ಸಾರಾಂಶ
ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ವಾಡಿಯಲ್ಲಿ ಆಯೋಜಿಸಲಾಗಿದ್ದ ಶ್ರೀರಾಮದೇವರ ಭವ್ಯ ಶೋಭಾಯಾತ್ರೆಯಲ್ಲಿ ಗದ್ದಲ ಉಂಟಾಗಿದ್ದರಿಂದ ವಾಡಿ ಪಟ್ಟಣ ಉದ್ವಿಗ್ನವಾಗಿದೆ, ಪೊಲೀಸರು ಶಾಂತಿ- ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಕಲಬುರಗಿ
ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ವಾಡಿಯಲ್ಲಿ ಆಯೋಜಿಸಲಾಗಿದ್ದ ಶ್ರೀರಾಮದೇವರ ಭವ್ಯ ಶೋಭಾಯಾತ್ರೆಯಲ್ಲಿ ಗದ್ದಲ ಉಂಟಾಗಿದ್ದರಿಂದ ವಾಡಿ ಪಟ್ಟಣ ಉದ್ವಿಗ್ನವಾಗಿದೆ, ಪೊಲೀಸರು ಶಾಂತಿ- ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರೋದರಿಂದ ಮಳಿಗೆ- ಮುಂಗಟ್ಟುಗಳು ತೆರೆದುಕೊಂಡಿಲ್ಲ, ಜನ ಭಯದಲ್ಲಿಯೇ ದಿನಚರಿ ಆರಂಭಿಸಿದ್ದಾರೆ. ಶಾಲೆಗಳು ಎಂದಿನಂತೆ ನಡೆದಿವೆಯಾದರೂ ಕೆಲವು ಖಾಸಗಿ ಶಾಲೆಗಳವರು ಸ್ವಯಂಪ್ರೇರಿತರಾಗಿ ರಜೆ ಘೋಷಿಸಿದ್ದಾರೆ.
ನಿಷೇಧಾಜ್ಞೆಯಂತೆ ಜ.23ರ ಮಧ್ಯರಾತ್ರಿಯಿಂದ ಜ.25ರ ಮಧ್ಯರಾತ್ರಿ 12ರ ವರೆಗೂ ವಾಡಿ ಪಟ್ಟಣ ವ್ಯಾಪ್ತಿಯ ಎಲ್ಲಾ ತರಹದ ಮದ್ಯ ಮಾರಾಟ, ಮದ್ಯಪಾನ, ಸಾರಾಯಿ, ಸೇಂದಿ ಸೇರಿದಂತೆ ಎಲ್ಲಾ ತರಹದ ಮದ್ಯಪಾಪಾನ, ಮಾರಾಟ ನಿಷೇಧಿಸಲಾಗಿದೆ. ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಇದಕ್ಕೂ ಮೊದಲು ಜ.22ರಂದು ಮತ್ರ ಈ ಆದೇಶ ಅನ್ವಯವಿತ್ತು. ಇದೀಗ ಎಸ್ಪಿ ಅಡ್ಡೂರು ಶ್ರೀನಿವಾಸುಲು ಅವನ ಕೋರಿಕೆಯಂತೆ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ವಿಸ್ತರಿಸಿದ್ದಾರೆ.ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಂದರ್ಭವನ್ನು ವಿಜಯೋತ್ಸವವನ್ನಾಗಿ ಆಚರಿಸುವ ಕುರಿತು ಇಲ್ಲಿನ ಬಿಜೆಪಿ ಪಕ್ಷದವರು ಪೊಲೀಸರಿಗೆ ಪರವಾನಿಗೆ ಕೇಳಿದ್ದರು. ಇದಕ್ಕೆ ಪೊಲೀಸರು ಪರವಾನಿಗೆ ನೀಡಲು ನಿಕರಾಕರಿಸಿದ್ದರು.
ಡಿಜೆ, ಡಾಲ್ಬಿಯಂತಹ ಕಿವಿಗಳಿಗೆ, ರೋಗಿಗಳಿಗೆ ಕರ್ಕಶವಾಗಿರುವ ಧ್ವನಿಗಳನ್ನು ಬಳಸೋದಿಲ್ಲವೆಂದೂ ಹೇಳಿದ್ದರೂ ಪೊಲೀಸರು ಮೆರವಣಿಗೆಗೆ ಆವಕಾಶ ನೀಡರಿಲ್ಲ.ಏತನ್ಮಧ್ಯೆ ವಾಡಿಗೆ ಸಂಸದ ಉಮೇಶ ಜಾಧವ್ ಭೇಟಿ ನೀಡಿ ಮೆರವಣಿಗೆಕಾರರೊಂದಿಗೆ ಸೇರಿಕೊಂಡು ಅವಕಾಶ ಕೊಡುವಂತೆ ಪೊಲೀಸರಿಗೆ ಕೋರಿದ್ದರೂ ಸಹ ಪೊಲೀಸರು ಸಂಸದರ ಮನವಿಗೆ, ಸೂಚನೆಗೂ ಜಗ್ಗಿರಲಿಲ್ಲ.