ಸಾರಾಂಶ
ಬಡವರಿಗೆ ಅನುಕೂಲವಾಗಲೆಂದು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಮಾರ್ಪಾಡು ಮಾಡಿದ್ದು, ಭ್ರಷ್ಟಾಚಾರ ಮಾಡುವ ಹುನ್ನಾರ ಆಗಿದೆ
ಕುಕನೂರು: ಅನ್ನಭಾಗ್ಯ ಯೋಜನೆಯಲ್ಲಿ ಬದಲಾವಣೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಭ್ರಷ್ಟಾಚಾರದ ಹಾದಿ ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಡವರಿಗೆ ಅನುಕೂಲವಾಗಲೆಂದು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಮಾರ್ಪಾಡು ಮಾಡಿದ್ದು, ಭ್ರಷ್ಟಾಚಾರ ಮಾಡುವ ಹುನ್ನಾರ ಆಗಿದೆ. ಬಡವರ ದುಡ್ಡು ಕಬಳಿಸಲು ತಂತ್ರವಾಗಿದೆ. ಮೊದಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅರ್ಹ ಬಡ ಫಲಾನುಭವಿಗಳಿಗೆ ತಲಾ ಐದು ಕೆಜಿ ಅಕ್ಕಿ ಹಾಗೂ ಪ್ರತಿಯೊಬ್ಬರಿಗೂ ₹ 175ರಂತೆ ಕುಟುಂಬ ಸದಸ್ಯರ ಲೆಕ್ಕಾಚಾರದಂತೆ ಡಿಬಿಟಿ ಮೂಲಕ ಅವರ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆ ನಂತರ ಹಣ ಹಾಕುವ ಯೋಜನೆ ನಿಲ್ಲಿಸಿ ತಲಾ 10 ಕೆಜಿ ಪಡಿತರ ವಿತರಿಸುವ ಕಾರ್ಯ ಮಾಡುವ ಮೂಲಕ ಮಾರ್ಪಾಡು ಮಾಡಿತು.ಈಗ ಬಡವರ ಹೊಟ್ಟೆ ಮೇಲೆ ಕಲ್ಲು ಎಳೆದು ತನ್ನ ಹಿಂಬಾಲಕರಿಗೆ ದುಡ್ಡು ಮಾಡಿಕೊಡಲು ಸಿಎಂ ಇಂದಿರಾ ಕಿಟ್ ಎಂಬ ಹೊಸ ಯೋಜನೆ ರೂಪಿಸಿ ಜನರಿಗೆ ಮಂಕುಬೂದಿ ಎರಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹೀಗಾಗಿ ಈ ಮೊದಲು ಇದ್ದಂತೆ ಹಣವನ್ನು ನೇರ ವರ್ಗಾವಣೆ ಮೂಲಕ ಅವರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.