ಶ್ರೀರಂಗಪಟ್ಟಣ ಪಟ್ಟಣದ ತಾಲೂಕು ಕಚೇರಿಗೆ ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಕಚೇರಿಯಲ್ಲಿನ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಲ್ಲದಿರುವುದನ್ನು ಕಂಡು ಅಧಿಕಾರಿಗಳಿಗೆ ಸಾಮೂಹಿಕವಾಗಿ ಛೀಮಾರಿ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಚೇರಿಗೆ ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಕಚೇರಿಯಲ್ಲಿನ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಲ್ಲದಿರುವುದನ್ನು ಕಂಡು ಅಧಿಕಾರಿಗಳಿಗೆ ಸಾಮೂಹಿಕವಾಗಿ ಛೀಮಾರಿ ಹಾಕಿದರು.ತಾಲೂಕು ಕಚೇರಿ ಮುಂಭಾಗ ಸಾರ್ವಜನಿಕ ಸಹಾಯವಾಣಿಗೆ ತಹಸೀಲ್ದಾರ್ ಸಮ್ಮುಖದಲ್ಲೇ ಖುದ್ದು ಕರೆ ಮಾಡಿದ ನಾಗಲಕ್ಷ್ಮಿ ಚೌಧರಿ ಅವರಿಗೆ ಸಹಾಯವಾಣಿ ಅಸ್ಥಿತ್ವದಲ್ಲಿರದಿರುವುದು, ಜೊತೆಗೆ ಕಚೇರಿಯಲ್ಲಿ ವೃದ್ಧರು ಮತ್ತು ವಿಶೇಷ ಚೇತನರಿಗೆ ಕಲ್ಪಿಸಬೇಕಾದ ವೀಲ್ಚೇರ್ ಸೇರಿದಂತೆ ಇತರೆ ಸೌಕರ್ಯಗಳಿಲ್ಲದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ನಂತರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಕುರಿತು ಆಂತರಿಕ ದೂರು ಸಮಿತಿ ಹಾಗೂ ಸಮಿತಿ ಕಾರ್ಯ ನಿರ್ವಹಣೆ ಕುರಿತು ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಲಾಗದ ಮಹಿಳಾ ಸಿಬ್ಬಂದಿ ತಡಬಡಾಯಿಸಿ ಗೊಂದಲಕ್ಕೀಡಾದ ಘಟನೆಯು ನಡೆಯಿತು.ಕಚೇರಿ ಪರಿಶೀಲನೆ ಬಳಿಕ ತಾಲೂಕು ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ವಿಧವೆಯರು, ಗಂಡನಿಂದ ದೂರವಾದ ಮಹಿಳೆಯರು, ವೃದ್ಧರು ಹಾಗೂ ನಿರ್ಗತಿಕರಿಗೆ ಕಲ್ಪಿಸಿಕೊಡುವ ಪ್ರಾಯೋಜಕತ್ವ ಯೋಜನೆ ಕುರಿತು ನಾಗಲಕ್ಷ್ಮಿ ಅವರು ಪ್ರಶ್ನಿಸಿದರು.
ಈ ಯೋಜನೆಯ ಮಾಹಿತಿಯೇ ತಿಳಿದಿಲ್ಲ ಎಂದ ಅಧಿಕಾರಿಯ ಉತ್ತರ ಅಚ್ಚರಿ ತಂದೊಡ್ಡಿತು. ಈ ಯೋಜನೆ ತಿಳಿಯದ ಅಧಿಕಾರಿ ಸಿಬ್ಬಂದಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಯಾವ ರೀತಿ ನ್ಯಾಯ ಸಲ್ಲಿಸುತ್ತೀರಿ ಎಂದು ತಾವೇ ಕೆಲ ಕಾಲ ಪಾಠ ಮಾಡಿದ ಪ್ರಸಂಗವೂ ಸಹ ನಡೆಯಿತು.ತಹಸೀಲ್ದಾರ್ , ಅಧಿಕಾರಿಗೆ ತರಾಟೆ:
