ಪ್ರಾರ್ಥನಾ ಮಂದಿರ ನವೀಕರಣ ವಿಷಯ: ವಿಪಕ್ಷದಿಂದ ಸಭಾತ್ಯಾಗ

| Published : Oct 01 2024, 01:30 AM IST

ಪ್ರಾರ್ಥನಾ ಮಂದಿರ ನವೀಕರಣ ವಿಷಯ: ವಿಪಕ್ಷದಿಂದ ಸಭಾತ್ಯಾಗ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾರ್ಥನಾ ಮಂದಿರ ನವೀಕರಣದ ವಿಷಯವನ್ನು ಹೆಚ್ಚುವರಿ ವಿಷಯ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಆರೋಪಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಸಭಾತ್ಯಾಗ ಮಾಡಿದರು.

ಹುಬ್ಬಳ್ಳಿ: ಪ್ರಾರ್ಥನಾ ಮಂದಿರ ನವೀಕರಣದ ವಿಷಯವನ್ನು ಹೆಚ್ಚುವರಿ ವಿಷಯ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಆರೋಪಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಸಭಾತ್ಯಾಗ ಮಾಡಿದರು. ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು ಪರಸ್ಪರ ಸೆಡ್ಡು ಹೊಡೆಯುವ ಸನ್ನೆ ಕೂಡ ಮಾಡಿದರು.

ಆಗಿದ್ದೇನು?:

ಇಲ್ಲಿನ ಪೆಂಡಾರ್‌ ಗಲ್ಲಿಯಲ್ಲಿರುವ ಪ್ರಾರ್ಥನಾ ಮಂದಿರವನ್ನು ನವೀಕರಿಸಬೇಕು ಎಂಬುದು ವಿರೋಧ ಪಕ್ಷವಾದ ಕಾಂಗ್ರೆಸ್‌ನ ಬೇಡಿಕೆಯಾಗಿತ್ತು. ಈ ಸಂಬಂಧ ಈಗಾಗಲೇ ಪ್ರಸ್ತಾವನೆಯನ್ನೂ ಪಾಲಿಕೆಗೆ ಕಾಂಗ್ರೆಸ್‌ ಸಲ್ಲಿಸಿತ್ತು. ಅದನ್ನು ನಗರ ಯೋಜನಾ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು. ಅಲ್ಲಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ಎಷ್ಟು ಅರ್ಜಿ ಪರವಾಗಿ ಬಂದಿವೆ, ಎಷ್ಟು ವಿರೋಧವಾಗಿ ಬಂದಿವೆ ಎಂಬುದನ್ನು ಪರಿಶೀಲಿಸಿ ಸ್ಥಾಯಿ ಸಮಿತಿ ಕಾನೂನು ಸಲಹೆ ಪಡೆಯಲು ಲೀಗಲ್‌ ಸೆಲ್‌ಗೆ ಕಳುಹಿಸಿದೆ. ಲೀಗಲ್‌ ಸೆಲ್‌ನಿಂದ ಈ ವರೆಗೂ ಕಮಿಟಿಗೆ ವಾಪಸ್‌ ಬಂದಿಲ್ಲ. ಅಲ್ಲಿಂದ ಬಂದ ಬಳಿಕ ಸಭೆಗೆ ತರಲಾಗುವುದು ಎಂಬುದು ಮೇಯರ್‌ ವಿವರಣೆ.

ಆದರೆ ಎಷ್ಟೋ ವಿಷಯಗಳನ್ನು ಸಮಿತಿಗಳ ಗಮನಕ್ಕೆ ತಾರದೇ ನೇರವಾಗಿ ಹೆಚ್ಚಿನ ವಿಷಯ ಪಟ್ಟಿಯಲ್ಲಿ ಸೇರಿಸಿದ್ದೀರಿ. ಇದನ್ನು ಅದೇ ರೀತಿ ಮಾಡಿ ಎಂದು ವಿರೋಧ ಪಕ್ಷದ ಸದಸ್ಯರು ಆಗ್ರಹಿಸಿದರು.

ಅದಕ್ಕೆ ಮೇಯರ್‌ ರಾಮಣ್ಣ ಬಡಿಗೇರ, ಉಳಿದವು ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳಾಗಿರುವುದರಿಂದ ಸೇರಿಸಲಾಗಿದೆ. ಆದರೆ ಇದನ್ನು ವಿರೋಧಿಸಿ ಕೆಲ ಅರ್ಜಿ ಬಂದಿವೆ. ಹೀಗಾಗಿ, ಕಾನೂನು ಸಲಹೆ ಪಡೆದ ಬಳಿಕ ಕಮಿಟಿ ತಿಳಿಸುತ್ತದೆ. ಆ ಬಳಿಕವೇ ಸಾಮಾನ್ಯ ಸಭೆ ವಿಷಯ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ವಾಗ್ವಾದ

ಇದಕ್ಕೆ ರೊಚ್ಚಿಗೆದ್ದ ವಿರೋಧ ಪಕ್ಷದ ದೊರಾಜ್‌ ಮಣಿಕುಂಟ್ಲಾ, ಆರೀಫ್‌ ಭದ್ರಾಪುರ ಸೇರಿದಂತೆ ಹಲವರು ಮೇಯರ್‌ ಟೇಬಲ್‌ ಬಳಿಯೇ ತೆರಳಿ ವಾಗ್ವಾದಕ್ಕಿಳಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದರು. ಪರಸ್ಪರ ಆರೋಪ - ಪ್ರತ್ಯಾರೋಪ ಜೋರಾಯಿತು. ಈ ವೇಳೆ ಪರಸ್ಪರ ಸೆಡ್ಡು ಹೊಡೆದಂತೆ ಎರಡು ಪಕ್ಷಗಳು ಕೈ ಸನ್ನೆ ಕೂಡ ಮಾಡಿದರು. ಬಳಿಕ ಕಾಂಗ್ರೆಸ್‌ ಸದಸ್ಯರೆಲ್ಲರೂ ಅಲ್ಲಿಂದ ಹೊರನಡೆದರು.

ತದನಂತರ ಆಡಳಿತ ಪಕ್ಷದ ಸದಸ್ಯರು ಹಾಗೂ ಎಐಎಂಐಎಂನ ನಜೀರ್‌ ಹೊನ್ಯಾಳ ಮಾತ್ರ ಸಭೆಯಲ್ಲಿ ಪಾಲ್ಗೊಂಡರು. ಎಲ್ಲ ವಿಷಯಗಳನ್ನು ಪಾಸ್‌ ಮಾಡಿಕೊಂಡು ಸಭೆಯನ್ನು ಮೊಟಕುಗೊಳಿಸಲಾಯಿತು.

ಸಭಾತ್ಯಾಗ

ಪೆಂಡಾರಗಲ್ಲಿಯಲ್ಲಿನ ಪ್ರಾರ್ಥನಾ ಮಂದಿರ ನಿರ್ಮಾಣ ಕುರಿತಂತೆ ವಿಷಯ ಪಟ್ಟಿಯಲ್ಲಿ ಸೇರಿಸಿ ಎಂಬ ಬೇಡಿಕೆ ಇಟ್ಟಿದ್ದರು. ನಗರ ಯೋಜನಾ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿಯಿಂದ ಬಂದ ಬಳಿಕ ಸಾಮಾನ್ಯಸಭೆಗೆ ಸೇರಿಸುವುದಾಗಿ ತಿಳಿಸಿದೆ. ಆದರೆ ಅವರು ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು.

ರಾಮಣ್ಣ ಬಡಿಗೇರ್‌, ಮೇಯರ್‌