ನವೆಂಬರ್‌ 26ಕ್ಕೆ ಹನೂರಿನ ಬೈದೂರು ಚೆಕ್‌ಪೋಸ್ಟ್ ಬಳಿ ರೈತರ ಧರಣಿ

| Published : Nov 22 2024, 01:19 AM IST

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.26 ರಂದು ಬೈದೂರು ಚೆಕ್‌ಪೋಸ್ಟ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ತಿಳಿಸಿದರು. ಹನೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರೈತ ಸಂಘ ಹಸಿರು ಸೇನೆಯ ಚಂಗಡಿ ಕರಿಯಪ್ಪ ಮಾಹಿತಿ । ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಕನ್ನಡಪ್ರಭ ವಾರ್ತೆ ಹನೂರು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.26 ರಂದು ಬೈದೂರು ಚೆಕ್‌ಪೋಸ್ಟ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಂಚಿನ ಗ್ರಾಮಗಳ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದೇ ಇರುವುದರಿಂದ ತಾಲೂಕಿನ ಲೋಕ್ಕನಹಳ್ಳಿ ಹೋಬಳಿಯ ಬೈಲೂರು ಚೆಕ್‌ಪೋಸ್ಟ್ ಬಳಿ ನ.26ರಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಘಟಕದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬೇಡಿಕೆಗಳು ಈಡೇರಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಲು ಒತ್ತಾಯಿಸಲಾಗುತ್ತಿದೆ. ಅರಣ್ಯದಂಚಿನ ಗ್ರಾಮಗಳ ರೈತರ ಜಮೀನುಗಳಲ್ಲಿ ಕಾಡುಪ್ರಾಣಿಗಳು ಬೆಳೆಯನ್ನು ತಿಂದು ನಾಶಪಡಿಸುತ್ತಿವೆ. ಜತೆಗೆ ಆತಂಕದಲ್ಲೇ ಗ್ರಾಮಸ್ಥರು ಓಡಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ವಿದ್ಯುತ್ ಕಣ್ಣಾ ಮುಚ್ಚಲೆ ಆಟ ಆಡುತ್ತಿದ್ದು, ಅರಣ್ಯದಂಚಿನ ಗ್ರಾಮಗಳಿಗೆ ರೈತರಿಗೆ ಹಗಲಿನಲ್ಲಿ ವಿದ್ಯುತ್ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಸಹ ಸಭೆಯಲ್ಲಿ ತಿಳಿಸಿದ್ದು, ನಿಯಮವನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದ ಹಾಗೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಿದ್ದಾರೆ ಎಂದು ದೂರಿದರು.

ಕರ್ನಾಟಕ ರಾಜ್ಯ ಸಾರಿಗೆ ವಾಹನಗಳು ಸಹ ಸಿಗದೇ ಸಾರ್ವಜನಿಕರು ಮುಖ್ಯವಾಗಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸಹ ನಿಗದಿತ ಸಮಯಕ್ಕೆ ಕಾಲೇಜಿಗೆ ತೆರಳಲು ಪರದಾಡುತ್ತಿದ್ದು, ಸಂಜೆ ವೇಳೆ ಸಹ ಬಸ್ಸಿನ ಕೊರತೆಯಿಂದ ಮಕ್ಕಳು ತಡವಾಗಿ ಬರುತ್ತಿದ್ದು ಅರಣ್ಯದಂಚಿನಲ್ಲಿ ಇರುವುದರಿಂದ ಈ ಭಾಗದ ಹೆಚ್ಚುವರಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಪ್ರತಿಭಟನೆಯ ವೇಳೆ ಒತ್ತಾಯಿಸಲಾಗುವುದು ಎಂದರು.

ಕಂದಾಯ ಇಲಾಖೆ ಅಧಿಕಾರಿಗಳು ಸಹ ಈ ಭಾಗದಲ್ಲಿ ರೈತರಿಗೆ ಸ್ಪಂದಿಸದೇ ಇರುವುದರಿಂದ ಪ್ರತಿಭಟನೆ ವೇಳೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಅಧಿಕಾರಿಗಳು ಜಿಲ್ಲಾಮಟ್ಟದಿಂದ ಬರಬೇಕು. ಜತೆಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹ ಗ್ರಾಮಗಳ ಜನತೆಯ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಮನವಿ: ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಘಟಕದ ವತಿಯಿಂದ ಮತ್ತು ಜಿಲ್ಲೆ ತಾಲೂಕುಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತಾಪಿ ವರ್ಗದ ಅಸಂಖ್ಯಾತ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ರೈತ ಮುಖಂಡರು ಭಾಗವಹಿಸಬೇಕು ಎಂದು ತಿಳಿಸಿದರು.

ರೈತ ಮುಖಂಡರಾದ ಮಾದಪ್ಪ, ರಾಜು, ಬಸವಣ್ಣ, ಇತರರು ಹಾಜರಿದ್ದರು.