ಚನ್ನರಾಯಪಟ್ಟಣದಲ್ಲಿ ಬಿಸಿಲ ಬೇಗೆ ತಣಿಸಿದ ಮಳೆರಾಯ

| Published : May 19 2024, 01:45 AM IST

ಸಾರಾಂಶ

ನೂರಾರು ವರ್ಷಗಳ ಇತಿಹಾಸವಿರುವ ಮಳೆ ಮಲ್ಲೇಶ್ವರನಿಗೆ ಪ್ರಾರ್ಥನೆ ಮಾಡಿ ಹರಕೆ ಕಟ್ಟಿಕೊಳ್ಳುವ ಮೂಲಕ ಭಗವಂತನ ಮೊರೆ ಹೋಗಿದ್ದರು. ಶನಿವಾರ ಮಳೆಯಾಗಿದ್ದು ಧರೆ ಕೊಂಚ ತಂಪಾಗಿದೆ.

ಫಲಿಸಿದ ಮಳೆ ಮಲ್ಲೇಶ್ವರನಿಗೆ ಸಲ್ಲಿಸಿದ್ದ ಪ್ರಾರ್ಥನೆ । ದೇಗುಲಗಕ್ಕೆ ಶಾಸಕರಿಂದ ಹರಕೆ ಪೂಜೆ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪ್ರತಿನಿತ್ಯ ಬಾನಿನ ಕಡೆ ಮುಖ ಮಾಡಿ ನಿಲ್ಲುತ್ತಿದ್ದ ಜನರು, ಬಿಸಿಲ ಬೇಗೆಗೆ ಹೈರಾಣಾಗಿದ್ದ ಮಂದಿಗೆ ಮಳೆರಾಯ ಕೊಂಚ ತಂಪೆರದಿದ್ದಾನೆ.

ವರ್ಷಪೂರವೂ ಕ್ಷೇತ್ರದಲ್ಲೇ ವಾಸ್ತವ್ಯವಿರುವ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೂ ಮಳೆಯ ಚಿಂತೆಯಾಗಿತ್ತು. ಕ್ಷೇತ್ರದ ಜನರು ಬಿಸಿಲ ಬೇಗೆಯಲ್ಲಿ ಹೈರಾಣಾಗಿದ್ದನ್ನು ಕಂಡು ಬರ ವಿಮೋಚನೆಯಾಗಿ ಮಳೆ ಬೆಳೆಗಳಿಂದ ಕ್ಷೇತ್ರದ ಜನ ಸಮೃದ್ಧಿ ಹೊಂದಲೆಂದು ನೂರಾರು ವರ್ಷಗಳ ಇತಿಹಾಸವಿರುವ ಮಳೆ ಮಲ್ಲೇಶ್ವರನಿಗೆ ಪ್ರಾರ್ಥನೆ ಮಾಡಿ ಹರಕೆ ಕಟ್ಟಿಕೊಳ್ಳುವ ಮೂಲಕ ಭಗವಂತನ ಮೊರೆ ಹೋಗಿದ್ದರು. ಶನಿವಾರ ಮಳೆಯಾಗಿದ್ದು ಧರೆ ಕೊಂಚ ತಂಪಾಗಿದೆ.

ಈ ಸಂದರ್ಭದಲ್ಲಿ ನುಗ್ಗೇಹಳ್ಳಿ ಬಳಿಯಿರುವ ಮಳೆ ಮಲ್ಲೇಶ್ವರ ಸ್ವಾಮಿ ದೇಗುಲಕ್ಕೆ ಮುಖಂಡರೊಂದಿಗೆ ಭೇಟಿ ನೀಡಿ ಶಾಸಕ ಸಿ.ಎನ್. ಬಾಲಕೃಷ್ಣ ಹರಕೆ ಪೂಜೆ ಸಲ್ಲಿಸಿದ್ದಾರೆ. ನಂತರ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಸುಸಜ್ಜಿತವಾದ ರಸ್ತೆ ಸಂಪರ್ಕ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯ ಕಡೆ ಗಮನ ಹರಿಸಲಾಗುವುದು. ಸ್ವಾಮಿಯ ಕೃಪೆಯಿಂದ ಇನ್ನೂ ಹೆಚ್ಚಿನ ಮಳೆಯಾಗಿ ಜನರು ಸುಭೀಕ್ಷವಾಗಿರಲೆಂದು ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

ಮುಖಂಡರಾದ ತೋಟಿ ನಾಗಣ್ಣ, ನುಗ್ಗೇಹಳ್ಳಿ ದೊರೆಸ್ವಾಮಿ ಹಾಗೂ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು. 2 ಗಂಟೆ ನಿರಂತರ ಸುರಿದ ಮಳೆನುಗ್ಗೇಹಳ್ಳಿ: ಇಲ್ಲಿಯ ಬಾಗೂರು ವ್ಯಾಪ್ತಿಯಲ್ಲಿ 2 ಗಂಟೆಗಳ ಕಾಲ ಶುಕ್ರವಾರ ಸಂಜೆ ಭಾರಿ ಮಳೆಯಾಗಿದೆ. ಕಳೆದ ವರ್ಷದ ತೀವ್ರ ಬರಗಾಲದಿಂದ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ರೈತರು ತೆಂಗು, ಅಡಿಕೆ, ಶುಂಠಿ, ಕಬ್ಬು, ಬಾಳೆ ಬೆಳೆ ಉಳಿಸಿಕೊಳ್ಳಲು ರೈತರು 800 ಅಡಿಗಳ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆಸಿ ನೀರು ಬರದೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ಪರದಾಡುತ್ತಿದ್ದರು. ಕೆಲವು ಗ್ರಾಮ ಪಂಚಾಯಿತಿ ಹಳ್ಳಿಗಳಿಗೆ ಕುಡಿಯುವ ನೀರನ್ನು ಸಹ ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್‌ಗಳಲ್ಲಿ ನೀರು ಒದಗಿಸಲಾಗುತ್ತಿತ್ತು. ಇಂದು ಸುರಿದ ಧಾರಾಕಾರ ಮಳೆಗೆ ರೈತರ ಮುಖದಲ್ಲಿ ಹರ್ಷ ಮೂಡಿದೆ.