನುವುದಾದರೆ ಬಹಿರಂಗ ಚರ್ಚೆಗೆ ಬನ್ನಿರಿ ಜನರೆದುರಲ್ಲಿಯೇ ತೀರ್ಮಾನವಾಗಲಿ ಎಂದು ಸವಾಲು ಹಾಕಿದರು.
ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನಾ.ಶ್ರೀನಿವಾಸ ಮಾತನಾಡಿ, ಈಸೂರು ಅಂಜನಾಪುರ ವಿದ್ಯುತ್ ಗ್ರಿಡ್‌ಗಳ ನಡುವೆ ನೇರವಾಗಿ ವಿದ್ಯುತ್ ಲೈನ್ ಎಳೆದರೆ 4.5 ಕಿ.ಮೀ. ನಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಆದರೆ ನಿರ್ಮಿಸಲು ಉದ್ದೇಶಿಸಿರುವ ಮಾರ್ಗ 14ಕಿ.ಮೀ. ವಿದ್ಯುತ್ ಲೈನ್ ಎಳೆಯಬೇಕಾಗುತ್ತದೆ. ಅದರಿಂದ ಸರಕಾರದ ಹಣವೂ ವ್ಯರ್ಥವಾಗುತ್ತದೆ. ಅವೈಜ್ಞಾನಿಕ ಕಾಮಗಾರಿ ಪರಿಣಾಮ ನೂರಾರು ಎಕರೆ ಅಡಿಕೆ ತೋಟ ನಾಶವಾಗುತ್ತದೆ, ವಿದ್ಯುತ್ ಲೈನ್ ಅಕ್ಕಪಕ್ಕ ಯಾವುದೇ ಬೆಳೆ ಬೆಳೆಯುವಂತಿಲ್ಲ. ರೈತ ಕುಟುಂಬ ಸಂಕಷ್ಟಕ್ಕೆ ಒಳಗಾಗುತ್ತವೆ. ಅದಕ್ಕಾಗಿ ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ವಿಷ ಸೇವನೆ ಯತ್ನ:
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಚುರ್ಚಿಗುಂಡಿ ಸುಭಾಷಚಂದ್ರ ವಿಷಸೇವನೆಗೆ ಯತ್ನಿಸಿದಾಗ ಸ್ಥಳದಲ್ಲಿದ್ದ ರೈತರು ಬಾಟಲಿ ಕಸಿದುಕೊಂಡು ಹೋದರು. ಸದರಿ ರೈತ ಮಾತನಾಡಿ, 380ಕ್ಕೂ ಹೆಚ್ಚು ಅಡಕೆ ಗಿಡ ನನ್ನ ತೋಟದಲ್ಲಿ ಹೋಗುತ್ತದೆ ಹಾಗೆ ಆಗುವುದಕ್ಕೆ ನಾನು ಬಿಡುವುದಿಲ್ಲ. ಕಾಮಗಾರಿ ಆರಂಭಿಸಿದರೆ ನನ್ನದೆ ಮೊದಲ ಆಹುತಿಯಾಗುತ್ತದೆ. ಅದಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣವಾಗುತ್ತದೆ ಎಂದರು.ಶಾಸಕರು ಭೇಟಿ:ರೈತರು ಪ್ರತಿಭಟನೆ ನಡೆಸುವ ಸ್ಥಳಕ್ಕೆ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ರೈತರ ಅಹವಾಲು ಕೇಳಿದರು. ಈಸೂರು ಅಂಜನಾಪುರ ನಡುವಿನ ವಿದ್ಯುತ್ ಮಾರ್ಗ ಬದಲಿಸುವ ಕುರಿತು ಮೆಸ್ಕಾಂ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಜತೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.ಪ್ರತಿಭಟನೆಗೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರಣಿಗೆ ನಡೆಸಲಾಯಿತು. ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಶಾಸಕರ ಭರವಸೆ ನಂತರ ಪ್ರತಿಭಟನೆ ಕೈಬಿಡಲಾಯಿತು. ರೈತ ಮುಖಂಡ ಬೇಗೂರು ಶಿವಪ್ಪ, ಪ್ಯಾಟಿ ಈರಪ್ಪ, ದಿನೇಶ್ ಸಿರಿವಾಳ, ರಾಜಶೇಖರ್, ಧನಂಜಯ್, ವೀರಬಸಪ್ಪ, ಈಸೂರು, ಚುರ್ಚಿಗುಂಡಿ, ಕೊರಲಹಳ್ಳಿ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.