ಹಾವೇರಿ ತಾಲೂಕಿನ ಸುಕ್ಷೇತ್ರ ಕನವಳ್ಳಿ ಗ್ರಾಮದಲ್ಲಿ ಶ್ರೀ ಪಾರ್ವತಿ ಪರಮೇಶ್ವರರ ಮಹಾ ರಥೋತ್ಸವವು ದವನದ ಹುಣ್ಣಿಮೆ ಮರು ದಿನವಾದ ಶುಕ್ರವಾರ ನಸುಕಿನಜಾವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಹಾವೇರಿ: ತಾಲೂಕಿನ ಸುಕ್ಷೇತ್ರ ಕನವಳ್ಳಿ ಗ್ರಾಮದಲ್ಲಿ ಶ್ರೀ ಪಾರ್ವತಿ ಪರಮೇಶ್ವರರ ಮಹಾ ರಥೋತ್ಸವವು ದವನದ ಹುಣ್ಣಿಮೆ ಮರು ದಿನವಾದ ಶುಕ್ರವಾರ ನಸುಕಿನಜಾವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಪ್ರತಿ ವರ್ಷದ ಪದ್ಧತಿಯಂತೆ ನಸುಕಿನ 5.30ರ ಸುಮಾರಿಗೆ ಶ್ರೀ ಪಾರ್ವತಿ ಪರಮೇಶ್ವರ ದೇವರ ಮಹಾ ರಥೋತ್ಸವವು ಡೊಳ್ಳು ವಾದ್ಯ, ಸಮ್ಮಾಳ ಕಲಾ ತಂಡ, ಝಾಂಜ್ ಮೇಳ, ಭಜನೆ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ನಡೆಯಿತು.
ದೇವಸ್ಥಾನದ ಆವರಣದಿಂದ ಸ್ವಲ್ಪ ದೂರದಲ್ಲಿರುವ ಬಸವೇಶ್ವರ ದೇವಸ್ಥಾನದವರೆಗೆ ಚಲಿಸಿ ಮೂಲ ಸ್ಥಳಕ್ಕೆ ವಾಪಸ್ಸಾಯಿತು. ನೆರೆದಿದ್ದ ಭಕ್ತ ಸಮೂಹ "ಹರ, ಹರ ಮಹಾದೇವ " ಎಂಬ ಜಯಘೋಷಣೆ ಮೊಳಗಿಸಿದರು. ಮಹಾರಥೋತ್ಸವದ ಕಳಸಕ್ಕೆ ಭಕ್ತರು ಬಾಳೆ ಹಣ್ಣು, ಉತ್ತತ್ತಿ, ಬೆಲ್ಲವನ್ನು ಎಸೆದು ಭಕ್ತಿ ಭಾವವನ್ನು ಸಮರ್ಪಣೆ ಮಾಡಿದರು. ಬಳಿಕ ದೇವಸ್ಥಾನದ ಆವರಣದಲ್ಲಿ ಸಮ್ಮಾಳ ಕಲಾ ತಂಡದ ಪುರವಂತರಿಂದ ಪಾರ್ವತಿ ಪರಮೇಶ್ವರರ ಕುರಿತು ಒಡಪುಗಳನ್ನು ಪ್ರಸ್ತುತ ಪಡಿಸಲಾಯಿತು. ರಥೋತ್ಸವ ಮುಗಿದ ಬಳಿಕ ಇಷ್ಟಾರ್ಥ ಸಿದ್ದಿಗಾಗಿ ಬೇಡಿಕೊಂಡ ಭಕ್ತರು ಹರಕೆಯನ್ನು ತೀರಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಹಣ್ಣುö, ಕಾಯಿ ನೈವೇದ್ಯ ಸಮರ್ಪಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಓಕುಳಿ ಕಾರ್ಯಕ್ರಮ ನಡೆಯಿತು. ದಿನವಿಡಿ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಹನುಮನಹಳ್ಳಿ, ಶಿಬಾರ, ಭರಡಿ, ಕೂರಗುಂದ, ಬಸಾಪೂರ, ಬೂದಗಟ್ಟಿ, ಕಾಟೇನಹಳ್ಳಿ, ಕಲ್ಲೆದೇವರ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.