ಸಾರಾಂಶ
ವಿಜಯ್ ಕೇಸರಿ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣಚನ್ನಪಟ್ಟಣದ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನ.೧೩ಕ್ಕೆ ಚುನಾವಣೆ ನಿಗದಿಯಾಗಿದೆ. ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಯಾವ ಪಕ್ಷದಿಂದ ಯಾವ ಅಭ್ಯರ್ಥಿ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ತೀವ್ರಗೊಂಡಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೊರೆದ ಕ್ಷೇತ್ರ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸ್ವಕ್ಷೇತ್ರ, ಡಿಸಿಎಂ ಡಿ.ಕೆ. ಶಿವಕುಮಾರ್ ಈ ಹಿಂದೆ ಚನ್ನಪಟ್ಟಣದ ಒಂದು ಭಾಗವನ್ನು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಎಂಬ ಕಾರಣಕ್ಕೆ ಇದು ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್, ಎನ್‌ಡಿಎ ಮೈತ್ರಿಕೂಟದಿಂದ ಯಾರು ಸ್ಪರ್ಧಿಸುತ್ತಾರೆ. ಎನ್‌ಡಿಎ ಟಿಕೆಟ್ ಕೈತಪ್ಪಿದ್ದಲ್ಲಿ ಯೋಗೇಶ್ವರ್ ನಡೆ ಏನು ಎಂಬ ಚರ್ಚೆ ತೀವ್ರಗೊಂಡಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ಪಡೆದುಕೊಂಡಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರಕ್ಕೆ ಎಂಟ್ರಿ ನೀಡುವ ಮೂಲಕ ಚುನಾವಣೆ ರಣಕಹಳೆ ಮೊಳಗಿಸಿದ್ದರು. ಅನಂತರ ಬಿಜೆಪಿ ಹಾಗೂ ಜೆಡಿಎಸ್‌ನಲ್ಲೂ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿತಾದರೂ, ಆ ಪಕ್ಷಗಳು ಟಿಕೆಟ್ ಹಗ್ಗ-ಜಗ್ಗಾಟದಲ್ಲಿ ತೊಳಲಾಡುತ್ತಿವೆ.ಬಗೆಹರಿಯದ ಗೊಂದಲ:
ಲೋಕಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಂಡರೂ, ಇದುವರೆಗೆ ಮೂರು ಪಕ್ಷಗಳು ತನ್ನ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಬಿಜೆಪಿ- ಜೆಡಿಎಸ್‌ನಲ್ಲಿ ಮೈತ್ರಿ ಟಿಕೆಟ್ ಗೊಂದಲ ಮುಂದುವರಿದಿದ್ದರೆ, ಎಲ್ಲರಿಗಿಂತ ಮುಂಚೆ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ಸಹ ತನ್ನ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಇಂಥ ವೇಳೆಯಲ್ಲಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಯಾವ ಪಕ್ಷದಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಚರ್ಚೆ ತೀವ್ರಗೊಂಡಿದೆ.ಮೈತ್ರಿ ಟಿಕೆಟ್ ಕಗ್ಗಂಟು:
ಕಳೆದ ಲೋಕಸಭಾ ಚುನಾವಣೆಯ ವೇಳೆ ಮೈತ್ರಿ ಮಾಡಿಕೊಂಡ ಜೆಡಿಎಸ್- ಬಿಜೆಪಿಯಲ್ಲಿ ಚನ್ನಪಟ್ಟಣದ ಟಿಕೆಟ್‌ಗಾಗಿ ಹಗ್ಗ-ಜಗ್ಗಾಟ ನಡೆದಿದೆ. ಲೋಕಸಭಾ ಚುನಾವಣೆಯ ವೇಳೆ ಜೋಡೆತ್ತುಗಳಂತೆ ಒಂದಾಗಿ ಕೆಲಸ ಮಾಡಿದ್ದ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಟಿಕೆಟ್ ಹಗ್ಗ-ಜಗ್ಗಾಟದ ಹಿನ್ನೆಲೆಯಲ್ಲಿ ದೂರಾಗಿದ್ದಾರೆ.ಚನ್ನಪಟ್ಟಣ ಕ್ಷೇತ್ರ ಬಹುತೇಕ ಜೆಡಿಎಸ್ ಪಾಲಾಗುವ ಸೂಚನೆ ಸಿಕ್ಕಿದೆ. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಕುರಿತು ಸ್ಪಷ್ಟ ಸಂದೇಶವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೀಡಿದ್ದು, ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಸೂಚಿಸುವ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿಯನ್ನೂ ಮಾಡಿದ್ದಾರೆ.
