ಸಾರಾಂಶ
ಚನ್ನಪಟ್ಟಣ : ಚನ್ನಪಟ್ಟಣವನ್ನು ಅಭಿವೃದ್ಧಿ ಪಟ್ಟಣ ಮಾಡಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಬೆಂಗಳೂರು ಆಗುತ್ತದೆ. ಒಂದು ಜವಾಬ್ದಾರಿ ಸ್ಥಾನದಲ್ಲಿ ನಿಂತು ಇದ್ದನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.
ನಗರದ ಕೋಟೆಯ ಹಳೇ ಕಚೇರಿ ಬಳಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಯಾರು ನಿಮ್ಮ ಬಳಿ ಅಧಿಕಾರಿಗಳನ್ನು ಕರೆತಂದು ನಿಮ್ಮ ಸಮಸ್ಯೆ ಆಲಿಸುವ ಕೆಲಸ ಮಾಡಿರಲಿಲ್ಲ. ಚನ್ನಪಟ್ಟಣ ಕತ್ತಲೆಯಲ್ಲಿದೆ, ಇದಕ್ಕೆ ಬೆಳಕು ಬೇಕು. ಈ ಕ್ಷೇತ್ರವನ್ನ ಅಭಿವೃದ್ಧಿ ಮಾಡಲು ನಾನಿಲ್ಲಿ ಬಂದಿದ್ದೇನೆ. ಚನ್ನಪಟ್ಟಣಕ್ಕೆ ಹೊಸ ಚೈತನ್ಯ ತರುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಕನಕಪುರದಲ್ಲಿ ನಾನು ಇಂತಹ ಪ್ರಯತ್ನ ನಡೆಸಿ, ಅನೇಕ ಮಾದರಿಯಾದ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದರು.
ಹೊಸ ಟೌನ್ ನಿರ್ಮಾಣ:
ಜನಸ್ಪಂದನಾ ಕಾರ್ಯಕ್ರಮದಲ್ಲಿ ಬಹಳ ಜನ ನಿವೇಶನ, ಮನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಚನ್ನಪಟ್ಟಣ ಸುತ್ತಮುತ್ತ ಸುಮಾರು ೩೦ ರಿಂದ ೪೦ ಎಕರೆ ಜಾಗ ಗುರುತಿಸಿ ಹೊಸ ಟೌನ್ ನಿರ್ಮಾಣ ಮಾಡಿ ಎಲ್ಲ ಬಡವರಿಗೆ ಸೈಟ್ ನೀಡಲಾಗುವುದು. ಸರ್ಕಾರಿ ಜಾಗ ಇಲ್ಲದಿದ್ದಲ್ಲಿ ಖಾಸಗಿಯವರಿಂದ ಜಾಗ ಖರೀದಿಸಿ ಕನಕಪುರ ಮಾದರಿಯಲ್ಲಿ ಸೈಟ್ ಹಂಚಲಾಗುವುದು ಎಂದು ತಿಳಿಸಿದರು.
ಅನ್ಯಾಯ ಸರಿಪಡಿಸುವೆ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಸೇರಿ ಎಲ್ಲ ಐದು ಗ್ಯಾರಂಟಿಗಳನ್ನು ಜಾರಿಗೆ ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಸಭೆಯನ್ನು ನಡೆಸಿ, ನಿಮಗೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜನಸ್ಪಂದನಾ ಕಾರ್ಯಕ್ರಮದ ಇಡೀ ಸರ್ಕಾರವನ್ನು ನಿಮ್ಮ ಮನೆ ಬಾಗಿಲಿಗೆ ತಂದು ನಿಮ್ಮ ಸೇವೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಎಲ್ಲ ಇಲಾಖೆಯ ಅಧಿಕಾರಿಗಳ ತಂಡ ನಿಮ್ಮ ಸೇವೆ ಮಾಡಲು ಕಂಕಣ ಬದ್ಧವಾಗಿದೆ. ಕಾರ್ಯಕ್ರಮದಲ್ಲಿ ಇದುವರೆಗೆ ಸುಮಾರು ೧೦ ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ಇದೊಂದು ಮಾದರಿ ಕಾರ್ಯಕ್ರಮ ಎಂದು ಹೇಳಿದರು.
ಡಿ.ಕೆ.ಸುರೇಶ್ ಸಂಸದರಾಗಿದ್ದ ಅವಧಿಯಲ್ಲಿ ಇಲ್ಲಿನ ರಾಮಮ್ಮನಕೆರೆ ಬಳಿ ೨.೫ ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಚಿತಾಗಾರವನ್ನು ನಿರ್ಮಿಸಲಾಗಿದೆ. ಎಲೇಕೇರಿ ಮೇಲ್ಸೇತುವೆ, ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ೯೪ ಕೋಟಿ ರು. ವೆಚ್ಚದ ಯುಜಿಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ನಗರದ ಪ್ರದೇಶ ಸಮಸ್ಯೆಗಳನ್ನು ಪರಿಹರಿಸಲು ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಯಾವುದೇ ಇಲಾಖೆಯಿಂದ ತೊಂದರೆಯಾಗಿದ್ದರೂ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ನಿಮ್ಮ ರಕ್ಷಣೆಗೆ ಹಾಗೂ ಸೇವೆಗೆ ನಾನು ಬಂದಿದ್ದೇನೆ. ನೀವೆಲ್ಲ ಸೇರಿ ನನ್ನ ಕೈ ಬಲಪಡಿಸಿ, ನನಗೆ ಶಕ್ತಿ ನೀಡಿ. ನಮ್ಮ ಶಾಸಕರನ್ನು ಆಯ್ಕೆ ಮಾಡಿದರೆ ನಿಮ್ಮ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಮನಗರ ಶಾಸಕ ಇಕ್ಪಾಲ್ ಹುಸೇನ್, ಮದ್ದೂರು ಶಾಸಕ ಉದಯ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಪುಟ್ಟಣ್ಣ, ಮಾಜಿ ಶಾಸಕ ಅಶ್ವತ್ಥ, ಗ್ಯಾರಂಟಿ ಅನುಷ್ಥಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಇತರರಿದ್ದರು.