ಪಾಕ್‌ಗೆ ಜೈಕಾರ - ಬಿಜೆಪಿ, ಎಬಿವಿಬಿ ಪ್ರತಿಭಟನೆ

| Published : Feb 29 2024, 02:03 AM IST

ಸಾರಾಂಶ

''ಪಾಕಿಸ್ತಾನ ಜಿಂದಾಬಾದ್ " ಘೋಷಣೆ ಖಂಡಿಸಿ ಧಾರವಾಡದಲ್ಲಿ ಬಿಜೆಪಿ ಯುವ ಮೋರ್ಚಾ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪದಾಧಿಕಾರಿಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ನಂತರ ವಿಜೇತ ಅಭ್ಯರ್ಥಿ ನಾಸೀರ್ ಹುಸೇನ ಪರ ಬೆಂಬಲಿಗರು ''''ಪಾಕಿಸ್ತಾನ ಜಿಂದಾಬಾದ್ " ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಧಾರವಾಡದಲ್ಲಿ ಬಿಜೆಪಿ ಯುವ ಮೋರ್ಚಾ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪದಾಧಿಕಾರಿಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಉಂಡ ಮನೆಗೆ ದ್ರೋಹ ಮಾಡುವ ಬುದ್ಧಿಯುಳ್ಳವರು. ಇಲ್ಲಿಯ ನೀರು ಕುಡಿದು, ಅನ್ನ ಉಂಡು ಪಾಕಿಸ್ತಾನ ಪರವಾಗಿ ಘೋಷಣೆ ಕೂಗುವುದು ದೇಶದ್ರೋಹದ ಕಾರ್ಯವಲ್ಲದೇ ಮತ್ತೇನು? ಇಂತಹ ಪುಡಾರಿಗಳ ವಿರುದ್ಧ ದೇಶ ದ್ರೋಹಿಕಾಯ್ದೆ 1948ರ ಕಲಂ 124ಎ ಅಡಿಯಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಕಾಂಗ್ರೆಸ್‌ ನಾಯಕರ ಮೇಲೂ ಕ್ರಮವಾಗಬೇಕು. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ದೇಶದ್ರೋಹಿ ಘಟನೆಗಳನ್ನು ಮರುಕಳಿಸದಂತೆ ತಡೆಯಲು ಕಾನೂನು ಕ್ರಮವಾಗಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ಈ ಘಟನೆಗೆ ಕಾರಣರಾದ ನೂತನವಾಗಿ ಆಯ್ಕೆಯಾದ ನಾಸೀರ ಹುಸೇನ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ದೇಶದ ಜನರ ಭಾವನೆಗೆ ಧಕ್ಕೆ ಬರದ ಹಾಗೆ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವಮೋರ್ಚಾ ಧಾರವಾಡ ಅಧ್ಯಕ್ಷ ಶಕ್ತಿ ಹಿರೇಮಠ, ಮಹಾನಗರ ಮಾಜಿ ಅಧ್ಯಕ್ಷ ಸಂಜಯ ಕಪಟಕರ, ಮಲ್ಲಿಕಾರ್ಜುನ ಬಾಳಿಕಾಯಿ, ಬಸವರಾಜ ಗರಗ, ವಿನಾಯಕ ಗೊಂಧಳಿ, ಮೋಹನ ರಾಮದುರ್ಗ, ಸುರೇಶ ಬೇದರೆ, ಶಂಕರ ಶೇಳಕೆ, ಸಂತೋಷ ದೇವರಡ್ಡಿ, ಶಂಕರ ಕೋಮಾರದೇಸಾಯಿ ಮತ್ತಿತರರು ಇದ್ದರು.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಕೂಡಲೇ ಪತ್ತೆ ಹಚ್ಚಿ ದೇಶದ್ರೋಹದ ಅಪರಾಧದ ಅಡಿಯಲ್ಲಿ ಶಿಕ್ಷೆ ನೀಡಬೇಕು. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರ ಗೆಲುವಿನ ಸಮಯದಲ್ಲಿ ಬೆಳಗಾವಿಯಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಸಹ ಕೂಗಲಾಗಿತ್ತು. ಇಂತಹ ಬೆಳವಣಿಗೆಗಳು ಆತಂಕಕಾರಿ. ದೇಶದ್ರೋಹಿಗಳ ಮೇಲೆ ಕ್ರಮವಾಗದೇ ಇದ್ದಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳುಹಿಸುತ್ತಿವೆ ಎಂದು ಎಚ್ಚರಿಸಲಾಯಿತು.

ವಾಗ್ವಾದ, ತಳ್ಳಾಟ

ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ವೇಳೆ ಆಕ್ರೋಶದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್‌ ನಾಯಕ ನಾಸೀರ ಹುಸೇನ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಭಾವಚಿತ್ರ ಸುಡಲು ಯತ್ನಿಸಿದರು. ಆಗ, ಉಪ ನಗರ ಠಾಣೆ ಇನ್‌ಸ್ಪೆಕ್ಟರ್‌ ಅದನ್ನು ತಡೆಯಲು ಮುಂದಾದಾಗ ಬಿಜೆಪಿ ನಾಯಕರ ಹಾಗೂ ಪೊಲೀಸರ ಮಧ್ಯೆ ವಾಗ್ವಾದ, ತಳ್ಳಾಟ ನಡೆಯಿತು. ಕೊನೆಗೂ ಬಿಜೆಪಿ ಮುಖಂಡರು ಉಪ ಮುಖ್ಯಮಂತ್ರಿಗಳ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹತ್ತಿಕ್ಕುತ್ತಿದೆ ಎಂದು ಪೊಲೀಸರ ವಿರುದ್ಧ ಬಿಜೆಪಿ ಮುಖಂಡರು ಆರೋಪ ಮಾಡಿದರು.