ಸಂಶೋಧನೆ ನೆಪದಲ್ಲಿ ಬಸವ ಮಂಟಪ ಕೃತಿ ರಚಿಸಿ ರವಿ ಹಂಜ್‌ ಅವರು ವಿಶ್ವಮಾನ್ಯ ಬಸವಣ್ಣನವರ ತೇಜೋವಧೆ ಮಾಡಿದ್ದಾರೆ. ಇದು ಖಂಡನೀಯ. ಈ ಕೃತಿಯನ್ನು ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿ ನಿಷೇಧಿಸಬೇಕು.

ಹುಬ್ಬಳ್ಳಿ:

ಸಂಶೋಧನೆ ನೆಪದಲ್ಲಿ ಬಸವ ಮಂಟಪ ಕೃತಿ ರಚಿಸಿ ರವಿ ಹಂಜ್‌ ಅವರು ವಿಶ್ವಮಾನ್ಯ ಬಸವಣ್ಣನವರ ತೇಜೋವಧೆ ಮಾಡಿದ್ದಾರೆ. ಇದು ಖಂಡನೀಯ. ಈ ಕೃತಿಯನ್ನು ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿ ನಿಷೇಧಿಸಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಗ್ರಹಿಸಿದರು. ಅಲ್ಲದೇ, ಜಾಗತಿಕ ಲಿಂಗಾಯತ ಸಮಾಜ ಸೇರಿದಂತೆ ಈ ನಿಟ್ಟಿನಲ್ಲಿ ಯಾರೇ ಹೋರಾಟ ನಡೆಸಿದರೂ ಅದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, 850 ವರ್ಷಗಳ ಹಿಂದೆಯೇ ಸಂವಿಧಾನದ ಆಶಯ ತುಂಬಿದ ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂದು ಜಗತ್ತಿಗೆ ಹೇಗಿರಬೇಕು ಎಂಬ ಸಂದೇಶವನ್ನು ಸಾರಿದ್ದಾರೆ. ಅಂಥ ಮಹನೀಯರ ಕುರಿತು ಹೀಗೆ ಚಾರಿತ್ಯ್ರ ವಧೆ ಸಲ್ಲದು. ಇದನ್ನು ತಾವು ಸಹಿಸಲ್ಲ ಎಂದು ಗುಡುಗಿದರು.

ರವಿ ಹಂಜ್‌ ಅವರು ಕೆಲವೊಂದು ಕಾವ್ಯಗಳನ್ನು ಉಲ್ಲೇಖಿಸಿ ಬಸವಣ್ಣನವರ ವಿರುದ್ಧ ಅವಹೇಳನ ಮಾಡಿದ್ದಾರೆ. ಆದರೆ, ಈ ಕಾವ್ಯಗಳು ರಚನೆಯಾಗಿದ್ದ ಬಸವಣ್ಣನವರ ಸಮಕಾಲೀನದಲ್ಲಿ ಅಲ್ಲ. 300 ವರ್ಷಗಳ ಹಿಂದೆ ರಚಿಸಲಾಗಿದ್ದ ಕಾವ್ಯ ಉಲ್ಲೇಖಿಸಿ ಚಾರಿತ್ರ್ಯ ವಧೆ ಮಾಡುವುದು ಸಲ್ಲದು ಎಂದರು.

ರವಿ ಹಂಜ್‌ ಬಸವಣ್ಣವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಆದರೆ, ಯಾರು ಎಷ್ಟೇ ಪ್ರಯತ್ನ ಪಟ್ಟರೂ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ಬರುವುದಿಲ್ಲ. ಆದರೆ, ಇಂಥ ಕೀಳು ಅಭಿರುಚಿಯ ಕೃತಿ ರಚಿಸಿದ್ದು ಖಂಡನೀಯ. ಬರೀ ಬಂಧನವಾದರಷ್ಟೇ ಸಾಲದು. ಲೇಖಕರಿಗೆ ತಕ್ಕ ಶಿಕ್ಷೆಯಾಗಬೇಕು. ಅಂದಾಗ ಮಾತ್ರ ಮುಂದೆ ಇಂಥ ಕೃತಿ ಬರುವುದು ತಪ್ಪುತ್ತದೆ ಎಂದು ಕಿಡಿಕಾರಿದರು.

ಈ ವಿಚಾರವಾಗಿ ಹಲವು ಮಠಾಧೀಶರು ತಮಗೆ ಕರೆ ಮಾಡಿ ಮಾತನಾಡಿದ್ದು ಎಲ್ಲ ಕಾವಿಧಾರಿಗಳು ಕೃತಿಯನ್ನು ಖಂಡಿಸಿದ್ದಾರೆ ಎಂದರು. ಕೃತಿಯಲ್ಲಿ ತಮ್ಮ ಮಠದ ಬಗ್ಗೆಯೂ ಉಲ್ಲೇಖವಿದೆಯಂತೆ ಎಂಬ ಪ್ರಶ್ನೆಗೆ, ಕೃತಿಯನ್ನು ಮುಟ್ಟುಗೋಲು ಹಾಕಿದ ಕಾರಣ ನಮಗೆ ಸಿಕ್ಕಿಲ್ಲ. ಹೀಗಾಗಿ ನಾವು ಓದಿಲ್ಲ. ಕೃತಿ ಓದಿದ ಬಳಿಕ ಈ ಪ್ರಶ್ನೆಗೆ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.

ಹೋರಾಟ ನಡೆಸಿದರೆ ಬೆಂಬಲ:

ಜಾಗತಿಕ ಲಿಂಗಾಯತ ಸಮಾಜ ಈ ಕುರಿತು ಹೋರಾಟ ನಡೆಸಲಿದೆಯಂತೆ ಎಂಬ ಪ್ರಶ್ನೆಗೆ, ಯಾರೇ ಪ್ರತಿಭಟನೆ ನಡೆಸಿದರೂ ಅದಕ್ಕೆ ತಮ್ಮ ಬೆಂಬಲ ಇದ್ದೇ ಇರುತ್ತದೆ. ಲೋಕಮಾನ್ಯ ಬಸವಣ್ಣನವರ ತೇಜೋವಧೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

ಧಾರ್ಮಿಕ ಭಾವನೆ, ದೇವತೆಗಳ ವಿಚಾರದಲ್ಲೂ ಯಾರೂ ಅಪಮಾನ ಮಾಡಬಾರದು, ಲಿಂಗಾಯತ-ವೀರಶೈವ ವಿಚಾರವಾಗಿ ಸಮುದಾಯ ಒಡೆಯುವ ಯತ್ನ ಸರಿಯಲ್ಲ, ಕಾನೂನು ಹೋರಾಟದಲ್ಲಿ ಕೋರ್ಟ್ ಸತ್ಯ ಹೇಳುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳಿದ್ದರು.