ಚನ್ನಗಿರಿ ಪುರಸಭೆ ಅಧ್ಯಕ್ಷ ಸ್ಥಾನ ಮತ್ತೆ ಬಿಜೆಪಿಗೆ!

| Published : Feb 19 2025, 12:48 AM IST

ಸಾರಾಂಶ

ಚನ್ನಗಿರಿ ಪಟ್ಟಣದ ಪುರಸಭೆ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಚುನಾವಣೆ ಫೆ.28ರಂದು ನಡೆಸಲು ದಿನಾಂಕ ನಿಗದಿಗೊಂಡಿದೆ. ಮೊದಲನೆ ಅವಧಿಯಲ್ಲಿ ಬಿಜೆಪಿ ಅಧಿಕಾರ ನಡೆಸಿದಂತೆ, ಎರಡನೇ ಅವಧಿಯಲ್ಲಿಯೂ ಮೀಸಲಾತಿ ಪರಿಣಾಮ ಬಿಜೆಪಿಯವರೇ ಅಧಿಕಾರ ನಡೆಸಲಿದ್ದಾರೆ. ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

- ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮೀಸಲು । ಲಕ್ಷ್ಮೀದೇವಮ್ಮ ಮತ್ತೆ ಅಧ್ಯಕ್ಷೆ

- ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಹೆಚ್ಚಿದ ಪೈಪೋಟಿ । ಕೋರ್ಟ್‌ ಆದೇಶ; ಮೊದಲಿದ್ದ ಮೀಸಲಾತಿ ಜಾರಿ- - - ಬಾ.ರಾ.ಮಹೇಶ್, ಚನ್ನಗಿರಿ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಪುರಸಭೆ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಚುನಾವಣೆ ಫೆ.28ರಂದು ನಡೆಸಲು ದಿನಾಂಕ ನಿಗದಿಗೊಂಡಿದೆ. ಮೊದಲನೆ ಅವಧಿಯಲ್ಲಿ ಬಿಜೆಪಿ ಅಧಿಕಾರ ನಡೆಸಿದಂತೆ, ಎರಡನೇ ಅವಧಿಯಲ್ಲಿಯೂ ಮೀಸಲಾತಿ ಪರಿಣಾಮ ಬಿಜೆಪಿಯವರೇ ಅಧಿಕಾರ ನಡೆಸಲಿದ್ದಾರೆ. ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

2ನೇ ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿ ಪರಿಶಿಷ್ಟ ಜಾತಿ ಮಹಿಳೆ ಮೀಸಲಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ. ಪರಿಶಿಷ್ಟ ಜಾತಿ ಮಹಿಳಾ ಮೀಸಲು ಅದೃಷ್ಟ ಕಾಂಗ್ರೆಸ್‌, ಜೆಡಿಎಸ್‌ ಪಾಲಿಗೆ ಇಲ್ಲವಾಗಿದೆ. ಏಕೆಂದರೆ, ಈ ಎರಡೂ ಪಕ್ಷಗಳಲ್ಲಿ ಮೀಸಲಾತಿಗೆ ಅರ್ಹವಾದ ಸದಸ್ಯರಿಲ್ಲ. ಹೀಗಾಗಿ ಬಿಜೆಪಿಯಲ್ಲಿರುವ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಮೀಸಲಾತಿಗೆ ಅರ್ಹರಾಗಿದ್ದರಿಂದ ಅಧ್ಯಕ್ಷ ಸ್ಥಾನ ಅವರಿಗೆ ಪುನಃ ಒಲಿಯುವುದು ಖಚಿತವಾಗಿದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಡಲಿದ್ದು, ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಯಾರಿಗೆ ಅದೃಷ್ಟ ಒಲಿದುಬರಲಿದೆ ಎಂಬ ಕುತೂಹಲ ಎಲ್ಲರದಾಗಿದೆ.

23 ವಾರ್ಡ್‌ಗಳ ಪುರಸಭೆ:

2018ರ ಏ.3ರಂದು ಪುರಸಭೆಗೆ ಪಟ್ಟಣದ 23 ವಾರ್ಡ್‌ಗಳ ಚುನಾವಣೆ ನಡೆಸಲಾಗಿತ್ತು. ಚುನಾವಣೆ ನಡೆದು 7 ವರ್ಷಗಳು ತುಂಬುತ್ತಿವೆ. ಆಗ ನಡೆದ ಚುನಾವಣೆಯಲ್ಲಿ 10 ಜನ ಕಾಂಗ್ರೆಸ್, 10 ಜನ ಬಿಜೆಪಿ, 3 ಜನ ಜೆಡಿಎಸ್ ಪಕ್ಷದಿಂದ ಚುನಾಯಿತರಾಗಿದ್ದರು. ಮೊದಲನೆ ಅವಧಿಯ ಮೀಸಲಾತಿಯು ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ಬಂದಿತ್ತು.

