ಸಾರಾಂಶ
ಹುಬ್ಬಳ್ಳಿ:
ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿದಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಇಲ್ಲಿನ ರುದ್ರಾಕ್ಷಿ ಮಠದಲ್ಲಿ ಗುರುವಾರ ಶ್ರೀನಿಜಗುಣ ಶಿವಯೋಗಿಗಳ 76ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಠಾಧೀಶರು, ಪೂಜ್ಯರ ಮತ್ತು ಸಾಧು-ಸತ್ಪುರುಷರು ಈಗಲೂ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಆದರೂ ಎಲ್ಲ ಸಮಾಜಗಳು ಕವಲು ದಾರಿಯಲ್ಲಿ ಸಾಗುತ್ತಿವೆ. ಅಶಾಂತಿ, ಅತೃಪ್ತಿ, ಅಧೈರ್ಯ, ಭಯ ಹೆಚ್ಚಾಗಿದೆ. ಮತ್ತೊಬ್ಬರ ಏಳ್ಗೆ, ಸಂತೋಷವನ್ನು ಸಹಿಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿ ಎಂದರು.ಬ್ರಿಟಿಷರು ನಮ್ಮ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವ ಜತೆಗೆ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳ ಮೇಲೂ ಹಿಡಿತ ಸಾಧಿಸಲು ಸಾಕಷ್ಟು ಪ್ರಯತ್ನಿಸಿದರು. ಅದರ ಮಧ್ಯೆ ಮಠಗಳು ಉಚಿತವಾಗಿ ಅನ್ನ, ಅಕ್ಷರ ದಾಸೋಹ ಮಾಡುವ ಮೂಲಕ ಸಂಸ್ಕೃತಿ, ಪರಂಪರೆಯ ಉಳಿವಿಗೆ ಕಾರಣವಾಗಿವೆ. ಅದರ ಪರಿಣಾಮವಾಗಿ ಜಗತ್ತಿನ ಮೂಲೆ, ಮೂಲೆಯಲ್ಲಿ ಭಾರತೀಯರು ವಿಶಿಷ್ಠ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಎಸ್‌ವೈಯಿಂದ ಮಠಗಳ ಸುಧಾರಣೆ:ಆಶೀರ್ವಚನ ನೀಡಿದ ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ತಂದೆಯಂತೆಯೇ ಬಿ.ವೈ. ವಿಜಯೇಂದ್ರ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರಾದ ಒಂದೇ ವರ್ಷದಲ್ಲಿ ಇಡೀ ನಾಡನ್ನು ಸುತ್ತಾಡಿ ಜನರ ನಾಡಿಮಿಡಿತ ಅರಿತಿದ್ದಾರೆ. ಜನರ ಬೇಕು-ಬೇಡಗಳಿಗೆ ಸ್ಪಂದಿಸುವ ಮೂಲಕ ರಾಜಕೀಯದಲ್ಲಿ ಉತ್ತರೋತ್ತರವಾಗಿ ಬೆಳೆಯುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮಠಗಳಿಗೆ ನೀಡಿದ್ದ ವಿಶೇಷ ಅನುದಾನಗಳಿಂದಲೇ ಮಠಗಳು ಸುಧಾರಣೆ ಕಂಡಿವೆ. ದೇಶ, ಸಮಾಜ ನನಗೇನು ಕೊಟ್ಟಿದೆ ಎನ್ನುವ ಬದಲು ನಾವೇನು ಕೊಡುಗೆ ನೀಡಿದ್ದೇವೆ ಎಂಬ ಭಾವದಿಂದ ಸಾಧನೆ ಮಾಡಬೇಕು ಎಂದರು.
ಮಲ್ಲಿಕಾರ್ಜುನ ಸಾಹುಕಾರ ಮಾತನಾಡಿದರು. ಇದೇ ವೇಳೆ ವೈದ್ಯರಾದ ಡಾ. ಪಿ.ಎನ್. ಬಿರಾದಾರ, ಡಾ. ಅನಿತಾ ಹಳಕಟ್ಟಿ, ಡಾ. ಲಕ್ಷ್ಮೀ ಪಾಟೀಲ, ಡಾ. ಸವಿತಾ ಸಜ್ಜನ, ಡಾ. ವಿಶಾಲಕುಮಾರ, ಡಾ. ಎಸ್.ಎ. ಪಾಟೀಲ, ಡಾ. ರಾಜಶ್ರೀ ಸೂಜಿ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿಯ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.ಕಾರಂಜಿ ಮಠದ ಶ್ರೀಶಿವಯೋಗಿ ದೇವರು, ದೋಟಿಹಾಳದ ಚಂದ್ರಶೇಖರ ದೇವರು, ಸದಾನಂದ ಶಿವಾಚಾರ್ಯರು, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ವಿಶ್ವನಾಥ ಅಮರಶೆಟ್ಟಿ, ಸವಿತಾ ಅಮರಶೆಟ್ಟಿ, ವಿರೂಪಾಕ್ಷ ಯಮಕನಮರಡಿ, ಡಾ. ಮಹೇಶ ನಾಲವಾಡ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಬಸವರಾಜ ಕುಂದಗೋಳಮಠ, ಮಹಾಂತೇಶ ಗಿರಿಮಠ ಹಾಗೂ ಪ್ರಭು ಹುಕ್ಕೇರಿಮಠ ಸೇರಿದಂತೆ ಹಲವರಿದ್ದರು.