ಹೈವೋಲ್ಟೇಜ್ ಕ್ಷೇತ್ರ ಚನ್ನಪಟ್ಟಣದ ಉಪಚುನಾವಣೆ : ನಾಳೆ 31 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

| Published : Nov 22 2024, 01:19 AM IST / Updated: Nov 22 2024, 05:03 AM IST

ಹೈವೋಲ್ಟೇಜ್ ಕ್ಷೇತ್ರ ಚನ್ನಪಟ್ಟಣದ ಉಪಚುನಾವಣೆ : ನಾಳೆ 31 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣದಲ್ಲಿ  ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ನಡುವೆ ಪ್ರಬಲ ಸ್ಪರ್ಧೆ ನಡೆದಿದೆ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು, ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಅಷ್ಟೇ ಅಲ್ಲದೇ ಮತದಾರರಿಗೂ ಚುನಾವಣೆ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.  

ಎಂ.ಅಫ್ರೋಜ್ ಖಾನ್

  ರಾಮನಗರ : ಹೈವೋಲ್ಟೇಜ್ ಕ್ಷೇತ್ರವಾದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 31 ಮಂದಿಯ ರಾಜಕೀಯ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ.

ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನಡುವೆ ಮೇಲ್ನೋಟಕ್ಕೆ ನೇರಾನೇರ ಕಾಳಗ ನಡೆದಿದ್ದರೂ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಉಪಚುನಾವಣೆ ಪ್ರತಿಷ್ಠೆಯಾಗಿದೆ.

ಈ ಕಾರಣದಿಂದಾಗಿ ನಿಖಿಲ್ ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್ ಅವರ ರಾಜಕೀಯ ಹಣೆಬರಹ ತಿಳಿಯಲು ಅಭ್ಯರ್ಥಿಗಳಷ್ಟೇ ಅಲ್ಲ, ಮತದಾರರೂ ಕಾತುರರಾಗಿದ್ದಾರೆ. ಬೂತ್ ವಾರು ಮತದಾನದ ವಿವರ ಪಡೆದು, ಗೆಲುವಿನ ನಿರೀಕ್ಷೆಯಲ್ಲಿರುವ ಇಬ್ಬರು ಅಭ್ಯರ್ಥಿಗಳ ಪೈಕಿ ಯಾರ ಉತ್ಸಾಹಕ್ಕೆ ಮತದಾರರು ತಣ್ಣೀರು ಎರಚಿದ್ದಾರೋ ನೋಡಬೇಕಿದೆ.

ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲಿ ಎದೆ ಬಡಿತ ಜೋರಾಗಿ ಢವಢವ ಶುರುವಾಗಿದೆ. ಕೆಲ ದಿನಗಳಿಂದ ಸತತವಾಗಿ ಓಡಾಡಿಕೊಂಡು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಸುಸ್ತಾಗಿದ್ದ ಅಭ್ಯರ್ಥಿಗಳು 9 ದಿನಗಳ ಕಾಲ ನಿರಾಳರಾಗಿದ್ದರು. ನಾಳೆಯೇ ಮತ ಎಣಿಕೆ ಇರುವುದರಿಂದ ಫಲಿತಾಂಶ ಯಾರ ಪರವಾಗಿ ಬರುತ್ತದೆಯೋ ಏನೋ ಎಂಬ ತಳಮಳ ಎಲ್ಲ ಅಭ್ಯರ್ಥಿಗಳಲ್ಲಿ ಹೆಚ್ಚಾಗಿ ಎದೆ ಬಡಿತವೂ ಜೋರಾಗಿದೆ.

ಅಭ್ಯರ್ಥಿಗಳಲ್ಲಿಯೂ ಸಹ ಆತಂಕ, ಕುತೂಹಲ ಶುರುವಾಗಿದೆ. ಪ್ರಚಾರ, ಪಾದಯಾತ್ರೆ, ಬಹಿರಂಗ ಸಮಾವೇಶ ಎಂಬ ಪರೀಕ್ಷೆ ಮುಗಿಸಿ, ಅದಕ್ಕೆ ಮತದಾರರು ಯಾವ ರೀತಿ ಫಲಿತಾಂಶ ನೀಡುತ್ತಾರೆ ಎಂದು ಅಭ್ಯರ್ಥಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

ಮತದಾರ ಪ್ರಭುವನ್ನು ಒಲಿಸಿಕೊಳ್ಳಲು ನಡೆಸಿದ್ದ ಕಸರತ್ತುಗಳು ಯಾವ ರೀತಿ ಯಶಸ್ವಿಯಾಗಿವೆ. ಮತದಾರ ಪ್ರಭು ನಮ್ಮ ಕೈ ಹಿಡಿಯುತ್ತಾನೆಯೋ ಇಲ್ಲವೋ? ಎಂಬ ಚಿಂತೆ ಅಭ್ಯರ್ಥಿಗಳ ನೆಮ್ಮದಿ ಕೆಡಿಸಿದೆ.

