ನಿರ್ಮಾಣ ಹಂತದ ಕಟ್ಟಡದ ಮಣ್ಣು ಕುಸಿತ, 1 ಸಾವು

| Published : Jul 04 2024, 01:07 AM IST

ನಿರ್ಮಾಣ ಹಂತದ ಕಟ್ಟಡದ ಮಣ್ಣು ಕುಸಿತ, 1 ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ನಗರದ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ತಳಪಾಯಕ್ಕೆ ತೆಗೆದ ಗುಂಡಿಯ ಪಕ್ಕದ ಮಣ್ಣು ಕುಸಿದು, ಉತ್ತರ ಭಾರತ ಮೂಲದ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ಬುಧವಾರ ಸಂಭವಿಸಿದೆ.

ಮಂಗಳೂರುನಗರದ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ತಳಪಾಯಕ್ಕೆ ತೆಗೆದ ಗುಂಡಿಯ ಪಕ್ಕದ ಮಣ್ಣು ಕುಸಿದು, ಉತ್ತರ ಭಾರತ ಮೂಲದ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ಬುಧವಾರ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಇನ್ನೋರ್ವ ಕಾರ್ಮಿಕನನ್ನು ರಕ್ಷಿಸಲಾಗಿದೆ. ಬಿಹಾರ ಮೂಲದ ರಾಜ್‌ಕುಮಾರ್‌ (18) ರಕ್ಷಿಸಲ್ಪಟ್ಟ ಕಾರ್ಮಿಕ. ಉತ್ತರ ಪ್ರದೇಶದ ಚಂದನ್‌ (30) ಮೃತಪಟ್ಟ ದುರ್ದೈವಿ. ಬುಧವಾರ ಮಧ್ಯಾಹ್ನ ಘಟನೆ ಸಂಭವಿಸಿದ್ದು, ಇವರಿಬ್ಬರ ಜೊತೆ ಉಳಿದ 60ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್‌ ಉಳಿದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಈ ಮಧ್ಯೆ, ಮಧ್ಯಾಹ್ನದಿಂದ ರಾತ್ರಿವರೆಗೆ ಕಾರ್ಯಾಚರಣೆ ನಡೆಸಿದರೂ ಮಣ್ಣಿನಡಿ ಸಿಲುಕಿದ್ದ ಚಂದನ್‌ನ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಘಟನೆ ವಿವರ:ಬಲ್ಮಠದಲ್ಲಿ ರೋಹನ್‌ ಕಾರ್ಪೊರೇಷನ್‌ಗೆ ಸೇರಿದ ಬೃಹತ್ ವಾಣಿಜ್ಯ ಕಟ್ಟಡವೊಂದು ನಿರ್ಮಾಣ ಹಂತದಲ್ಲಿದೆ. ಬುಧವಾರ ಮಧ್ಯಾಹ್ನ 11.30ರ ವೇಳೆ ಸುಮಾರು 20 ಅಡಿ ಆಳದಲ್ಲಿ ವಾಟರ್‌ ಫ್ರೂಫಿಂಗ್‌ ಕಾಮಗಾರಿ ನಡೆಸುತ್ತಿದ್ದ ವೇಳೆ ಏಕಾಏಕಿ ಮೇಲ್ಭಾಗದ ಒಂದು ಪಾರ್ಶ್ವದಿಂದ ಧರೆ ಕುಸಿಯಿತು. ಈ ವೇಳೆ ಅಡಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜ್‌ಕುಮಾರ್‌ ಮತ್ತು ಚಂದನ್‌ ಮೇಲೆ ಮಣ್ಣು ರಾಶಿ ಬಿದ್ದಿದ್ದು, ಅವರು ಮಣ್ಣಿನಡಿ ಸಿಲುಕಿಕೊಂಡರು. ಮಳೆಗಾಲದಲ್ಲಿ ಮಳೆಗೆ ಮಣ್ಣು ಸಡಿಲಗೊಂಡು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಹಾಗೂ ಸ್ಥಳೀಯ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸಿ, ಮಧಾಹ್ನ 2.45ರ ಸುಮಾರಿಗೆ ರಾಜ್‌ಕುಮಾರ್‌ ನನ್ನು ರಕ್ಷಣೆ ಮಾಡುವಲ್ಲಿ ಸಫಲವಾಯಿತು. ರಾಜ್‌ಕುಮಾರ್‌ ನನ್ನು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಧರೆ ಕುಸಿದ ವೇಳೆ ರಾಜ್‌ಕುಮಾರ್‌, ಶೀಟ್‌ನ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ, ಅ‍ವರು ಮಣ್ಣಿನಡಿ ಮೇಲ್ಭಾಗದಲ್ಲಿ ಸಿಲುಕಿದ್ದರಿಂದ ಕಾರ್ಯಾಚರಣೆಯಲ್ಲಿ ಬೇಗನೆ ರಕ್ಷಿಸಲು ಸಾಧ್ಯವಾಗಿದೆ.

ಕಾಂಕ್ರಿಟ್‌ ತಡೆಗೋಡೆಯ ಆಳದಲ್ಲಿ ಮಣ್ಣಿನಡಿ ಸಿಲುಕಿರುವ ಚಂದನ್‌ನ ರಕ್ಷಣೆಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ತಂಡಗಳು ಶಿಪ್ಪಿಂಗ್ಸ್‌ ಹ್ಯಾಮರ್‌ ಮೂಲಕ ಕಾಂಕ್ರಿಟ್‌ ತಡೆಗೋಡೆಯನ್ನು ಡ್ರಿಲ್‌ ಮಾಡಿ, ಅದರ ಮೂಲಕ ಸರಳು ಹಾಗೂ ಮಣ್ಣುಗಳ ನಡುವೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಲುಕಿದ್ದ ಚಂದನ್‌ ಗೆ ಗ್ಲುಕೋಸ್‌, ಆಕ್ಸಿಜನ್‌ ಪೂರೈಸಿದರು. ಎಲೋಜಿನ್‌ ಲೈಟ್‌ ಅಳವಡಿಸಿ ಸಂಜೆಯೂ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಸತತ 7 ಗಂಟೆ ನಿರಂತರ ಕಾರ್ಯಾಚರಣೆ ನಂತರವೂ ಜೀವಂತ ಹೊರತೆಗೆಯಲು ಸಾಧ್ಯವಾಗಲಿಲ್ಲ. ಚಂದನ್‌ಗೆ ಪತ್ನಿ, ಇಬ್ಬರು ಪುಟ್ಟಮಕ್ಕಳು, ಮಾನಸಿಕವಾಗಿ ಅಸ್ವಸ್ಥರಾಗಿರುವ ತಂದೆ ಹಾಗೂ ತಾಯಿ ಇದ್ದಾರೆ.

ಮಳೆಗಾಲ ಮುಕ್ತಾಯದವರೆಗೆ ಕಟ್ಟಡ ಕಾಮಗಾರಿಗೆ ನಿರ್ಬಂಧ:

ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಪಡೆದಂತಹ ಕಟ್ಟಡ ನಿರ್ಮಾಣದಾರರಿಗೆ ಮಳೆಗಾಲ ಮುಕ್ತಾಯದವರೆಗೆ ಯಾವುದೇ ಕಾಮಗಾರಿ ನಡೆಸದಂತೆ ಪಾಲಿಕೆ ನಿರ್ಬಂಧಿಸಿ, ಆದೇಶ ಹೊರಡಿಸಿದೆ. ಈಗಾಗಲೇ ಪ್ರಾರಂಭಿಸಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಂಡು ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಉಲ್ಲಂಘನೆ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ದ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.