ಆನೂರಿನಲ್ಲಿ ಅವ್ಯವಸ್ಥೆ ಕಂಡು ತಾಪಂ ಇಒ ಗರಂ

| Published : Aug 23 2024, 01:03 AM IST

ಸಾರಾಂಶ

ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲಿ ನೈರ್ಮಲ್ಯ ಸಮಸ್ಯೆಯಿಂದ ಗ್ರಾಮಸ್ಥರು ರೋಸಿ ಹೋಗಿದ್ದು ಗುರುವಾರ ತಾ.ಪಂ. ಇಒ ವೀರಣ್ಣ ಕವಲಗಿ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಬಡಾವಣೆಗಳಲ್ಲಿ ಕಾಲ್ನಡಿಗೆಯ ಮೂಲಕ ಸಂಚರಿಸಿ ವಿಕ್ಷಣೆ ಮಾಡಿ ಅವ್ಯವಸ್ಥೆ ಕಂಡು ಗರಂ ಆದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲಿ ನೈರ್ಮಲ್ಯ ಸಮಸ್ಯೆಯಿಂದ ಗ್ರಾಮಸ್ಥರು ರೋಸಿ ಹೋಗಿದ್ದು ಗುರುವಾರ ತಾ.ಪಂ. ಇಒ ವೀರಣ್ಣ ಕವಲಗಿ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಬಡಾವಣೆಗಳಲ್ಲಿ ಕಾಲ್ನಡಿಗೆಯ ಮೂಲಕ ಸಂಚರಿಸಿ ವಿಕ್ಷಣೆ ಮಾಡಿ ಅವ್ಯವಸ್ಥೆ ಕಂಡು ಗರಂ ಆದ ಘಟನೆ ನಡೆಯಿತು.

ಬಳಿಕ ಮಾತನಾಡಿದ ಅವರು ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಇದೆ, ಪಿಡಿಒ ಚುನಾಯಿತ ಜನಪ್ರತಿನಿಧಿಗಳು ಏನು ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ. ಪಂಚಾಯಿತಿಯಲ್ಲಿ ಅನುದಾನ ಇದೆಯೋ ಇಲ್ಲವೋ? ಎರಡು ದಿನ ಸಮಯಾವಕಾಶದೊಳಗೆ ಗ್ರಾಮದಲ್ಲಿನ ನೈರ್ಮಲ್ಯ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ನಾನೇ ಖುದ್ದಾಗಿ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ತಾಕೀತು ಮಾಡಿದರು.

ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸರಿಯಾದ ಚರಂಡಿಗಳಿಲ್ಲದ್ದಕ್ಕೆ ಚರಂಡಿ ನೀರು ಮುಖ್ಯ ರಸ್ತೆಗಳ ಮೇಲೆ ನಿಂತು ದುರ್ನಾತ ಬೀರುತ್ತಿದೆಯಲ್ಲದೆ ಸಾಂಕ್ರಾಮಿಕ ರೋಗದ ತಾಣಗಳಾಗಿ ಮಾರ್ಪಾಟಾಗಿವೆ. ಖಾಲಿ ಜಾಗಗಳಲ್ಲಿ ಜಾಲಿ ಕಂಟಿ ಬೆಳೆದು ಹುಳ ಹುಪ್ಪಟೆಗಳ ತಾಣವಾಗಳಾಗಿವೆ. ಮನೆ ಬಾಗಿಲ ಬಳಿಯೇ ಚರಂಡಿ ನೀರು ನಿಂತು ಸಮಸ್ಯೆ ಆಗುತ್ತಿದೆ. ವೃದ್ದರು, ಶಾಲಾ ಮಕ್ಕಳು ಇದೇ ಚರಂಡಿ ನೀರಲ್ಲಿ ನಡೆದುಕೊಂಡು ಹೋಗುವಂತಾಗಿದೆ. ಇದರಿಂದ ಗ್ರಾಮದಲ್ಲಿ ಸಾಕಷ್ಟು ಜನರಿಗೆ ಟೈಫಾಯ್ಡ್, ಜ್ವರ, ಮೈಕೈ ನೋವು ಸೇರಿ ಹಲವು ಖಾಯಿಲೆಗಳು ಕಾಣಿಸುತ್ತಿವೆ. ವಿಶೇಷವಾಗಿ ಗ್ರಾಮದ ದಲಿತ ಕಾಲೋನಿಯಲ್ಲಂತು ಸಾಕಷ್ಟು ನೈರ್ಮಲ್ಯ ಸಮಸ್ಯೆ ಕಾಡುತ್ತಿದ್ದು ಯಾರೊಬ್ಬರು ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡುತ್ತಿಲ್ಲವೆಂದು ತಾ.ಪಂ ಇಒ ಅವರ ಮುಂದೆ ಗ್ರಾಮಸ್ಥರು ಅಳಲು ತೋಡಿಕೊಂಡರು.

ಪಿಡಿಒ ಚಿದಾನಂದ ಆಲೇಗಾಂವ್ ಅವರನ್ನು ತರಾಟೆಗೆ ತೆಗೆದುಕೊಂಡ ಇಒ ವೀರಣ್ಣ ಕವಲಗಿ 2 ದಿನದೊಳಗೆ ಗ್ರಾಮದಲ್ಲಿ ನೈರ್ಮಲ್ಯ ಸಮಸ್ಯೆಗೆ ಪರಿಹಾರ ಕಲ್ಪಿಸಿ ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ದರಾಗಿ ಎಂದು ಗಡುವು ನೀಡಿದ ಅವರು ಗ್ರಾಮಸ್ಥರು ಕೂಡ ಪಂಚಾಯಿತಿಯಿಂದ ನಡೆಯುವ ಅಭಿವೃದ್ದಿ ಕೆಲಸಗಳಿಗೆ ಸಹಕಾರ ನೀಡಿದರೆ ಗ್ರಾಮದಲ್ಲಿ ನೈರ್ಮಲ್ಯ ಸಮಸ್ಯೆ ಬರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ ಸೇರಿದಂತೆ ಗ್ರಾಮಸ್ಥರು ಇದ್ದರು.