ಕನ್ನಡಪ್ರಭ ವಾರ್ತೆ ಸಿಂದಗಿ

ಶ್ರೀ ಚನ್ನವೀರ ಮಹಾಸ್ವಾಮಿಗಳು ಧಾರ್ಮಿಕ ಕ್ಷೇತ್ರದ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ ಯುಗಪುರುಷರಾಗಿದ್ದರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಸಾರಂಗಮಠದಲ್ಲಿ ಶ್ರೀ ಚನ್ನವೀರ ಮಹಾಸ್ವಾಮಿಗಳ 35ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಮಾಜದ ಬಡ, ಹಿಂದುಳಿದ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು ಎಂಬ ಮಹದಾಸೆಯಿಂದ ಪೂಜ್ಯರು ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಹಾಗೂ ತಾ.ಶಿ.ಪ್ರ ಮಂಡಳಿಯನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ ಮೂಡಿಸಿದರು. ಶಿಕ್ಷಣವೆಂಬುದು ಸಮಾಜ ಪರಿವರ್ತನೆಯ ಶಕ್ತಿ ಎಂಬುದನ್ನು ಮನಗಂಡಿದ್ದ ಚನ್ನವೀರ ಮಹಾಸ್ವಾಮಿಗಳು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ದಾರಿಯನ್ನು ತೋರಿದರು. ಅವರ ದೂರದೃಷ್ಟಿ ಹಾಗೂ ಸಮಾಜಮುಖಿ ಚಿಂತನೆಯಿಂದ ಅನೇಕ ಕುಟುಂಬಗಳ ಬದುಕು ಬೆಳಗಿದ್ದು, ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಅವರು ಮಾಡಿದ್ದಾರೆ ಎಂದು ಸ್ಮರಿಸಿದರು.

ಚನ್ನವೀರ ಮಹಾಸ್ವಾಮಿಗಳು ಜೀವನದುದ್ದದ್ದಕ್ಕೂ ಸರಳತೆ, ಸೇವಾಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಅವರು ಲಿಂಗೈಕರಾಗಿ 35 ವರ್ಷಗಳು ಕಳೆದಿದ್ದರೂ ಅವರ ತತ್ವಗಳು, ಆದರ್ಶಗಳು ಹಾಗೂ ಸೇವಾ ಮನೋಭಾವ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಯುವಪೀಳಿಗೆಯೂ ಪೂಜ್ಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣ ಮತ್ತು ಸಂಸ್ಕಾರದ ದಾರಿಯಲ್ಲಿ ಸಾಗಬೇಕು ಎಂದರು.

ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುಶಿವಾಚಾರ್ಯರು ಮಾತನಾಡಿ, ಚನ್ನವೀರ ಮಹಾಸ್ವಾಮಿಗಳ ಸೇವೆ ಕೇವಲ ಒಂದು ಮಠಕ್ಕೆ ಸೀಮಿತವಾಗಿರಲಿಲ್ಲ. ಅವರು ಶಿಕ್ಷಣ, ಧರ್ಮ ಹಾಗೂ ಸಮಾಜ ಸೇವೆಯ ಮೂಲಕ ನಾಡಿನ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಸಮರ್ಪಿಸಿದ್ದರು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಮತ್ತು ದೇಶಭಕ್ತಿ ಬೆಳೆಸುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಪೂಜ್ಯರು ಇಂದಿನ ಶಿಕ್ಷಣ ಕ್ಷೇತ್ರಕ್ಕೂ ಆದರ್ಶಪ್ರಾಯರಾಗಿದ್ದಾರೆ. ಧಾರ್ಮಿಕ ಸೇವೆಯೊಂದಿಗೆ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಅವರು ನೀಡಿದ ಮಾರ್ಗದರ್ಶನ ಸದಾ ಪ್ರೇರಣೆಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.


ಮಾಡಬಾಳ ಆಯುಷ್ ಸಮುದಾಯದ ಆರೋಗ್ಯಾಧಿಕಾರಿ ಚಂದ್ರಕಾಂತ ಬಿರಾದಾರ ಕಾಯಕಯೋಗಿ ಶ್ರೀ ಚನ್ನವೀರ ಮಹಾಸ್ವಾಮಿಗಳವರ ಕುರಿತು ಉಪನ್ಯಾಸ ನೀಡಿದರು. ಶಾಸಕ ಅಶೋಕ ಮನಗೂಳಿ ಹಾಗೂ ಪತ್ನಿ ನಾಗರತ್ನ ಮನಗೂಳಿ ಅವರನ್ನು ಸನ್ಮಾನಿಸಿ ಗೌರವಿಸಲಲಾಯಿತು. ಶ್ರೀಮಠದ ಪ್ರಸಾದನಿಲಯದ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಅಶೋಕ ವಾರದ, ಎಂ.ಎಸ್.ಹೈಯಾಳಕರ್, ವೀರೇಶ ಜೋಗೂರ, ಡಾ.ಶರಣು ಜೋಗೂರ, ಬಿ.ಎಂ.ಸಿಂಗನಳ್ಳಿ, ವ್ಹಿ.ಪಿ.ನಂದಿಕೋಲ, ಪಿ.ವ್ಹಿ.ಮಹಲಿನಮಠ, ಎಸ್.ವೈ.ಯರಲಡ್ಡಿ, ಶರಣಗೌಡ ಪಾಟೀಲ, ಎನ್.ಬಿ.ಪೂಜಾರಿ, ಡಿ.ಎಂ.ಸರಶೆಟ್ಟಿ, ಜಿ.ಎಸ್.ಜಂಗಿನಮಠ, ಸೋಮಶೇಖರ ಜೋಗೂರ, ದೃವ ನಾಗರಾಜ ಬಿರಾದಾರ, ಶಕುಂತಲಾ ಹಿರೇಮಠ, ಸಾಹೇಬಗೌಡ ದುದ್ದಗಿ, ನಾಗರಾಜ ಮುರಗೋಡ, ಶ್ರೀಶೈಲ ನಂದಿಕೋಲ, ಶ್ರೀದೇವಿ ಸಿಂದಗಿ ಸೇರಿದಂತೆ ಸಂಸ್ಕಾರ ಶಿಬಿರದ ವಿದ್ಯಾರ್ಥಿಗಳು ಇನ್ನಿತರರು ಇದ್ದರು.