ಕನ್ನಡಪ್ರಭ ವಾರ್ತೆ ಬೀದರ್

ಇಲ್ಲಿನ ಐತಿಹಾಸಿಕ ಹಿನ್ನೆಲೆಯುಳ್ಳ ಬೀದರ್ ನಗರದ ಪುರಾತನ ಪಾಂಡುರಂಗ ದೇವಸ್ಥಾನದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದ ಆಷಾಢ ಸಪ್ತಾಹ ಧಾರ್ಮಿಕ ಮಹೋತ್ಸವವು ಗುರುವಾರ ಭಕ್ತಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ವಿಶೇಷ ಪೂಜೆ, ಭವ್ಯ ಪಲ್ಲಕ್ಕಿ ಉತ್ಸವ, ದಹಿ ಹಂಡಿ, ಹರಿನಾಮ ಸಂಕಿರ್ತನೆ, ವಿವಿಧ ಭಜನಾ ಮಂಡಳಿಗಳ ಭಜನೆ, ಯುವಕ-ಯುವತಿಯರ ಫುಗಡಿ ನೃತ್ಯ ಹಾಗೂ ಮಹಾಪ್ರಸಾದ ಕಾರ್ಯಕ್ರಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪಾಂಡುರಂಗನ ದರ್ಶನ ಪಡೆದರು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ವೇದಮಂತ್ರೋಚ್ಚಾರಣೆ, ಅಲಂಕಾರ ಸೇವೆ ಹಾಗೂ ಮಹಾ ಮಂಗಳಾರತಿ ನೆರವೇರಿತು. ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಹಾಗೂ ಕುಟುಂಬ ಸಮೇತ ಆಗಮಿಸಿದ ಭಕ್ತರು ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಧ್ಯಾಹ್ನ ಪಾಂಡುರಂಗನ ಉತ್ಸವ ಮೂರ್ತಿಯನ್ನು ಸುಂದರ ಹೂವಿನ ಅಲಂಕಾರದಿಂದ ಸಿಂಗರಿಸಲಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭಕ್ತರ ಗಮನ ಸೆಳೆಯಿತು.


ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಹೂವಿನ ಮಳೆಗರೆದು, ತೆಂಗಿನಕಾಯಿ ಒಡೆದು, ಆರತಿ ಬೆಳಗಿ ಹಾಗೂ ‘ವಿಠ್ಠಲ ವಿಠ್ಠಲ ಪಾಂಡುರಂಗ’, ‘ಜೈ ಜೈ ರಾಮ ಕೃಷ್ಣ ಹರಿ’ ಎಂಬ ಜಯಘೋಷಗಳೊಂದಿಗೆ ಭಕ್ತಿಭಾವದಿಂದ ಸ್ವಾಗತಿಸಿದರು. ಅನೇಕ ಕಡೆಗಳಲ್ಲಿ ಭಕ್ತರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಹಣ್ಣು, ಹೂವು ಹಾಗೂ ಪ್ರಸಾದ ಸಮರ್ಪಿಸಿದರು.

ಮೆರವಣಿಗೆಯಲ್ಲಿ ವಿವಿಧ ಭಜನಾ ಮಂಡಳಿಗಳು ಪಾಲ್ಗೊಂಡು ವಿವಿಧ ವಾದ್ಯಗಳ ನಾದಕ್ಕೆ ಭಕ್ತರು ನಾಮಸ್ಮರಣೆ ಮಾಡುತ್ತಾ ಹೆಜ್ಜೆ ಹಾಕಿದರು. ಮೆರವಣಿಗೆಯ ನೇತೃತ್ವ ರಾಮಲು ಗಾದಗಿ, ರಾಜೇಂದ್ರಸಿಂಗ್ ಪವಾರ, ಬಸವರಾಜ ಶೀಲವಂತ ಚಿಟಗುಪ್ಪಾ, ಜಗನ್ನಾಥರಾವ ಮಾನಕೇರಿ ಹಾಗೂ ರಾಜಕುಮಾರ ವಿಶ್ವಕರ್ಮ ವಹಿಸಿದ್ದರು.

ಸಂಜೆ ಶಹಾಗಂಜದ ದಾಮಾಜಿ ಪಂಥ ಅಗಸಿ ದ್ವಾರದಲ್ಲಿ ಸಂಪ್ರದಾಯಬದ್ಧವಾಗಿ ಮೊಸರಿನ ಗಡಿಗೆ (ದಹಿ ಹಂಡಿ) ಒಡೆಯುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಬಳಿಕ ವಿನಾಯಕ ಚೌಕ, ಮುಖ್ಯ ರಸ್ತೆ ಹಾಗೂ ಚೌಬಾರಾ ದೇವಸ್ಥಾನದ ಮುಖ್ಯ ದ್ವಾರದ ಎದುರು ಕೂಡ ದಹಿ ಹಂಡಿ ಕಾರ್ಯಕ್ರಮಗಳು ನೆರವೇರಿದವು. ಭಕ್ತರ ಅನುಕೂಲಕ್ಕಾಗಿ ಸರ್ಕಾರಿ ಬಾಲಕ-ಬಾಲಕಿಯರ ಶಾಲೆಯ ಮೈದಾನದಲ್ಲಿ ಮಧ್ಯಾಹ್ನ ವಿಶೇಷ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಡಿ.ವಿ.ಸಿಂಧೋಲ, ಅಶೋಕ ರೆಜಂತಲ್, ಶ್ರೀನಿವಾಸ ಪೋಲಾ, ದಿಗಂಬರ್ ಪೋಲಾ, ಸುನೀಲ ವಂಗೆಪಲ್ಲಿ, ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಗಳ ಸದಸ್ಯರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿ ದ್ದರು ಎಂದು ಪಾಂಡುರಂಗ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂದ್ರಶೇಖರ ಗಾದಾ ತಿಳಿಸಿದ್ದಾರೆ.