ಚನ್ನಗಿರಿ ಬಂದ್ ಸಂಪೂರ್ಣ: ಅಮ್ಜದ್‌ ವಿರುದ್ಧ ಪ್ರತಿಭಟನೆ

| Published : Feb 04 2025, 12:31 AM IST

ಚನ್ನಗಿರಿ ಬಂದ್ ಸಂಪೂರ್ಣ: ಅಮ್ಜದ್‌ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಮೇಲಿನ ಬಸ್ ನಿಲ್ದಾಣದಲ್ಲಿರುವ ಅಮರ್ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜದ್ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಖಂಡಿಸಿ, ಕಠಿಣ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ವಿಶ್ವಹಿಂದೂ ಪರಿಷತ್ತು, ಬಜರಂಗದಳದಿಂದ ಚನ್ನಗಿರಿ ಬಂದ್ ಆಚರಿಸಲಾಯಿತು.

- ವಿಹಿಂಪ, ಬಜರಂಗದಳ ನೇತೃತ್ವ । ವಕೀಲರ ಸಂಘದಿಂದ ಬೆಂಬಲ, ಮನವಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಮೇಲಿನ ಬಸ್ ನಿಲ್ದಾಣದಲ್ಲಿರುವ ಅಮರ್ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜದ್ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಖಂಡಿಸಿ, ಕಠಿಣ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ವಿಶ್ವಹಿಂದೂ ಪರಿಷತ್ತು, ಬಜರಂಗದಳದಿಂದ ಚನ್ನಗಿರಿ ಬಂದ್ ಆಚರಿಸಲಾಯಿತು.

ಸೋಮವಾರ ಬೆಳಗ್ಗೆ 7 ಗಂಟೆಯಿಂದಲೇ ಪಟ್ಟಣದ ಆಯಕಟ್ಟಿನ ಸ್ಥಳಗಳಾದ ಬೀರೂರು ಕ್ರಾಸ್, ಕಗತೂರು ಕ್ರಾಸ್, ಮೇಲಿನ ಬಸ್ ನಿಲ್ದಾಣ, ಮಾರುತಿ ಸರ್ಕಲ್ ಮುಂತಾದ ಪ್ರದೇಶಗಳಲ್ಲಿ ಟೈರ್‌ಗೆ ಬೆಂಕಿಹಚ್ಚಿ, ಆಕ್ರೋಶ ವ್ಯಕ್ತಪಡಿಸಲಾಯಿತು. ಕೆಲವು ಬಸ್‌ಗಳು ಸಂಚಾರ ಆರಂಭಿಸಿದವಾದರೂ, ಬಂದ್ ಮತ್ತು ಮುಷ್ಕರ ಬಿಸಿಯಿಂದಾಗಿ, ನಿಲ್ದಾಣದಿಂದ ಬದಲಿ ಮಾರ್ಗದಲ್ಲಿ ಸಂಚರಿಸಿದವು.

10 ಗಂಟೆಯಾಗುತ್ತಿದ್ದಂತೆಯೇ ವಿ.ಎಚ್.ಪಿ ಮತ್ತು ಬಜರಂಗದಳ ಕಾರ್ಯಕರ್ತರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿ, ಲೈಂಗಿಕ ದೌರ್ಜನ್ಯ ಆರೋಪಿ ಅಮ್ಜದ್‌ಗೆ ಗಲ್ಲುಶಿಕ್ಷೆ ವಿಧಿಸಿ, ಗಡಿಪಾರು ಮಾಡಲು ಘೋಷಣೆಗಳನ್ನು ಕೂಗಿದರು. ಬಂದ್ ಮತ್ತು ಮುಷ್ಕರಕ್ಕೆ ಪಟ್ಟಣದ ಎಲ್ಲ ಅಂಗಡಿ, ಹೋಟೆಲ್, ಸಣ್ಣಪುಟ್ಟ ಅಂಗಡಿಗಳ ವರ್ತಕರು, ವ್ಯಾಪಾರಿಗಳು ಬೆಂಬಲ ಸೂಚಿಸಿದರು. ಔಷಧಿ ಅಂಗಡಿಗಳ ಮಾಲೀಕರು, ರೈತ ಸಂಘ, ಡಿ.ಎಸ್.ಎಸ್. ಸಂಘಟನೆ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತರು, ಕಾಲೇಜುಗಳ ವಿದ್ಯಾರ್ಥಿಗಳು ಬೆಂಬಲ ನೀಡಿ, ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ವಕೀಲರಿಂದ ಬೆಂಬಲ, ಮನವಿ:

ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ವಕೀಲರು ಕೋರ್ಟ್‌ ಕಲಾಪದಿಂದ ದೂರ ಉಳಿದು, ಪ್ರತಿಭಟನೆಗೆ ಬೆಂಬಲವನ್ನು ಸೂಚಿಸಿದರು. ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕು, ಆರೋಪಿಯ ಪರವಾಗಿ ಯಾರೂ ವಕಾಲತ್ತು ವಹಿಸಿಕೊಳ್ಳಬಾರದು ಎಂದು ತೀರ್ಮಾನಿಸಿ, ತಹಸೀಲ್ದಾರ್‌ಗೆ ಪ್ರತೇಕ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆಯು ಮೇಲಿನ ಬಸ್ ನಿಲ್ದಾಣದ ಅಮ್ಜದ್‌ನ ಅಮರ್ ಮೆಡಿಕಲ್ ಬಳಿ ಬರುತ್ತಿದ್ದಂತೆಯೇ ಆರೋಪಿ ವಿರುದ್ದ ಘೋಷಣೆಗಳನ್ನು ಕೂಗಿದರು. ಆರೋಪಿಯ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಮಹಿಳೆಯರು ಚಪ್ಪಲಿಯಿಂದ ಬಾರಿಸುತ್ತಾ ಸಾಗಿದರು. ಬಳಿಕ ಅಮ್ಜದ್‌ನ ಅಂಗಡಿ ಮುಂದೆಯೇ ಪ್ರತಿಕ್ರಿತಿ ದಹನ ಮಾಡಿದರು. ಮಾರುತಿ ವೃತ್ತ ಮತ್ತು ಗಾಂಧಿ ವೃತ್ತದಲ್ಲಿ ಅಮ್ಜದ್ ಪ್ರತಿಕೃತಿ ದಹಿಸಲಾಯಿತು.

ಪ್ರತಿಭಟನಾ ಮೆರವಣಿಗೆ ಇಲ್ಲಿನ ಊರ ಮುಂದಿನ ಹನುಮಂತ ದೇವರ ದೇವಾಲಯದಿಂದ ಆರಂಭಗೊಂಡು ಕಲ್ಲುಸಾಗರ ಬೀದಿ ಮುಖಾಂತರ ಗಣಪತಿ ವೃತ್ತದಿಂದ ಸಾಗಿ ಸ್ವಾಮಿ ವಿವೇಕಾನಂದ ರಸ್ತೆ ಮೂಲಕ ಮೇಲಿನ ಬಸ್ ನಿಲ್ದಾಣ, ಮಾರುತಿ ವೃತ್ತದಿಂದ ಸಾಗಿತು. ಕಾಲೇಜು ರಸ್ತೆಯ ಮೂಲಕ ನೃಪತುಂಗ ರಸ್ತೆ ಬಳಸಿಕೊಂಡು, ಮಹಾತ್ಮ ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.- - - -3ಕೆಸಿಎನ್ಜಿ3.ಜೆಪಿಜಿ: ಆರೋಪಿಯ ಮೆಡಿಕಲ್ ಶಾಪ್ ಮುಂದೆ ಅಮ್ಜದ್‌ನ ಪ್ರತಿಕೃತಿ ದಹಿಸಲಾಯಿತು.

-3ಕೆಸಿಎನ್‌ಜಿ4.ಜೆಪಿಜಿ: ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂದೂಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

-3ಕೆಸಿಎನ್‌ಜಿ5.ಜೆಪಿಜಿ: ಚನ್ನಗಿರಿ ಪಟ್ಟಣದಲ್ಲಿ ಟೈರ್‌ಗಳಿಗೆ ಬೆಂಕಿಹಚ್ಚಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

-3ಕೆಸಿಎನ್ಜಿ6.ಜೆಪಿಜಿ: ಚನ್ನಗಿರಿ ಬಂದ್‌ ಹಿನ್ನೆಲೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು.

-3ಕೆಸಿಎನ್‌ಜಿ7.ಜೆಪಿಜಿ: ಚನ್ನಗಿರಿಯಲ್ಲಿ ವಕೀಲರು ನ್ಯಾಯಾಲಯ ಕಲಾಪದಿಂದ ದೂರ ಉಳಿದು, ಪ್ರತಿಭಟನೆಗೆ ಬೆಂಬಲ ಸೂಚಿಸಿ, ಪ್ರತ್ಯೇಕ ಮನವಿ ಸಲ್ಲಿಸಿದರು.