ಒಳಬಳ್ಳಾರಿಯಲ್ಲಿ ಚನ್ನಬಸವ ತಾತನ ಜಾತ್ರಾ ಮಹೋತ್ಸವ

| Published : Feb 18 2024, 01:33 AM IST

ಒಳಬಳ್ಳಾರಿಯಲ್ಲಿ ಚನ್ನಬಸವ ತಾತನ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಒಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಮಹಾ ತಪಸ್ವಿ ಲಿಂಗೈಕ್ಯ ಚನ್ನಬಸವ ಮಹಾಶಿವಯೋಗಿಗಳ 41ನೇ ಮಹಾರಥೋತ್ಸವ ಜನಸಾಗರದ ಮಧ್ಯೆ ಅದ್ಧೂರಿಯಾಗಿ ಜರುಗಿತು.

ಸಿಂಧನೂರು: ತಾಲೂಕಿನ ಒಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಮಹಾ ತಪಸ್ವಿ ಲಿಂಗೈಕ್ಯ ಚನ್ನಬಸವ ಮಹಾಶಿವಯೋಗಿಗಳ 41ನೇ ಮಹಾರಥೋತ್ಸವ ಜನಸಾಗರದ ಮಧ್ಯೆ ಅದ್ಧೂರಿಯಾಗಿ ಜರುಗಿತು.

ಬೆಳಗ್ಗೆ ಶಿವಯೋಗಿಗಳ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಜಡೆಯ್ಯ ಶಾಸ್ತ್ರಿ ನೆರವೇರಿಸಿದರು. ನಂತರ ಗ್ರಾಮದ ಬೀದಿಯಲ್ಲಿ ಶಿವಯೋಗಿಗಳ ಪಲ್ಲಕ್ಕಿ ಉತ್ಸವ ನಡೆಯಿತು. ಸಂಜೆ ಮಠದಿಂದ ಶಿವಯೋಗಿಗಳ ಮೂರ್ತಿ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ಭಜನಾ ತಂಡದೊಂದಿಗೆ ಮೆರವಣಿಗೆ ಸಾಗಿ ರಥದ ಬಳಿ ತೆರಳಿ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ವಿವಿಧ ಹೂಗಳು ಮತ್ತು ಹಸಿರು ತೋರಣಗಳಿಂದ ಅಲಂಕರಿಸಿದ ರಥಕ್ಕೆ ಬಳ್ಳಾರಿ ಜಗದ್ಗುರು ಕೊಟ್ಟೂರು ಸ್ವಾಮಿ ಮಠದ ಕೊಟ್ಟೂರು ಬಸವಲಿಂಗ ಶ್ರೀಗಳು, ಪೀಠಾಧಿಪತಿ ಸಿದ್ದಲಿಂಗ ಶ್ರೀಗಳು ಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿ ರಥದಲ್ಲಿ ಪ್ರತಿಷ್ಠಾಪಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.

ಶಿವಯೋಗಿಯ ಜಯಘೋಷಣೆ ಕೂಗುತ್ತಾ ಭಕ್ತರು ಹಗ್ಗ ಹಿಡಿದು ರಥವನ್ನು ಎಳೆಯುತ್ತಿದ್ದಂತೆ ನೆರೆದ ಭಕ್ತಸಾಗರ ಹೂ, ಹಣ್ಣು, ಉತ್ತುತ್ತಿ, ದಕ್ಷಿಣೆ, ಮಂಡಾಳ, ಕುಂಕುಮ, ಅರಿಶಿಣ ಕೊಂಬುಗಳನ್ನು ರಥಕ್ಕೆ ಎಸೆದು ಚನ್ನಬಸವ ತಾತ ಉಘೇ... ಉಘೇ... ಎನ್ನುತ್ತಾ ಶ್ರದ್ಧಾಭಕ್ತಿ ಸಮರ್ಪಿಸಿದರು.

ಉತ್ಸವದಲ್ಲಿ ಹರಗುರುಚರ ಮೂರ್ತಿಗಳು, ಮಾಜಿ ಸಚಿವರಾದ ಬಸವರಾಜ ಪಾಟೀಲ ಅನ್ವರಿ, ವೆಂಕಟರಾವ್ ನಾಡಗೌಡ, ಸಿರುಗುಪ್ಪ ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ, ಹನುಮನಗೌಡ ಬೆಳಗುರ್ಕಿ, ಬಸನಗೌಡ ಬಾದರ್ಲಿ, ಎನ್.ಶಿವನಗೌಡ ಗೊರೇಬಾಳ, ರಾಜಶೇಖರ ಪಾಟೀಲ, ಅಮರೇಗೌಡ ಕಾರಲಕುಂಟಿ, ಪಂಪನಗೌಡ ಬಾದರ್ಲಿ, ಕೆ.ಅಮರೇಗೌಡ, ಬೆಳಗುರ್ಕಿ ಹನುಮನಗೌಡ ಇದ್ದರು.