ಸಾರಾಂಶ
ಹೆಚ್ಚಿನ ಬಡ್ಡಿ ವಸೂಲಿ ಮಾಡಲು ಗ್ರಾಹಕರಿಗೆ ಹೆಚ್ಚಿನ ಹಣ ನೀಡುವುದಾಗಿ ಆಮಿಷ ಒಡ್ಡುತ್ತ ಗ್ರಾಹಕರನ್ನು ವಂಚಿಸುತ್ತಿದೆ. ಆರ್‌ಬಿಐ ವಿಧಿಸುವ ಬಡ್ಡಿ ದರವನ್ನು ನಿಗದಿಪಡಿಸಬೇಕು. ನಿಮಗೆ ಇಷ್ಟ ಬಂದಂತೆ ದರ ನೀಡಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಅಡಮಾನವಿಟ್ಟುಕೊಂಡಿರುವ ಒಡವೆಗಳ ಮೇಲೆ ಅಧಿಕ ಪ್ರಮಾಣದ ಬಡ್ಡಿ ವಿಧಿಸಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಕೋಶಮಟ್ಟಂ ಫೈನಾನ್ಸ್ ಶಾಖೆಗೆ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ಶಾಖೆ ಬಳಿ ಆಗಮಿಸಿದ ರೈತರು, ರೈತನ ಬಳಿ ಅಧಿಕ ಪ್ರಮಾಣದಲ್ಲಿ ಬಡ್ಡಿ ವಸೂಲಿ ಹಾಗೂ ಅವಧಿಗೂ ಮುಂಚೆ ಒಡವೆಗಳ ಹರಾಜು ಪ್ರಕ್ರಿಯೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಫೈನಾನ್ಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ ಮಾತನಾಡಿ, ಮಧ್ಯಮ ವರ್ಗದ ರೈತರ ಒಡವೆಗಳ ಮೇಲೆ ಅಧಿಕ ಪ್ರಮಾಣದ ಬಡ್ಡಿ ವಿಧಿಸುವುದು ಹಾಗೂ ಬಡ್ಡಿಗೆ ಚಕ್ರ ಬಡ್ಡಿ ಹಾಕಿ ಹಾಗೂ ದೂರವಾಣಿ ಕರೆ ಮೂಲಕ ಕಿರುಕುಳ ನೀಡುತ್ತಿರುವ ಕ್ರಮವನ್ನು ಖಂಡಿಸಿದರು.ಹೆಚ್ಚಿನ ಬಡ್ಡಿ ವಸೂಲಿ ಮಾಡಲು ಗ್ರಾಹಕರಿಗೆ ಹೆಚ್ಚಿನ ಹಣ ನೀಡುವುದಾಗಿ ಆಮಿಷ ಒಡ್ಡುತ್ತ ಗ್ರಾಹಕರನ್ನು ವಂಚಿಸುತ್ತಿದೆ. ಆರ್‌ಬಿಐ ವಿಧಿಸುವ ಬಡ್ಡಿ ದರವನ್ನು ನಿಗದಿಪಡಿಸಬೇಕು. ನಿಮಗೆ ಇಷ್ಟ ಬಂದಂತೆ ದರ ನೀಡಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಚು ಹಣ ನೀಡುವ ಆಮಿಷ ಒಡ್ಡಿ ನಂತರ ಇಷ್ಟ ಬಂದಂತೆ ಬಡ್ಡಿ ವಸೂಲಿಗೆ ಇಳಿದಿರುವ ಫೈನಾನ್ಸ್ ಕಂಪನಿ ಕ್ರಮವನ್ನು ಖಂಡಿಸಿ ಶಾಖಾ ವ್ಯವಸ್ಥಾಪಕ ಓಹನ್ ಎದುರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಸೊ.ಸಿ. ಪ್ರಕಾಶ್, ರಾಮಲಿಂಗೇಗೌಡ, ತಾಲೂಕು ಘಟಕದ ಅಧ್ಯಕ್ಷ ಪ್ರಭುಲಿಂಗ, ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ರೈತ ಮುಖಂಡರಾದ ವೆಂಕಟೇಶ್, ಅಣ್ಣೂರು ಸಿದ್ದೇಗೌಡ, ಕುದುರೆಗುಂಡಿ ನಾಗರಾಜು, ಬೊಪ್ಪಸಮುದ್ರ ಮಲ್ಲೇಶ್ , ಮೋಹನ್, ವಿನಯ್ ಸೇರಿದಂತೆ ಹಲವರು ಭಾಗವಹಿಸಿದ್ದರು.