ಸಾರಾಂಶ
ಗಡಿ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಇನ್ನೂ 10ಸಾವಿರ ಎಕರೆ ರೈತರ ಜಮೀನುಗಳಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ಹೇಳಿದರು.
ಪಾವಗಡ : ಗಡಿ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಇನ್ನೂ 10ಸಾವಿರ ಎಕರೆ ರೈತರ ಜಮೀನುಗಳಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ಹೇಳಿದರು.
ಕೃಷಿ ಕಾರ್ಮಿಕರ ಜ್ವಲಂತ ಸಮಸ್ಯೆಯ ಹಿನ್ನಲೆಯಲ್ಲಿ ಗುರುವಾರ ತಾಲೂಕಿನ ನಾಗಲಮಡಿಕೆ ಹೋಬಳಿಗೆ ಭೇಟಿ ನೀಡಿದ್ದ ಶಾಸಕ ಎಚ್.ವಿ.ವೆಂಕಟೇಶ್ ಆ ಭಾಗದ ರೈತರ ಜತೆ ಚರ್ಚಿಸಿದ ಬಳಿಕ ತಾಲೂಕಿನ ತಿರುಮಣಿ ಸೌರಶಕ್ತಿ ವಿದ್ಯುತ್ ನಿಗಮದ ಕಚೇರಿಗೆ ಭೇಟಿ ನೀಡಿ ಸೋಲಾರ್ ಪಾರ್ಕ್ ಸೋಲಾರ್ ಅಭಿವೃದ್ದಿ ಪ್ರಾಧಿಕಾರ ಶಾಖೆಯ ಇಲ್ಲಿನ ಕಾರ್ಯಪಾಲಕ ಅಭಿಯಂತರ ಪ್ರಕಾಶ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶ್ ಜತೆ ಸೋಲಾರ್ ವಿಸ್ತರಣೆಯ ಕುರಿತು ಮಾಹಿತಿ ಪಡೆದರು.
ಈ ವೇಳೆ ಸುದ್ದಿಗಾರರ ಜತೆ ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ ತಾಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿ, ವಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಶಕ್ಕೆ ಪಡೆದಿದ್ದ 13ಸಾವಿರ ಎಕರೆ ರೈತರ ಜಮೀನುಗಳಲ್ಲಿ 2.500ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸೌರಶಕ್ತಿ ಘಟಕಗಳು ಕಾರ್ಯಾರಂಭದಲ್ಲಿವೆ. ಇನ್ನೂ 2ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಕೈಗೊಳ್ಳುವ ಹಿನ್ನಲೆಯಲ್ಲಿ ಈ ಭಾಗದ ರಾಪ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ವಾರ್ಷಿಕ ಇಂತಿಷ್ಟು ಹಣ ಪಾವತಿಯೊಂದಿಗೆ ಗುತ್ತಿಗೆ ಆಧಾರದ ಮೇಲೆ ರೈತರ ಜಮೀನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಜತೆಗೆ,ಗಡಿ ಭಾಗದ ರೈತರ ಸಮಸ್ಯೆ ಪರಿಗಣಿಸಿ ಅವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಯ 10ಸಾವಿರ ರೈತರ ಜಮೀನುಗಳಲ್ಲಿ ಸೌರಶಕ್ತಿ ಘಟಕಗಳ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸರ್ಕಾರದಿಂದ ಅನುಮತಿ ಆದೇಶ ಜಾರಿಯಾದ ಕೂಡಲೇ ಸಾಧಕ ಬಾಧಕಗಳ ರೈತರ ಜತೆ ಜಮೀನು ವಶಕ್ಕೆ ಪಡೆಯುವ ಪ್ರಕ್ರಿಯೆ ಕೈಗೊಳ್ಳಲಿದ್ದೇವೆ ಎಂದರು.
ಮಳೆಯ ಅಭಾವದಿಂದ ಪ್ರತಿ ವರ್ಷ ಬೆಳೆನಷ್ಟದಿಂದ ತಾಲೂಕಿನ ರೈತರು ಹೆಚ್ಚು ಸಂಕಷ್ಟಕ್ಕಿಡಾಗಿದ್ದಾರೆ. ತಾಲೂಕಿನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣದಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ.ವಿದ್ಯಾವಂತ ನಿರುದ್ಯೋಗ ಯುವಕರು ಹಾಗೂ ಕೃಷಿ ಕಾರ್ಮಿಕರ ಜೀವನೋಪಾಯ ಕಲ್ಪಿಸುವ ಹಿನ್ನಲೆಯಲ್ಲಿ ಸೌರಶಕ್ತಿ ಘಟಕಗಳಲ್ಲಿ ಕೆಲಸ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆದಿರುವುದಾಗಿ ಅವರು ಹೇಳಿದರು. ಈ ವೇಳೆ ಸ್ಥಳೀಯ ಮುಖಂಡರು ಹಾಗೂ ರೈತರು ಮತ್ತು ಸೋಲಾರ್ ಅಭಿವೃದ್ದಿ ನಿಗಮ ತಿರುಮಣಿ ಕೇಂದ್ರದ ಅಧಿಕಾರಿಗಳು ಇದ್ದರು.