ಸಾರಾಂಶ
ಹೊನ್ನಾವರ: ಪಟ್ಟಣದ ಶಾರದಾಂಬಾ ದೇವಸ್ಥಾನದಲ್ಲಿ ಶಂಕರ ಭಗವದ್ಪಾತ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.
ಕರ್ಕಿ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ, ಹಳದಿಪುರದ ಶಾಂತಾಶ್ರಮ ಮಠದ ವಾಮನಾಶ್ರಮ ಶ್ರೀ ಪಾಲ್ಗೊಂಡು ಶಾರದಾಂಬಾದೇವಿಗೆ ಹಾಗೂ ಶಂಕರಾಚಾರ್ಯರ ಮೂರ್ತಿಗೆ ಪೂಜೆ ಸಲ್ಲಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಬಾಲ ಶಂಕರಾಚಾರ್ಯರ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಚಿಕ್ಕಮಕ್ಕಳು ಬಾಲಶಂಕರಾಚಾರ್ಯರ ವೇಷಭೂಷಣ ತೊಟ್ಟು ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಒಬ್ಬರಿಗಿಂತ ಒಬ್ಬರು ಆಕರ್ಷಣೆಗೆಯಾಗಿ ಎಲ್ಲರ ಗಮನ ಸೆಳೆದರು.
ವಿಜೇತರಿಗೆ ಬಹುಮಾನ ನೀಡಿ ಶ್ರೀಗಳು ಆಶಿರ್ವಾದ ಮಾಡಿದರು. ನಂತರ ನಡೆದ ಆಶೀರ್ವಚನದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ ಮಾತನಾಡಿ, ನಾವು ದಿವ್ಯತೆಯ ಸ್ವರೂಪಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಮನಸ್ಸು ದಿವ್ಯತೆಯ ಸ್ವರೂಪ ಆವರಿಸುತ್ತದೆ. ನಾವು ಒಳ್ಳೆಯದನ್ನು ಮನಸ್ಸಿನಲ್ಲಿ ತುಂಬಿಕೊಂಡರೆ, ಒಳಿತನ್ನು ನೀಡಬಹುದು. ಆದಿಶಂಕರಾಚಾರ್ಯರು ಹೇಳಿದಂತಹ ಚಿನ್ಮಯ ಮುದ್ರೆಗಳನ್ನು ದಿನಕ್ಕೆ 20 ನಿಮಿಷ ಅನುಸರಿಸಿದರೆ ಸುಖ, ಶಾಂತಿ ದೊರಕುತ್ತದೆ ಎಂದರು.ಹಳದೀಪುರ ಶಾಂತಾಶ್ರಮ ಮಠದ ವಾಮನಾಶ್ರಮ ಶ್ರೀ ಮಾತನಾಡಿ, ಆದಿ ಶಂಕರಾರ್ಚಾಯರು ಒಂದು ಸಮಾಜಕ್ಕೆ, ಜಾತಿಗೆ, ಊರಿಗೆ ಸೀಮಿತರಲ್ಲ. ಇಡೀ ಪ್ರಪಂಚಕ್ಕೆ ಬೇರೂರಿದವರು. ಚಿಂತನೆ, ಧ್ಯಾನ ಮಾಡಬೇಕು. ಪರಮಾತ್ಮ, ಜೀವಾತ್ಮ ಒಂದಾಗಿದ್ದು, ಅದು ತುಂಬ ಜನ್ಮದ ಸಾಧನೆಯ ನಂತರ ಸಿದ್ಧಿಸುತ್ತದೆ. ಇದು ಮನುಷ್ಯ ಜನ್ಮದ ಮುಖ್ಯ ಧ್ಯೇಯ. ಮನುಷ್ಯನಾದವನು ಪ್ರತಿ ವಸ್ತುವನ್ನು ಸದುಪಯೋಗಪಡಿಸಬೇಕು. ಭಗವಂತನ ನಾಮಸ್ಮರಣೆ ಮಾಡಿದಾಗ ನಾಲಿಗೆ ಸಾರ್ಥಕವಾಗುತ್ತದೆ. ಆದರೆ ಇಂದು ಭಗವಂತನ ನಾಮಸ್ಮರಣೆಯಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಹೊರ ಜಗತ್ತಿನ ಬಗ್ಗೆ ಆಸಕ್ತಿ, ಕುತೂಹಲ ಹೆಚ್ಚುತ್ತಿದೆ. ಇದೆಲ್ಲವು ನಿಯಂತ್ರಿಸಬೇಕಾದರೆ ಭಗವಂತನ ನಾಮಸ್ಮರಣೆ, ಒಳ್ಳೆಯ ಕಾರ್ಯ ಮಾಡಲೇಬೇಕು ಎಂದರು.
ನಂತರ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ನೀಡಿದರು. ಪ್ರೊ.ಪಂತಜಲಿ ವೀಣಾಕರ ತತ್ವಜ್ಞಾನಿ ಶಂಕರರ ಕುರಿತು ಮಾತನಾಡಿದರು. ಶಾರದಾಂಬಾ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ರಾಯ ಆರ್. ಮೇಸ್ತ ಸ್ವಾಗತಿಸಿದರು. ಉದ್ಯಮಿ ಯೋಗೇಶ ಮೇಸ್ತ ವಂದಿಸಿದರು. ದಿನೇಶ ಕಾಮತ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ದೈವಜ್ಞ ವಾಹಿನಿ ಅಧ್ಯಕ್ಷ ಸತ್ಯನಾರಾಯಣ ಶೇಟ್, ರಾಮಕ್ಷತ್ರಿಯ ಸಮಾಜದ ಮುಖಂಡ ಎಂ.ಡಿ. ನಾಯ್ಕ. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.