ಕಣಕ್ಕೆ ಇಳಿಯುವರೇ ನಿಖಿಲ್?:ಈಗಾಗಲೇ ಕ್ಷೇತ್ರದಲ್ಲಿ ಎಚ್‌ಡಿಕೆ ಒಂದು ಸುತ್ತಿನ ಪ್ರವಾಸ ನಡೆಸಿದ್ದು, ಇದರ ಬೆನ್ನಲ್ಲೇ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯ ಕುರಿತು ಸಾಕಷ್ಟು ಚರ್ಚೆಗಳು ಆರಂಭಗೊಂಡಿವೆ. ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಖುದ್ದು ಕುಮಾರಸ್ವಾಮಿ ಹಾಗೂ ನಿಖಿಲ್ ಕ್ಷೇತ್ರದಲ್ಲಿ ಪ್ರವಾಸ ನಡೆಸಿ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ನಡೆಸಿದ್ದು, ನಿಖಿಲ್ ಅವರೇ ಸ್ಪರ್ಧಿಸುವರೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ನಿಖಿಲ್ ಒಪ್ಪದಿದ್ದ ಪಕ್ಷದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತುಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಬಿಜೆಪಿ ನಡೆ ಏನು:ಉಪಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿರುವ ಬಿಜೆಪಿ ಮುಖಂಡರು ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಇದರ ನಡುವೆಯೂ ಎನ್‌ಡಿಎ ಟಿಕೆಟ್ ಕೈತಪ್ಪುವ ಆತಂಕ ಸೈನಿಕನಲ್ಲಿ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಸಿಪಿವೈ ಬುಧವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದು, ಅಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಗಮನ ನೆಟ್ಟಿದೆ.
ಗುಟ್ಟುಬಿಟ್ಟುಕೊಡದ ಕಾಂಗ್ರೆಸ್:ಇನ್ನು ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ಗುಟ್ಟನ್ನು ಕಾಂಗ್ರೆಸ್ ಬಿಟ್ಟುಕೊಡುತ್ತಿಲ್ಲ. ಕ್ಷೇತ್ರದಿಂದ ಮಾಜಿ ಸಂಸದ ಡಿ.ಕೆ. ಸುರೇಶ್ ಸ್ಪರ್ಧಿಸುವ ಕುರಿತು ಚರ್ಚೆಗಳು ನಡೆದಿವೆಯಾದರೂ, ಸುರೇಶ್ ತಮ್ಮ ನಿಲುವನ್ನು ಪ್ರಕಟಿಸುತ್ತಿಲ್ಲ. ಇದೇ ವೇಳೆ ಕ್ಷೇತ್ರಕ್ಕೆ ಆರಂಗ್ರೇಟ್ರಂ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಓಡಾಟ ನಡೆಸಿದ್ದಾರೆ. ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಹೆಸರು ಸಹ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆಯಾದರೂ ಅಭ್ಯರ್ಥಿ ಹೆಸರನ್ನು ಡಿಕೆಶಿ ಫೈನಲ್ ಮಾಡದೇ ಇರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದೀಗ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನೆಲ್ಲೇ ಮೂರೂ ಪಕ್ಷಗಳಲ್ಲೂ ಚಟುವಟಿಕೆಗಳು ಗರಿಗೆದರಿದ್ದು, ಯಾವ ಪಕ್ಷದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.ಚನ್ನಪಟ್ಟಣಕ್ಕೆ ಮೂರನೇ ಉಪಚುನಾವಣೆ
ಚನ್ನಪಟ್ಟಣಕ್ಕೂ ಉಪಚುನಾವಣೆಗೂ ಒಂದು ರೀತಿಯ ನಂಟಿದ್ದು, ಪ್ರತಿಷ್ಠಿತ ಕ್ಷೇತ್ರ ಎನ್ನಿಸಿರುವ ಕ್ಷೇತ್ರಕ್ಕೆ ನಡೆಯುತ್ತಿರುವ ಮೂರನೇ ಉಪಚುನಾವಣೆ ಇದಾಗಿದೆ. ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಶಾಸಕರಾದವರು ರಾಜೀನಾಮೆ ನೀಡಿದ ಕಾರಣಕ್ಕೆ ಕ್ಷೇತ್ರಕ್ಕೆ ಮೂರನೇ ಬಾರಿ ಉಪುಚುನಾವಣೆ ಎದುರಿಸುವಂತಾಗಿದೆ. ೨೦೦೮ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಸಿ.ಪಿ.ಯೋಗೇಶ್ವರ್ ೨೦೦೯ರಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಉಪಚುನಾವಣೆ ಎದುರಾಗಿತ್ತು. ಆ ನಂತರ ಜೆಡಿಎಸ್‌ನಿಂದ ಶಾಸಕರಾಗಿದ್ದ ಎಂ.ಸಿ.ಅಶ್ವತ್ಥ್ ೨೦೧೧ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮತ್ತೊಂದು ಉಪಚುನಾವಣೆ ಎದುರಾಗಿತ್ತು. ಇದೀಗ ೨೦೨೩ರಲ್ಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಉಪಚುನಾವಣೆ ಎದುರಾಗಿದೆ.