ಅಭ್ಯರ್ಥಿಗಳು ಮತ ಎಣಿಕೆ ಕಾರ್ಯಕ್ಕಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮತ ಎಣಿಕೆಗೆ ಏಜೆಂಟ್ ರ ನೇಮಕ ಸೇರಿದಂತೆ ವಿವಿಧ ಪ್ರಕ್ರಿಯೆಗಳಲ್ಲಿ ತಲ್ಲೀನರಾಗಿದ್ದಾರೆ. ಬೆಳಗ್ಗೆಯಿಂದಲೇ ಸೋಲು- ಗೆಲುವಿನ ಲೆಕ್ಕಾಚಾರ ನಡೆಸುತ್ತಿದ್ದಾರೆ.

ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ?

ಈಗ ಬಾಕಿ ಉಳಿದಿರುವ ಮೂರೂವರೆ ವರ್ಷದ ಶಾಸಕಗಿರಿಯನ್ನು ಯಾರು ಅನುಭವಿಸಲಿದ್ದಾರೆ ಎನ್ನುವುದಕ್ಕೆ ಶನಿವಾರ ಮಧ್ಯಾಹ್ನ 1 ಗಂಟೆ ವೇಳೆಗೆಲ್ಲ ಸ್ಪಷ್ಟ ಉತ್ತರ ಸಿಗಲಿದೆ. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಗೆಲುವಿಗಾಗಿ ಕಂಡ ಕಂಡ ದೇವರಲ್ಲಿ ಹರಕೆ, ಹೋಮ- ಹವನಗಳ ಮೊರೆ ಹೋಗಿದ್ದಾರೆ. ಕೆಲವು ಅಭ್ಯರ್ಥಿಗಳ ಕುಟುಂಬದವರು ಮತ್ತು ಅವರ ಅನುಯಾಯಿಗಳು ಈಗಾಗಲೇ ಕೆಲವು ಪುಣ್ಯ ಕ್ಷೇತ್ರಗಳಿಗೆ ತೆರಳಿ ತಮ್ಮವರ ಗೆಲುವಿಗಾಗಿ ಉರುಳುಸೇವೆಯನ್ನೂ ಆರಂಭಿಸಿದ್ದಾರೆಂದು ಹೇಳಲಾಗುತ್ತಿದೆ.

ಅಭ್ಯರ್ಥಿಗಳ ಪ್ರಬಲ ಪೈಪೋಟಿ:

ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ನಡುವೆ ಪ್ರಬಲ ಸ್ಪರ್ಧೆ ನಡೆದಿದೆ.

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು, ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಅಷ್ಟೇ ಅಲ್ಲದೇ ಮತದಾರರಿಗೂ ಚುನಾವಣೆ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಅವರೂ ಫಲಿತಾಂಶವನ್ನು ಎದುರು ನೊಡುತ್ತಿದ್ದಾರೆ.

ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿ ಉಪಚುನಾವಣೆ ಫಲಿತಾಂಶ ವಿಷಯ ಬಿಟ್ಟರೆ ಬೇರೆ ಯಾವುದೇ ವಿಷಯಗಳು ಚರ್ಚೆಗೆ ಬರುತ್ತಿಲ್ಲ. ಎಲ್ಲಿ ನೋಡಿದಲ್ಲಿ ಚುನಾವಣೆ ಫಲಿತಾಂಶ, ಸೋಲು- ಗೆಲುವಿನ ಲೆಕ್ಕಾಚಾರದಲ್ಲಿಯೇ ಜನರು ಮಗ್ನರಾಗಿದ್ದಾರೆ.

ಈ ಮಧ್ಯೆ ಬೆಟ್ಟಿಂಗ್ ಜೋರಾಗಿದ್ದು, ಬಾಜಿ ಕಟ್ಟಿದವರ ಎದೆಯಲ್ಲೂ ನಡುಕ ಶುರುವಾಗಿದೆ. ಎಲ್ಲರ ಚಿತ್ತ ಶನಿವಾರ ನಡೆಯಲಿರುವ ಫಲಿತಾಂಶದ ಮೇಲೆಯೇ ಕೇಂದ್ರಿಕೃತವಾಗಿದೆ.