ತಾಲೂಕು ಕಚೇರಿ ಅವ್ಯಸ್ಥೆ ಹಾಗೂ ಸಾರ್ವಜನಿಕರಿಗೆ ಕಲ್ಪಿಸಬೇಕಾದ ಸೇವೆಯಲ್ಲಿ ಉಂಟಾಗಿರುವ ಲೋಪದೋಷಗಳ ಕುರಿತು ಆಡಳಿತ ಸಿಬ್ಬಂದಿ ಪರ ವಕಾಲತ್ತು ವಹಿಸಿ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಲು ಮುಂದಾಗುತ್ತಿದ್ದ ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ನಾಗಲಕ್ಷ್ಮಿ ಚೌಧರಿ ತರಾಟೆ ತೆಗೆದುಕೊಂಡರು.ಸಾರ್ವಜನಿಕರು ಹಾಗೂ ಮಹಿಳೆಯರಿಗೆ ಮೂಲ ಸೌಕರ್ಯ ಕಲ್ಪಿಸಲಾಗದ ಈ ತಾಲೂಕು ಕಚೇರಿಯನ್ನು ಬಂದ್ ಮಾಡುವುದು ಸೂಕ್ತ. ಆಡಳಿತಾತ್ಮಕ ವಿಚಾರದಲ್ಲಿ ಕನಿಷ್ಠ ಮಾಹಿತಿ ಹಾಗೂ ಮಾನವೀಯತೆ ನಡೆ ಹೊಂದದಿರುವುದು ಬೇಸರ ತರಿಸಿದೆ ಎಂದು ಕಿಡಿಕಾರಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಹಲವು ವರ್ಷಗಳಿಂದ ಸ್ವಚ್ಛತಾ ಕಾರ್ಯನಿರ್ವಹಿಸುವ ಪೌರ ಮಹಿಳೆ ಶಂಕರಮ್ಮ ಎಂಬುವವರನ್ನು ಮಹಿಳಾ ಆಯೋಗದ ಅಧ್ಯಕ್ಷೆ ಖುದ್ಧು ಭೇಟಿ ಮಾಡಿ ಆಕೆಯ ದಯನೀಯ ಸ್ಥಿತಿಗೆ ಕೈ ಹಿಡಿದು ಆತ್ಮಸ್ಥೈರ್ಯ ತುಂಬುವ ಮೂಲಕ ಆಕೆ ಪರ ಧನಿ ಎತ್ತಿದರು.ಶೌಚಾಲಯ ಸ್ವಚ್ಛಗೊಳಿಸುವ ಆಕೆಗೆ ವಿವಿಧ ಇಲಾಖೆಯಿಂದ ಚಂದ ಎತ್ತಿ, ಮಾಸಿಕ ನಾಲ್ಕು ಸಾವಿರ ರು. ನೀಡುತ್ತಿರುವ ವಿಚಾರ ತಿಳಿದು ಈ ಸಂಬಂಧ ಸ್ಥಳದಲ್ಲೇ ಇದ್ದ ತಹಸೀಲ್ದಾರ್ ಚೇತನಾ ಯಾದವ್ ಅವರನ್ನು ಪ್ರಶ್ನಿಸಿದ್ದರು.
ವೇತನ ಹಾಗೂ ಅವರಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ನಮಗೆ ತಿಳಿದಿಲ್ಲ. ಏಜೆನ್ಸಿ ಮೂಲಕ ಹಣ ನೀಡಲಾಗುತ್ತಿದೆ ಎಂಬ ತತ್ಸಾರದ ಉತ್ತರಕ್ಕೆ ಸಿಡಿಮಿಡಿಗೊಂಡರು. ಬಿಕ್ಷೆ ಹಣ ನಿಲ್ಲಿಸಿ ಪೌರ ಮಹಿಳೆ ಕರ್ತವ್ಯ ಪರಿಗಣಿಸಿ ನ್ಯಾಯಯುತ ವೇತನ ನೀಡಬೇಕಿರುವುದು ತಾಲೂಕು ಆಡಳಿತದ ಜವಾಬ್ದಾರಿ ಎಂದರು.ನಂತರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಸತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಮತ್ತು ಪರಿಸ್ಥಿತಿ ಕುರಿತಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೇ, ತಾಲೂಕು ಕಚೇರಿ ಮೇಲ್ಮಹಡಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯನ್ನು ವೃದ್ಧರು, ವಿಶೇಷಚೇತನರು ಹಾಗೂ ರೋಗಿಗಳ ಅನುಕೂಲತೆಗಾಗಿ ಕೆಳ ಭಾಗಕ್ಕೆ ವರ್ಗಾವಣೆಗೊಳಿಸಿ ವೀಲ್ಚೇರ್ ಕಲ್ಪಿಸಬೇಕು ಎಂದು ಸೂಚಿಸಿದರು.
ತಾಲೂಕು ಆಡಳಿತಾತ್ಮಕ ವಿಷಯಗಳ ಕುರಿತು ಅಧಿಕಾರಿ, ಸಿಬ್ಬಂದಿ ಕನಿಷ್ಠ ಜ್ಞಾನವು ಹೊಂದದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಾಲೂಕು ಕಚೇರಿಯಲ್ಲಿನ ಅವ್ಯವಸ್ಥೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ವರದಿ ನೀಡಲಾಗುವುದು ಎಂದರು.