ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕು ಹುಂಜನಕೆರೆ ದೇಗುಲದ ಗೇಟ್ ಬಿದ್ದು ಮಗುವೊಂದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದವರಿಗೆ ಸಾಂತ್ವನ ಹೇಳುವ, ಬಡ ಕುಟುಂಬಕ್ಕೆ ನೆರವಾಗುವ ಕನಿಷ್ಠ ಕಾಳಜಿಯನ್ನೂ ತೋರ್ಪಡಿಸದ ಕ್ಷೇತ್ರದ ಶಾಸಕರು ಮತ್ತು ತಾಲೂಕು ಆಡಳಿತಕ್ಕೆ ಮಾನವೀಯತೆಯೇ ಇಲ್ಲ ಎಂದು ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಟೀಕಿಸಿದರು.ಜಿಲ್ಲಾ ಪತ್ರಕರ್ತರ ಸಂಘಕ್ಕೆ ಆಗಮಿಸಿದ ಎಸ್.ಸಚ್ಚಿದಾನಂದ ಮಗು ಕಳೆದುಕೊಂಡ ಕುಟುಂಬದವರಿಗೆ ೨೫ ಸಾವಿರ ರು. ನೆರವು ನೀಡಿ ಮತ್ತೊಂದು ಮಗುವಿನ ಹೆಸರಿನಲ್ಲಿ ೨ ಲಕ್ಷ ರು. ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವುದಾಗಿ ತಿಳಿಸಿ ಉದಾರತೆ ಮೆರೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ದರಿದ್ರ ಹಾಗೂ ಲಜ್ಜೆಗೆಟ್ಟ ಸರ್ಕಾರ. ಶಾಸಕರು- ಅಧಿಕಾರಿಗಳಿಗೂ ಜನರ ಬಗ್ಗೆ ಕಾಳಜಿ ಇಲ್ಲ. ಹುಂಜನಕೆರೆ ದೇವಸ್ಥಾನದ ಗೇಟ್ ಶಿಥಿಲಗೊಂಡಿದ್ದರೂ ಸರಿಪಡಿಸದೆ ಮುಜರಾಯಿ ಇಲಾಖೆ ತೋರಿಸಿದ ಬೇಜವಾಬ್ದಾರಿತನಕ್ಕೆ ಐದೂವರೆ ವರ್ಷದ ಎಚ್.ಎಸ್.ಜಿಷ್ಣು ಎಂಬ ಮಗು ಬಲಿಯಾಗಿದೆ ಎಂದರು.ಮಗು ಸಾವನ್ನಪ್ಪಿ ಹತ್ತು ದಿನಗಳಾದರೂ ಕ್ಷೇತ್ರದ ಶಾಸಕರು ಮತ್ತು ತಾಲೂಕು ಆಡಳಿತ ಮಗುವಿನ ಕುಟುಂಬದವರಿಗೆ ಕನಿಷ್ಠ ಮಟ್ಟದ ಸಾಂತ್ವನ ಹೇಳದಿರುವುದು ಇವರದೆಂಥಾ ಕಲ್ಲು ಹೃದಯ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ. ಮುಜರಾಯಿ ಇಲಾಖೆಯಿಂದ ಸಂಗ್ರಹವಾಗುವ ಹಣವನ್ನು ಮತ್ತೊಂದು ಕೋಮಿನವರಿಗೆ ನೀಡುತ್ತಾ ಓಲೈಕೆ ಮಾಡಿಕೊಳ್ಳುತ್ತಿರುವ ಈ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮಗು ಕಳೆದುಕೊಂಡ ಕುಟುಂಬದವರ ನೋವು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಗುಲದ ಗೇಟ್ ಬಿದ್ದು ಮಗು ಸಾವನ್ನಪ್ಪಿದ ದುರಂತದ ಪ್ರಕರಣವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಗಮನಕ್ಕೂ ತರುತ್ತೇನೆ. ಸಾಧ್ಯವಾದರೆ ಪಕ್ಷದ ವತಿಯಿಂದಲೂ ಮಗುವಿನ ಕುಟುಂಬದವರಿಗೆ ಆರ್ಥಿಕ ನೆರವು ದೊರಕಿಸುವ ಭರವಸೆ ನೀಡಿದರು. ಕ್ಷೇತ್ರದ ಶಾಸಕರಿಗೆ ಅಹಂನಿಂದ ಮೆರೆಯುತ್ತಿದ್ದಾರೆ. ಅವರಿಗೆ ಜನಪರ ಕಾಳಜಿ ಎಂಬುದೇ ಇಲ್ಲ. ಆದರೆ, ನಾವು ಮಗುವಿನ ಕುಟುಂಬದವರ ಜೊತೆಗಿರುತ್ತೇವೆ ಎಂದು ಭರವಸೆ ನೀಡಿದರು.ತಾಲೂಕು ಆಡಳಿತ ಇದುವರೆಗೂ ಮಗುವಿನ ಕುಟುಂಬದವರ ನೋವಿಗೆ ಸ್ಪಂದಿಸಿಲ್ಲ. ಪ್ರಕರಣ ಸಂಬಂಧ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ಯಾರ ವಿರುದ್ಧವೂ ಕ್ರಮವನ್ನೂ ಜರುಗಿಸಿಲ್ಲವೆಂದರೆ ಏನರ್ಥ. ಮಗು ಬಲಿಯಾದ ನಂತರ ದೂರು ಕೊಡುವುದಕ್ಕೆ ಪೊಲೀಸ್ ಠಾಣೆಗೆ ತೆರಳಿದರೆ ಎಫ್‌ಐಆರ್ ಮಾಡದೆ ವಾಪಸ್ ಕಳುಹಿಸಿರುವುದು, ತಡವಾಗಿ ಎಫ್‌ಐಆರ್ ಮಾಡಿರುವ ಬಗ್ಗೆಯೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಲಿಯಾದ ಮಗುವಿನ ತಂದೆ ಎಚ್.ಎಸ್.ಸಿದ್ದರಾಜು ಮಾತನಾಡಿ, ನಾವು ತುಂಬಾ ಬಡವರು. ಮಗುವನ್ನು ಕಳೆದುಕೊಂಡು ಬಹಳ ನೊಂದಿದ್ದೇವೆ. ನಮಗೆ ಇದುವರೆಗೂ ಯಾರೊಬ್ಬರೂ ಮನೆ ಬಳಿಗೆ ಬಂದು ಸಾಂತ್ವನ ಹೇಳಿಲ್ಲ, ನಮ್ಮ ನೋವಿಗೂ ಸ್ಪಂದಿಸಿಲ್ಲ. ನಮ್ಮ ಮಗುವಿಗೆ ಆದ ಗತಿ ಬೇರೆ ಮಗುವಿಗೆ ಆಗಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮುಂದೆ ಈ ರೀತಿಯ ಅನಾಹುತಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಪಡಿಸಿದರು.ಗೋಷ್ಠಿಯಲ್ಲಿ ಸುಮಿತ್ರಾ. ಜೋಡಿ ಸಿದ್ದಯ್ಯ ಇತರರಿದ್ದರು.