ಈ 23 ಜನ ಚುನಾಯಿತ ಸದಸ್ಯರಲ್ಲಿ ಪಟ್ಟಣದ 23ನೇ ವಾರ್ಡ್‌ನಿಂದ ಬಿಜೆಪಿ ಪಕ್ಷದಿಂದ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಅವರು ಪರಿಶಿಷ್ಟ ಜಾತಿ ಮೀಸಲಾತಿಯಡಿ ಸ್ಪರ್ಧಿಸಿ ಜಯಗಳಿಸಿದ್ದ ಏಕೈಕ ಮಹಿಳೆಯಾಗಿದ್ದರು. ಇದರಿಂದ ಹೆಚ್ಚಿನ ಶ್ರಮವಿಲ್ಲದೇ ಬಿಜೆಪಿಯ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಅವರು ಅಧ್ಯಕ್ಷರಾಗಿ 30 ತಿಂಗಳ ಕಾಲ ಆಡಳಿತ ನಡೆಸಿದ್ದರು.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಜೆಡಿಎಸ್ ಪಕ್ಷದಿಂದ ಜರೀನಾಭಿ, ಬಿಜೆಪಿ ಪಕ್ಷದಿಂದ ಕಮಲಾ ಹರೀಶ್ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಈ ಎರಡು ಜನ ಅಭ್ಯರ್ಥಿಗಳ ಹೆಸರನ್ನು ಲಾಟರಿ ಮೂಲಕ ಆರಿಸಿದಾಗ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜರೀನಾಭಿ ಉಪಾಧ್ಯಕ್ಷರಾಗಿ 30 ತಿಂಗಳ ಕಾಲ ಆಡಳಿತ ನಡೆಸಿದ್ದರು.

2ನೇ ಅವಧಿ ಮೀಸಲಾತಿ:

ಪುರಸಭೆ ಎರಡನೇ ಅವಧಿಗೂ 2024ರಲ್ಲಿ ಮತ್ತೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿತ್ತು. ಆದರೆ, ಈ ಮೀಸಲಾತಿ ಪ್ರಶ್ನಿಸಿ ಕೆಲ ಪುರಸಭಾ ಸದಸ್ಯರು ನ್ಯಾಯಾಲಯಕ್ಕೆ ಹೋಗಿದ್ದ ಕಾರಣ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ತಡವಾಗಿತ್ತು. ನ್ಯಾಯಾಲಯದ ಆದೇಶ ಮೇರೆಗೆ ಎರಡನೇ ಅವಧಿಗೂ ಮೀಸಲಾತಿ ನಿಗದಿಯಾದಂತೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಆಯ್ಕೆ ಪ್ರಕ್ರಿಯೆಯ ದಿನಾಂಕ ಫೆ.28ಕ್ಕೆ ನಿಗದಿಗೊಂಡಿದ್ದು, ಎರಡನೇ ಬಾರಿಯ ಪುರಸಭೆ ಆಡಳಿತ ಚುಕ್ಕಾಣಿಯೂ ಬಿಜೆಪಿಗೇ ಸಿಗುವುದು ಖಚಿತವಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ 10 ಸದಸ್ಯರಲ್ಲಿ ಶ್ರೀಕಾಂತ್, ಗೌಸ್ ಪೀರ್, ಹಾಲೇಶ್, ಜಿ.ನಿಂಗಪ್ಪ ಅವರು ಆಕಾಂಕ್ಷಿತರಾಗಿದ್ದಾರೆ. ಕಾಂಗ್ರೆಸ್ ಮಹಿಳಾ ಸದಸ್ಯರಲ್ಲೊಬ್ಬರು ಉಪಾಧ್ಯಕ್ಷರಾಗುವ ಸಾಧ್ಯತೆಗಳಿವೆ. ಈಗಾಗಲೇ ಜೆಡಿಎಸ್ ಪಕ್ಷದಿಂದ ಜಯಗಳಿಸಿದ್ದ ಮೂವರು ಸದಸ್ಯರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ.

- - - -(ಫೋಟೋ ಬರಲಿದೆ) ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ

-18ಕೆಸಿಎನ್ಜಿ1: ಚನ್ನಗಿರಿಯ ಪುರಸಭಾ ಕಚೇರಿ.