ಮನರೇಗಾ ಯೋಜನೆ ಹೆಸರನ್ನು ಬದಲಿಸಿದ ಮಾತ್ರಕ್ಕೆ ಕೂಲಿ ಕಾರ್ಮಿಕರ ಬದುಕು ಹಸನಾಗುವುದಿಲ್ಲ ಎಂದು ಜೆಸಿಟಿಯು ನಾಯಕ ಕೆ.ವಿ.ಭಟ್ ವ್ಯಂಗ್ಯವಾಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮನರೇಗಾ ಯೋಜನೆ ಹೆಸರನ್ನು ಬದಲಿಸಿದ ಮಾತ್ರಕ್ಕೆ ಕೂಲಿ ಕಾರ್ಮಿಕರ ಬದುಕು ಹಸನಾಗುವುದಿಲ್ಲ ಎಂದು ಜೆಸಿಟಿಯು ನಾಯಕ ಕೆ.ವಿ.ಭಟ್ ವ್ಯಂಗ್ಯವಾಡಿದರು.ನಗರದ ಸಿಪಿಐ ಜಿಲ್ಲಾ ಕಚೇರಿಯಲ್ಲಿ ಶನಿವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ಫೆ.12ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಯಶಸ್ಸಿಗೆ ಹಮ್ಮಿಕೊಂಡಿದ್ದ ಕಾರ್ಮಿಕರ ಜಿಲ್ಲಾ ಸಮಾವೇಶವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿಸ್ತಾರವಾದ ಮತ್ತು ಕಾರ್ಮಿಕರ ಪರವಿದ್ದ 29 ಲೇಬರ್ ಕೋಡ್‌ಗಳನ್ನು ಸಂಕುಚಿತಗೊಳಿಸಿ, 4 ಕೋಡ್‌ಗಳಾಗಿ ಪರಿವರ್ತಿಸದ ಕಾರ್ಮಿಕ ವಿರೋಧಿಯಾದ ನಾಲ್ಕೂ ಕಾನೂನನ್ನು ಮೊದಲು ಹಿಂಪಡೆಯಲಿ ಎಂದರು.
ಗ್ರಾಮೀಣ ಕೂಲಿ ಕಾರ್ಮಿಕರಿಗೆ ಆಸರೆಯಾಗಿದ್ದ ಮನರೇಗಾ ಯೋಜನೆ ಹೆಸರನ್ನು ವಿಬಿ ಜಿ ರಾಮ್ ಜಿ ಎಂಬುದಾಗಿ ಬದಲಿಸಿದರೆ ಕೃಷಿ ಕೂಲಿ ಕಾರ್ಮಿಕರ ಜೀವನ ಹಸನಾಗುವುದಿಲ್ಲ. ಯೋಜನೆಯ ಭಾರವನ್ನು ಕೇಂದ್ರ ಆಯಾ ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿದ್ದು ಎಷ್ಟು ಸರಿ? ಮನರೇಗಾ ಯೋಜನೆ ದುರ್ಬಲಗೊಳಿಸಿ, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಜೀವನ ನಡೆಸುವುದನ್ನೇ ದುಸ್ತರಗೊಳಿಸುವ ಹುನ್ನಾರ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಅಡಗಿದೆ ಎಂದು ಆರೋಪಿಸಿದರು.ವಿಜಿ ಜಿ ರಾಮ್ ಜಿ ಯೋಜನೆ ಮಹಾತ್ಮ ಗಾಂಧಿಯ ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಿಲ್, ವಿದ್ಯುತ್ ಕಾಯ್ದೆ ತಿದ್ದುಪಡಿ ಬಿಲ್, ವಿದೇಶೀ ನೇರ ಬಂಡವಾಳದ ನಿಯಮ ಪರಿಷ್ಕರಣೆ ಸೇರಿದಂತೆ ಅನೇಕ ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸಿ ದೇಶಾದ್ಯಂತ ಕೋಟ್ಯಂತರ ಕಾರ್ಮಿಕರು, ರೈತರು ಫೆ.12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಮಾಡುತ್ತಿದ್ದೇವೆ ಎಂದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಸರ್ಕಾರಗಳು ರೈತ-ಕಾರ್ಮಿಕ ವಿರೋಧಿ ಧೋರಣೆ ತೋರುತ್ತಿವೆ. ಬಂಡವಾಳಶಾಹಿಗಳಿಗೆ ರಕ್ಷಣೆ ನೀಡಲು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು, ಕಾರ್ಮಿಕರ ಶೋಷಣೆ ಮಾಡುತ್ತಿವೆ. ಶತಮಾನಗಳಿಂದ ತ್ಯಾಗ, ಬಲಿದಾನ, ಹೋರಾಟದಿಂದ ಗಳಿಸಿದ್ದ ಸೌಲಭ್ಯ ಕಸಿಯುತ್ತಿವೆ. ಈ ಹುನ್ನಾರ ಹಿಮ್ಮೆಟ್ಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ಐಕ್ಯತೆಯಿಂದ ಐತಿಹಾಸಿಕ ಹೋರಾಟಕ್ಕೆ ಮುಂದಾಗಿವೆ ಎಂದರು.ರೈತ ಸಂಘದ ಅರುಣಕುಮಾರ ಕುರ್ಕಿ ಮಾತನಾಡಿ, ರೈತ-ಕಾರ್ಮಿಕ ಒಂದಾಗಿ ಕೇಂದ್ರದ ನೀತಿಗಳನ್ನು ಸೋಲಿಸಬೇಕಿದೆ. ಕೇಂದ್ರ ಸರ್ಕಾರ ಏನೇ ಮಾಡಿದರೂ ಬಹುಪರಾಕ್ ಹೇಳುವ ಗುಲಾಮ ಸಂಸ್ಕೃತಿ ಹೆಚ್ಚುತ್ತಿರುವುದು ದೇಶದ ದೃಷ್ಟಿಯಿಂದ ಅಪಾಯಕಾರಿ. ದೆಹಲಿ ರೈತ ಹೋರಾಟ ಮತ್ತು ಈಚೆಗೆ ಬ್ಯಾಂಕ್ ಮಷ್ಕರದ ಮಾದರಿಯಲ್ಲಿ ಫೆ.12ರ ಮುಷ್ಕರ ಯಶಸ್ವಿಗೊಳಿಸೋಣ ಎಂದರು.
ಜೆಸಿಟಿಯು ಜಿಲ್ಲಾ ಸಂಚಾಲಕ ಆವರಗೆರೆ ಎಚ್.ಜಿ.ಉಮೇಶ, ಎಐಟಿಯುಸಿ ಅವರಗೆರೆ ಚಂದ್ರು, ಸಿಐಟಿಯು ಕೆ.ಎಚ್.ಆನಂದರಾಜ, ಎಐಯುಟಿಯುಸಿ ಮಂಜುನಾಥ ಕೈದಾಳೆ, ರೈತ ಸಂಘದ ಹೊನ್ನೂರು ಮುನಿಯಪ್ಪ, ಗುಮ್ಮನೂರು ಬಸವರಾಜ, ಬುಳ್ಳಾಪುರ ಹನುಮಂತಪ್ಪ, ಜನಶಕ್ತಿ ಪವಿತ್ರಾ, ಅಂಗನವಾಡಿ ಫೆಡರೇಶನ್ ಎಸ್.ಎಸ್.ಮಲ್ಲಮ್ಮ, ಆಶಾ ಸಂಘಟನೆ ಇಂದಿರಾ, ಬಿಸಿಯೂಟದ ರುದ್ರಮ್ಮ, ಕಂಪ್ಲೇಶ್, ಪರಮೇಶಪ್ಪ, ಕುಕ್ಕವಾಡ ಮಂಜುನಾಥ, ಸಿಪಿಐ ಯಲ್ಲಪ್ಪ, ಸಿಪಿಐಎಂ ಶ್ರೀನಿವಾಸ, ಇಪ್ಟಾ ಐರಣಿ ಚಂದ್ರು, ಹೊಸಳ್ಳಿ ಮಂಜುಳಾ, ಸರೋಜಾ, ರಂಗನಾಥ ನರೇಗಾ, ಸಿ.ರಮೇಶ ದಾಸರ್, ಸತೀಶ್ ಅರವಿಂದ, ಸುರೇಶ ಅವರಗೊಳ್ಳ, ಕೆ.ಮಹೇಶ್ವರಪ್ಪ ಸೇರಿದಂತೆ ರೈತ-ಕಾರ್ಮಿಕರು ಇದ್ದರು.